ಇತ್ತೀಚೆಗೆ 77ನೆಯ ವಯಸ್ಸಿನಲ್ಲಿ ಅಗಲಿದ ರಂಗನಟ, ನಿರ್ದೇಶಕ, ನಾಟಕ ರಚನೆಕಾರ ಪಡುಕುದ್ರು ವಾಸುದೇವ ರಾವ್ ಅವರ ಹೆಸರು ರಂಗಭೂಮಿ ಕ್ಷೇತ್ರದಲ್ಲಿ ಅಚ್ಚಳಿಯದೆ ಉಳಿಯಲಿದೆ.
ವೃತ್ತಿಯಲ್ಲಿ ಪ್ರಾಂಶುಪಾಲರಾಗಿದ್ದರೂ ಅಂತರಂಗದಲ್ಲಿ ಅವರೊಬ್ಬ ರಂಗಭೂಮಿ ಕಲಾವಿದ. ಕೆಮ್ಮಣ್ಣು ಪಡುಕುದ್ರುವಿನವರಾದ ವಾಸುದೇವ ರಾವ್ ಶಾಲಾ ವಿದ್ಯಾರ್ಥಿಗಳು ಪ್ರವಾಸ ಕೈಗೊಳ್ಳುವಾಗ, ವಾರ್ಷಿಕೋತ್ಸವಗಳಲ್ಲಿ ಹಿರಣ್ಣಯ್ಯನವರ “ದೇವದಾಸಿ’, “ಎಚ್ಚಮ ನಾಯಕ’, “ಪಂಗನಾಮ’ ಮೊದಲಾದ ನಾಟಕಗಳನ್ನು ಆಡಿಸುತ್ತಿದ್ದರು. ರಾಯರ ಮೆಚ್ಚಿನ ಚಿತ್ರಗೀತೆ “ಅಂಕದ ಪರದೆ ಜಾರಿದ ಮೇಲೆ ನಾಟಕವಿನ್ನೂ ಉಳಿದಿಹುದೆ?’. ರಾವ್ ಅವರು ಕೇವಲ ನಿರ್ದೇಶಕರಷ್ಟೆ ಅಲ್ಲ, ನಾಟಕ ರಚನೆ, ಅಭಿನಯದಲ್ಲಿಯೂ ಕೈಯಾಡಿಸಿದವರು.
ರಂಗಭೂಮಿಯ ಸಂಪನ್ಮೂಲ ಶಕ್ತಿಯಿಂದಲೋ ಏನೋ ಇದೇ ಹೊತ್ತಿಗೆ ಅವರು ಸಾಹಿತ್ಯದತ್ತಲೂ ಆಸಕ್ತಿ ವಹಿಸಿದರು. ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ತಂಡದ ಸದಸ್ಯರಾಗಿ ಉತ್ತರ ಕರ್ನಾಟಕವನ್ನು ಸುತ್ತಿ ಅಲ್ಲಿನ “ಜಗಜ್ಯೋತಿ ಬಸವೇಶ್ವರ’ ಮೊದಲಾದ ನಾಟಕಗಳನ್ನು ನೋಡಿ “ಕಲ್ಯಾಣದಣ್ಣ ಬಾರೋ ಬಸವಣ್ಣಾ’, “ನೀರಿಗೆ ನೈದಿಲೆ ಶೃಂಗಾರಾ…’ ಮೊದಲಾದ ರಂಗಗೀತೆಗಳಿಂದ ಪ್ರಭಾವಿತರಾದರು. ಸಿನೆಮಾ ನಟ ಇಂದುಶೇಖರ್ ನೇತೃತ್ವದ ಕಂಪೆನಿ ನಾಟಕ ಮಂಡಳಿಯಲ್ಲಿ ತೋನ್ಸೆಯಲ್ಲಿ ಪ್ರದರ್ಶಿಸಿದ “ಟಿಪ್ಪು ಸುಲ್ತಾನ್’, “ಮಕ್‌ಮಲ್ ಟೋಪಿ’, ಎಚ್.ಎನ್.ಹೂಗಾರ್ ರಚಿತ “ಪುತ್ಥಳಿ’ ಮೊದಲಾದ ಜನಪ್ರಿಯ ನಾಟಕಗಳನ್ನು ಕಂಡು ಆಕರ್ಷಿತರಾದರು. “ರಂಗಭೂಮಿ’ ಸಂಸ್ಥೆಗೂ ರಾವ್ ಸಂಬಂಧ 1965ರಷ್ಟು ಹಳೆಯದು. ಆಗ ಕೆಮ್ಮಣ್ಣಿನಲ್ಲಿ ಉಡುಪಿಯ ರಂಗಭೂಮಿ ಸಂಸ್ಥೆ “ಮಂಗಳ’ ನಾಟಕವನ್ನು ಪ್ರದರ್ಶಿಸಿದಾಗ ಅದರಿಂದ ಪ್ರಭಾವಿತರಾದ ರಾವ್, ಜೀವಿತದ ಕೊನೆಯ ವರೆಗೂ ರಂಗಭೂಮಿ ಕ್ಷೇತ್ರ ಮತ್ತು ಸಂಸ್ಥೆಯನ್ನು ಬಿಟ್ಟಿರಲಿಲ್ಲ.
ಉಡುಪಿಯಲ್ಲಿ ಮಂಡ್ಯ ರಮೇಶ್ ನಿರ್ದೇಶನದಲ್ಲಿ ರಂಗಾಭಿನಯ ತರಬೇತಿ, ನೀನಾಸಂನಂತಹ ವಿವಿಧ ನಾಟಕ ಸಂಸ್ಥೆಗಳ ಪ್ರದರ್ಶನ ಸಂಘಟನೆಯನ್ನು ಏರ್ಪಡಿಸಿದರು. ಶಾಲಾವಧಿಯಲ್ಲಿ “ಪಂಗನಾಮ’ದ ಹೀರೋಯಿನ್ ಆಗಿ ರಾವ್ ಆಯ್ಕೆ ಮಾಡಿದ್ದ ತೋನ್ಸೆ ವಿಜಯಕುಮಾರ ಶೆಟ್ಟಿ ಮುಂಬೈನಲ್ಲಿ ನಾಟಕ ರಂಗ ಕ್ಷೇತ್ರದಲ್ಲಿ ಮಿಂಚುತ್ತಿರುವುದು ರಾವ್ ಅವರಿಗೆ ಸಂತೃಪ್ತಿಯ ವಿಷಯವಾಗಿತ್ತು.