Advertisement

ಮಂಗಳೂರು ವಿಮಾನ ನಿಲ್ದಾಣಕ್ಕೆ ವ್ಯಾಟ್‌ ಹೊರೆ!

09:08 AM Mar 05, 2020 | mahesh |

ಎಟಿಎಫ್ ಮೇಲೆ ಶೇ. 28 ವ್ಯಾಟ್‌ | ಟಿಕೆಟ್‌ ದರ ಏರಿಕೆ
ವಿಮಾನ ಸಂಸ್ಥೆಗಳ ನಿರಾಸಕ್ತಿ | ಕಣ್ಣೂರು ವಿಮಾನ ನಿಲ್ದಾಣಕ್ಕೆ ಲಾಭ

Advertisement

ಮಂಗಳೂರು: ರಾಜ್ಯ ಸರಕಾರವು ಏರ್‌ಲೈನ್‌ ಟರ್ಬೈನ್‌ ಫ್ಯೂಯೆಲ್‌ (ಎಟಿಎಫ್-ಅಥವಾ ಏವಿಯೇಶನ್‌ ಪೆಟ್ರೋಲ್‌) ಮೇಲೆ ಶೇ. 28ರಷ್ಟು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ವಿಧಿಸುತ್ತಿರುವುದರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾರೀ ಹೊಡೆತ ಬಿದ್ದಿದೆ.

ಕೇರಳ ಸರಕಾರವು ಕಣ್ಣೂರಿನ ಹೊಸ ವಿಮಾನ ನಿಲ್ದಾಣದಲ್ಲಿ ಎಟಿಎಫ್‌ ಮೇಲಿನ ವ್ಯಾಟನ್ನು ಕೇವಲ ಶೇ. 1ಕ್ಕೆ ಇಳಿಸಿರುವುದೇ ಇದಕ್ಕೆ ಕಾರಣ. ಕಣ್ಣೂರು ನಿಲ್ದಾಣದಲ್ಲಿ ಮಾತ್ರ ವ್ಯಾಟನ್ನು ಇಷ್ಟು ಕನಿಷ್ಠ ಮಟ್ಟಕ್ಕಿಳಿಸಲಾಗಿದೆ. ಈ ಮೂಲಕ ಅಲ್ಲಿನ ಸರಕಾರ ಹೊಸ ವಿಮಾನ ನಿಲ್ದಾಣದ ಬೆಳವಣಿಗೆಗೆ ಹೆಚ್ಚು ಆಸ್ಥೆ ವಹಿಸಿದರೆ ಕರ್ನಾಟಕ ಸರಕಾರ ರಾಜ್ಯದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬೆಳವಣಿಗೆಗೆ ಕ್ರಮ ಕೈಗೊಳ್ಳುವ ಬದಲು ದುಪ್ಪಟ್ಟು ತೆರಿಗೆ ವಿಧಿಸುತ್ತಿದೆ.

ಎಟಿಎಫ್‌ ಮೇಲಿನ ವ್ಯಾಟ್‌ ಮಂಗಳೂರಿನಲ್ಲಿ ಅಧಿಕ ವಿಧಿಸುತ್ತಿರುವುದರ ಪರಿಣಾಮ ಯಾನಿಗಳ ಮೇಲೆ ಬೀಳುತ್ತಿದ್ದು, ಟಿಕೆಟ್‌ ದರವೂ ಸೇರಿದಂತೆ ವಿವಿಧ ಶುಲ್ಕಗಳು ಹೆಚ್ಚಿವೆ. ಮಂಗಳೂರಿನಿಂದ ಪ್ರಯಾಣ ದರ ಏರಲು ಇದುವೇ ಮುಖ್ಯ ಕಾರಣ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಕಣ್ಣೂರು ಮಂಗಳೂರಿನಿಂದ ಕೇವಲ 175 ಕಿ.ಮೀ. ದೂರದಲ್ಲಿದ್ದು, ಸಹಜವಾಗಿ ಕಾಸರಗೋಡು, ಕಾಂಞಂಗಾಡ್‌ ಕಡೆಯ ಯಾನಿಗಳು ಅತ್ತ ಹೊರಳುತ್ತಿದ್ದಾರೆ.

ಜೆಟ್‌ ಏರ್‌ವೇಸ್‌ ಮುಚ್ಚಿದ ಬಳಿಕ 13 ವಿಮಾನಗಳ
ದಿನಂಪ್ರತಿ ಹಾರಾಟವೂ ಸ್ಥಗಿತಗೊಂಡಿದ್ದು, ಇದರ ಬದಲು ಇತರ ವಿಮಾನ ಸೇವೆ ಮಂಗಳೂರಿನಿಂದ ಆರಂಭವಾಗಿಲ್ಲ. ಎಟಿಎಫ್‌ ವ್ಯಾಟ್‌ ದುಬಾರಿ ಯಾದದ್ದೇ ಕಾರಣ ಎನ್ನಲಾಗುತ್ತಿದೆ.

Advertisement

ಮಂಗಳೂರು ಏರ್‌ಪೋರ್ಟ್‌ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಆಸ್ಥೆ ವಹಿಸಬೇಕಿದ್ದು, ಎಟಿಎಫ್‌ ವ್ಯಾಟನ್ನು ಈ ಬಾರಿಯ ಬಜೆಟ್‌ನಲ್ಲಿ ಕೈಬಿಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮನವಿ ಮಾಡಿದೆ.

ಪ್ರಯಾಣಿಕರ ಸಂಖ್ಯೆ ಶೇ. 23ರಷ್ಟು ಇಳಿಕೆ!
2019ರ ಎಪ್ರಿಲ್‌ನಿಂದ ನ.ವರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಶೇ. 23ರಷ್ಟು ಇಳಿಕೆಯಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ವರದಿಯಲ್ಲಿ ತಿಳಿಸಿದೆ. 2018ರ ಎಪ್ರಿಲ್‌ನಿಂದ ನವೆಂಬರ್‌ ವರೆಗೆ 13,960 ವಿಮಾನಗಳು ಹಾರಾಟ ನಡೆಸಿದ್ದರೆ, 2019ರ ಇದೇ ಅವಧಿಯಲ್ಲಿ ಇದು 10,416ಕ್ಕೆ ಇಳಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆಯೂ 1.27 ಲಕ್ಷದಿಂದ 1.09 ಲಕ್ಷಕ್ಕಿಳಿದೆ. ಹಿಂದೆ ಪ್ರತೀ ದಿನ ಮಂಗಳೂರಿನಿಂದ 80ರಷ್ಟು ವಿಮಾನಗಳು ಸಂಚಾರ ನಡೆಸುತ್ತಿದ್ದರೆ, ಈಗ 50ಕ್ಕೆ ಇಳಿದಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಟಿಎಫ್ ವ್ಯಾಟ್‌ ಹೆಚ್ಚಿರುವುದರಿಂದ ಪ್ರಯಾಣ ದರ ಏರಿದೆ. ಹೊಸ ವಿಮಾನ ಸೇವೆಗಳೂ ಆರಂಭವಾಗುತ್ತಿಲ್ಲ. ಹೀಗಾಗಿ ರಾಜ್ಯ ಸರಕಾರವು ಬಜೆಟ್‌ನಲ್ಲಿ ಎಟಿಎಫ್‌ ವ್ಯಾಟ್‌ನಲ್ಲಿ ವಿನಾಯಿತಿ ಪ್ರಕಟಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.
– ಐಸಾಕ್‌ ವಾಸ್‌, ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next