ವಿಜಯಪುರ: ಕನ್ನಡ ಪರ ಸಂಘಟನೆಗಳು, ನಾಯಕರು ರೋಲ್ ಕಾಲ್ ಮಾಡುವವರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದರು. ಇದನ್ನು ಖಂಡಿಸಿ ಮಂಗಳವಾರ ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ ಹಾಕಲು ವಿಜಯಪುರ ನಗರಕ್ಕೆ ಬರುತ್ತಿದ್ದ ವಾಟಾಳ್ ನಾಗರಾಜ, ಸಾ.ರಾ.ಗೋವಿಂದ ಅವರನ್ನು ಜಿಲ್ಲೆಯ ಗಡಿ ಪ್ರವೇಶಿಸುತ್ತಲೇ ಆಲಮಟ್ಟಿ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಲಮಟ್ಟಿಯ ಯಲಗೂರು ಕ್ರಾಸ್ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ವಾಟಾಳ್ ಪ್ರಯಾಣಿಸುತ್ತಿದ್ದ ವಾಹನ ತಡೆದ ಪೊಲೀಸರು, ಅದರಲ್ಲಿದ್ದ ವಾಟಾಳ ನಾಗರಾಜ, ಸಾ.ರಾ.ಗೋವಿಂದ ಹಾಗೂ ಅವರ ಬೆಂಬಲಿಗರನ್ನು ವಶಕ್ಕೆ ಪಡೆದು, ಪ್ರವಾಸಿ ಮಂದಿರಕ್ಕೆ ಸಾಗಿಸಿದರು.
ಈ ಸಂದರ್ಭದಲ್ಲಿ ಕಪ್ಪು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ವಾಟಾಳ್ ನಾಗರಾಜ ಟೀಕಾ ಪ್ರಹಾರ ನಡೆಸಿದರು.
ಯಾವುದೇ ಸರ್ಕಾರ ನನ್ನನ್ನು ಉದ್ದೇಶಿತ ಹೋರಾಟ ಸ್ಥಳದಿಂದ 60-70 ಕಿ.ಮೀ. ದೂರದಲ್ಲಿ ತಡೆದು, ಬಂಧಿಸಿರಲಿಲ್ಲ. ಈಗ ಬಂಧಿಸಿದರೆ ಏನಂತೆ, ಇನ್ನು ಕೆಲವೇ ದಿನಗಳಲ್ಲಿ ಮಾರುವೇಶದಲ್ಲಿ ಬಂದು ವಿಜಯಪುರ ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ ಹಾಕುತ್ತೇವೆ ಎಂದರು.
ಇದನ್ನೂ ಓದಿ:ಭಾರತ್ ಮಾತಾಕಿ ಜೈ ಎನ್ನುತ್ತಲೇ ಬಿಜೆಪಿಯವರಿಂದ ಮಹಿಳೆಯರ ಮೇಲೆ ದೌರ್ಜನ್ಯ: ಪುಷ್ಪಾ ಅಮರನಾಥ್
ಇದಲ್ಲದೇ ರಾಜ್ಯ ಸರ್ಕಾರ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಕ್ರಮವನ್ನು ವಿರೋಧಿಸಿ ಡಿ.5 ರಂದು ಕರೆ ನೀಡಿರುವ ಕರ್ನಾಟಕ ಬಂದ್ ಯಶಸ್ವಿಯಾಗಲಿದೆ. ಹೋರಾಟದಲ್ಲಿ ಕನ್ನಡಪರ ಎಲ್ಲ ಸಂಘಟನೆಗಳು ಪಾಲ್ಗೊಂಡು ಬೆಂಬಲ ನೀಡಲಿವೆ ಎಂದರು.