ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಒಪ್ಪಿಗೆ ಸೂಚಿಸಿ ನಂತರ ವಿರೋಧಗಳು ಎದುರಾಗಿದ್ದು, ವಾಟಾಳ್ ನಾಗರಾಜ್ ಅವರು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ರಾಜ್ಯ ಸರ್ಕಾರದ ತೀರ್ಮಾನವನ್ನು ಖಂಡಿಸಿದ್ದಾರೆ. ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ತನ್ನ ನಿರ್ಧಾರವನ್ನು ನವೆಂಬರ್ 27 ರ ಒಳಗೆ ವಾಪಸ್ ಪಡೆಯದಿದ್ದರೆ ಡಿಸೆಂಬರ್ 5ರಂದು ಕರ್ನಾಟಕ ಬಂದ್ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ನಾವು ನ.27ರ ವರೆಗೆ ಗಡುವು ನೀಡುತ್ತೇವೆ. ಅಷ್ಟರೊಳಗೆ ಪ್ರಾಧಿಕಾರದಿಂದ ಹಿಂದೆ ಸರಿಯದಿದ್ದರೆ ಡಿ.5ರಂದು ರಾಜ್ಯ ಬಂದ್ ಮಾಡಿ ಕನ್ನಡಿಗರ ಸಾಮರ್ಥ್ಯ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈಗ ಮರಾಠ ಅಭಿವೃದ್ಧಿ ಪ್ರಾಧಿಕಾರ, ಮುಂದೆ ತಮಿಳು, ತೆಲುಗು, ಮಲಯಾಳಂ ಹೀಗೆ ಅನ್ಯ ರಾಜ್ಯಗಳ ಎಲ್ಲ ನಿವಾಸಿಗಳಿಗೂ ಅಭಿವೃದ್ಧಿ ಪ್ರಾಧಿಕಾರ ಮಾಡಿ ಕನ್ನಡಿಗರನ್ನು ಸರ್ಕಾರ ಅನಾಥರನ್ನಾಗಿ ಮಾಡಲು ಹೊರಟಿದೆ ಎಂದು ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ವಾಟಾಳ್ ನಾಗರಾಜ್ ಅವರು ಕರ್ನಾಟಕ ಬಂದ್ ಗೆ ಇತರ ಸಂಘಟನೆಗಳ ಬೆಂಬಲ ಕೋರಿದ್ದಾರೆ.