Advertisement

ಕಿತ್ತೂರು ಕೋಟೆ ಮರು ನಿರ್ಮಾಣಕ್ಕೆ ವಾಟಾಳ್‌ ಆಗ್ರಹ

04:45 PM Dec 09, 2018 | Team Udayavani |

ಚನ್ನಮ್ಮನ ಕಿತ್ತೂರು: ಕಿತ್ತೂರು ಚನ್ನಮ್ಮ ಕೋಟೆಯು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿ ಮರು ನಿರ್ಮಾಣವಾಗದೆ ಹಾಗೆಯೇ ಉಳಿದುಕೊಂಡಿದೆ. ಕೂಡಲೇ ಸರ್ಕಾರ ಗಮನ ಹರಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ ಹೇಳಿದರು. ಇಲ್ಲಿಯ ಐತಿಹಾಸಿಕ ಕಿತ್ತೂರು ಕೋಟೆಯನ್ನು ಶನಿವಾರ ವೀಕ್ಷಿಸಿ ಮಾತನಾಡಿದ ಅವರು, ಬೈಲಹೊಂಗಲದಲ್ಲಿರುವ ಚನ್ನಮ್ಮ ಸಮಾಧಿ ಹಾಗೂ ನಂದಗಡದಲ್ಲಿರುವ ಶೂರ ಸಂಗೊಳ್ಳಿ ರಾಯಣ್ಣನ ಸಮಾಧಿ ಗಳು ರಾಷ್ಟ್ರೀಯ ಸ್ಮಾರಕವಾಗಬೇಕು ಎಂದು ಆಗ್ರಹಿಸಿದರು.

Advertisement

ಐತಿಹಾಸಿಕ ಪರಂಪರೆ ಸಾರುವ ಕೆಲಸ ಕಾರ್ಯಗಳು ಕಿತ್ತೂರು ಕೋಟೆಯಲ್ಲಾಗಬೇಕು. ಸುಖಾ ಸುಮ್ಮನೆ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸರ್ಕಾರ ಕೈ ತೊಳೆದುಕೊಂಡಿದೆ. ರಾಣಿ ಚನ್ನಮ್ಮಾಜಿಯ ಹೆಸರು ದೇಶ ವ್ಯಾಪಿ ಪ್ರಸಿದ್ಧಿ ಪಡೆದಿದೆ. ಆದರೆ ಇದನ್ನು ನೋಡಲು ಹಂಬಲಿಸಿ ಬರುವ ಜನರಿಗೆ ರಾಜ್ಯ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ನಿರಾಸಕ್ತಿ ಮೂಡುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಸುವರ್ಣಸೌಧದ ಆಡಳಿತವನ್ನು ಉಪ ಮುಖ್ಯಮಂತ್ರಿಗಳ ಹೆಗಲಿಗೆ ನೀಡಬೇಕು. ಇಲಾಖೆ ಎಲ್ಲ ಕಚೇರಿಗಳು ಸುವರ್ಣ ಸೌಧದಲ್ಲಿ ಕಾರ್ಯಾರಂಭ ಮಾಡಬೇಕು. ಈ ಚಳಿಗಾಲದ ಅ ಧಿವೇಶನವು ಉಕ ಅಭಿವೃದ್ಧಿಗೆ ಮೀಸಲಾಗಿಡಬೇಕು. ಮುಖ್ಯಮಂತ್ರಿಗಳು ಉಕ ಬಗ್ಗೆ ಶ್ವೇತಪತ್ರ ಹೊರಡಿಸಿ ಅದರ ಮೇಲೆ ಚರ್ಚೆ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕರ್ನಾಟಕದ ಇಬ್ಭಾಗದ ಧ್ವನಿ ಇನ್ನಷ್ಟು ಬಲ ಪಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಬರಗಾಲ ಹಾಗೂ ನಿರುದ್ಯೋಗದ ಸಮಸ್ಯೆ ಉತ್ತರ ಕರ್ನಾಟಕವನ್ನು ಕಿತ್ತು ತಿನ್ನುತ್ತಿದೆ ಇದನ್ನು ಅರಿಯದ ಜನ ಪ್ರತಿನಿಧಿಗಳು ಕರ್ನಾಟಕ ಎಂದರೆ ಕೇವಲ ಮೈಸೂರು ಹಾಗೂ ಬೆಂಗಳೂರು ಎಂದು ತಿಳಿದುಕೊಂಡಿರುವುದು ಸರಿಯಲ್ಲ, ಉತ್ತರ ಕರ್ನಾಟಕದಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಹಾಗೂ ಸಂಬಂಧಪಟ್ಟ ಸಚಿವರು ಇಲ್ಲಿಯ ರೈತರ ಕಷ್ಟಗಳಿಗೆ ಕೂಡಲೇ ಸ್ಪಂದಿಸುವ ಕಾರ್ಯ ಮಾಡಬೇಕೆಂದು ಹೇಳಿದ ಅವರು, ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷಕ್ಕೆ ಉತ್ತರ ಕರ್ನಾಟಕ ಒಳಗಾಗಿದೆ. ಒಂದು ವರ್ಷದಲ್ಲಿ ಎಲ್ಲ ರಾಜಕಾರಣಿಗಳು ಕೇವಲ ಒಂದು ಬಾರಿ ಬೆಳಗಾವಿಯಲ್ಲಿ ಅಧಿವೇಶನಕ್ಕೆ ಬಂದು ಹೊಗುತ್ತಾರೆ, ಇದು ರಾಜಕಾರಣಿಗಳಿಗೆ ‘ಜಾಲಿ ಟ್ರಿಪ್‌’ ಆದಂತಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಸರ್ಕಾರ ನೀಡಿ ನಿರ್ಲಕ್ಷಕ್ಕೆ ಒಳಗಾಗಿರುವ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next