ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಆಕ್ಷಯ್ ಕುಮಾರ್ ಅಭಿನಯದ 2.0 ಚಿತ್ರವನ್ನು ರಾಜ್ಯದಲ್ಲಿ ಬಿಡಗುಡೆ ಮಾಡಲು ಅವಕಾಶ ನೀಡಬಾರದು ಎಂದು ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಅವರು ಗುರುವಾರ ಊರ್ವಶಿ ಚಿತ್ರ ಮಂದಿರದ ಎದುರು ಪ್ರತಿಭಟನೆ ನಡೆಸಿದ್ದಾರೆ.
ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿ ವಾಟಾಳ್ ಅವರು ಯಾವುದೇ ಕಾರಣಕ್ಕೂ ಕನ್ನಡ ದ್ರೋಹಿಯಾಗಿರುವ ರಜನಿಕಾಂತ್ ಅಭಿನಯದ 2.0 ಚಿತ್ರ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡಬಾರದು. ಚಿತ್ರ ಬಿಡುಗಡೆಗೆ ಅವಕಾಶ ನೀಡಿದರೆ ಕನ್ನಡ ಚಿತ್ರಗಳಿಗೆ ತೊಂದರೆಯಾಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು.
ನಾನು 55 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಪರ ರಾಜ್ಯಗಳಲ್ಲಿ ಕನ್ನಡ ಚಿತ್ರಗಳಿಗೆ ಅವಕಾಶ ನೀಡುತ್ತಿಲ್ಲ ಎಂದರು.
ಪ್ರತಿಭಟನೆ ವೇಳೆ ಚಿತ್ರ ಬಿಡುಗಡೆಯಾದರೆ ಡಿಸೆಂಬರ್ 1 ರಂದು ವಾಣಿಜ್ಯ ಮಂಡಳಿಯ ಕಚೇರಿಗೆ ಮುತ್ತಿಗೆ ಹಾಕುವುದಾಗಿ ವಾಟಾಳ್ ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆ ಹಿನ್ನಲೆಯಲ್ಲಿ ಚಿತ್ರ ಮಂದಿರಕ್ಕೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಪ್ರತಿಭಟನಾ ನಿರತ ವಾಟಾಳ್ ಸೇರಿದಂತೆ ಸಂಘಟನೆಗಳ ಕಾರ್ಯಕರ್ತರನ್ನು ಸ್ಥಳದಲ್ಲಿದ್ದ ಪೊಲೀಸರು ವಶಕ್ಕೆ ಪಡೆದರು.
ಭಾರೀ ಬಜೆಟ್‌ನ ಚಿತ್ರ ಇಂದು ಗುರುವಾರ ವಿಶ್ವಾದ್ಯಂತ ಬಿಡುಗಡೆಯಾಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.