ಪಿರಿಯಾಪಟ್ಟಣ: ಚುನಾವಣೆಗಳಲ್ಲಿ ನೈತಿಕತೆ, ಪ್ರಾಮಾಣಿಕತೆ ಮರೆಯಾಗಿ ಹಣ ಮತ್ತು ಜಾತಿ ಪ್ರಭಾವ ಹೆಚ್ಚುತ್ತಿರುವುದರಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗುವ ಸಂಭವ ಹೆಚ್ಚುತ್ತಿದೆ ಎಂದು ಕನ್ನಡ ಚಳುವಳಿ ಪಕ್ಷದ ಮುಖಂಡ ವಾಟಳ್ ನಾಗರಾಜ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹೋರಾಟದ ಮೂಲಕ ರಾಜಕಾರಣ ಮಾಡಿದವನು, ಹಣ, ಜಾತಿ ಪ್ರಭಾವ ಬಳಸಿ ಎಂದೂ ರಾಜಕಾರಣ ಮಾಡಿಲ್ಲ ಹಾಗೇನಾದರೂ ಮಾಡಿದರೆ ನಾನು ನಾನು ಬಹುದೊಡ್ಡ ಹುದ್ದೆಯನ್ನು ಅಲಂಕರಿಸಬಹುದಿತ್ತು. ಆದರೆ ನೀತಿ, ನಿಯಮ, ತತ್ವ ಸಿದ್ದಾಂತ ನಂಬಿಕೆ ಇಟ್ಟು ಚುನಾವಣೆಗಳಲ್ಲಿ ಸ್ಪರ್ಧಿಸಿಕೊಂಡು ಬಂದಿದ್ದೇನೆ. ಆದರೂ ಕೂಡ ನಿರಂತರ ಸೋಲಾಗಿದೆ. ಆದರೆ ನಾನು ಸೋಲು-ಗೆಲುವುಗಳಿಗೆ ತಲೆಕೆಡಿಸಿಕೊಳ್ಳದೆ ಭ್ರಷ್ಟಚಾರದ ವಿರುದ್ದ ನನ್ನ ಸ್ಪರ್ಧೆಯನ್ನು ಮುಂದುವರಿಸಿಕೊಂಡು ಬಂದಿರುವುದಾಗಿ ತಿಳಿಸಿದರು.
ಪ್ರಜ್ಞಾವಂತ ಪದವೀಧರ ಮತದಾರರು ನನ್ನನ್ನು ಆರಿಸಿ ವಿಧಾನ ಪರಿಷತ್ತಿಗೆ ಕಳುಹಿಸಿದರೆ ವಿಧಾನ ಪರಿಷತ್ತಿನ ಘನತೆ ಗೌರವವನ್ನು ಹೆಚ್ಚಿಸುವ ಕೆಲಸ ಮಾಡುತ್ತೇನೆ. ಪದವೀದರರ ಕ್ಷೇತ್ರ ಬಹಳ ಪವಿತ್ರವಾದುದ್ದು, ಪದವೀಧರರು ಹಣ ಜಾತಿಯ ವ್ಯಾಮೋಹಕ್ಕೆ ಬಲಿಯಾಗದೆ ಚುನಾವಣೆಯಲ್ಲಿ ಮೊದಲ ಪ್ರಾಶಸ್ಯದ ಮತವನ್ನು ನೀಡುವ ಮೂಲಕ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಾಟಳ್ ಪಕ್ಷದ ಮುಖಂಡರಾದ ಅಜೇಯ್ ಕುಮಾರ್, ಕ್ರಾಂತಿ ಕುಮಾರ್, ಪಾರ್ಥಸಾರಥಿ, ನಾರಾಯಣ್ ಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.