Advertisement

ಮರಗಳಿಗೀಗ ವಾಸ್ತು ದೋಷದ ಭಯ

11:20 AM May 25, 2023 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿರುವ ಹಸಿರು ಮರಗಳಿಗೆ ಇದೀಗ “ವಾಸ್ತು ದೋಷ’ದ ಭಯ ಕಾಡತೊಡಗಿದೆ. ಜತೆಗೆ ಜಾಹೀರಾತು ಹೋರ್ಡಿಂಗ್‌ ಮಾಫಿಯಾ ಆತಂಕ ಎದುರಾಗಿದೆ.

Advertisement

ಬಿಬಿಎಂಪಿಯ ಎಂಟೂ ವಲಯಗಳಲ್ಲಿ ದೊಡ್ಡ ಗಾತ್ರದ ಮರಗಳ ಮೇಲೆ ಆ್ಯಸಿಡ್‌ (ಆಮ್ಲ )ದಾಳಿ ನಡೆಯುತ್ತಿದ್ದು ಪರಿಸರ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. ಇದರ ಹಿಂದೆ ಜ್ಯೋತಿಷಿಗಳ “ವಸ್ತು ದೋಷದ’ ಮಾತು ಕೆಲಸ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಈ ಹಿಂದೆ ಮಾರತ್ತಹಳ್ಳಿ ಜಂಕ್ಷನ್‌ ಬಳಿ ಹೂವರಸಿ ಮರಗಳ ಮೇಲೆ ಆ್ಯಸಿಡ್‌ ದಾಳಿ ನಡೆಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಕೆಲವು ದಿನಗಳ ಹಿಂದಷ್ಟೇ ಜಯನಗರದ 4ನೇ ಬ್ಲಾಕ್‌ನಲ್ಲಿ ಹೊಂಗೆ ಮರದ ಬುಡಕ್ಕೆ ಆ್ಯಸಿಡ್‌ ದಾಳಿ ನಡೆಸಲಾಗಿದೆ. ಮರ ಸಂರಕ್ಷಣಾ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಆ ಮರವನ್ನು ಸಂರಕ್ಷಿಸುವಲ್ಲಿ ಸಫ‌ಲವಾಗಿದೆ. ಮರಗಳ ಸಹಜ ಸಾವು ಎಂಬ ಬಿಂಬಿಸುವ ಪ್ರಯತ್ನ ಇಲ್ಲಿ ನಡೆದಿತ್ತು ಎಂಬ ಮಾತುಗಳು ಕೇಳಿಬಂದಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅರಣ್ಯ ಸಂರಕ್ಷಣಾ ವಿಭಾಗವಿದೆ. ಪ್ರತಿ ತಿಂಗಳು ರಾಜಧಾನಿಯ ವಿವಿಧ ಭಾಗಗಳಿಂದ ತಿಂಗಳಿಗೆ ಎರಡ್ಮೂರು ಮರಗಳ ಮೇಲೆ ಆ್ಯಸಿಡ್‌ ದಾಳಿ ನಡೆಸಿದ ದೂರುಗಳು ಕೇಳಿಬರುತ್ತಿವೆ. ಈಗಾಗಲೇ ಸ್ಥಳೀಯ ಮರ ತಜ್ಞರ ಜತೆಗೆ ಘಟನಾ ಪ್ರದೇಶಕ್ಕೆ ಭೇಟಿ ನೀಡಿ ಮರಗಳನ್ನು ರಕ್ಷಿಸಲಾಗಿದೆ ಎಂದು ಪಾಲಿಕೆಯ ಅರಣ್ಯ ವಿಭಾಗದ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ರಾಜರಾಜೇಶ್ವರಿ ನಗರ, ಜಯನಗರ, ವಿಜಯ ನಗರ, ಮಾರತ್ತಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ದೊಡ್ಡ ಗಾತ್ರದ ಮರಗಳ ಮೇಲೆ ಆ್ಯಸಿಡ್‌ ದಾಳಿ ನಡೆಸಿದ ಪ್ರಕರಣಗಳು ಬೆಳಕಿಗೆ ಬಂದಿವೆ. ತಪ್ಪಿತಸ್ಥರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡುವ ಕೆಲಸ ಕೂಡ ನಡೆದಿದೆ ಎಂದು ಹೇಳುತ್ತಾರೆ.

17 ಹೂವರಸಿ ಮರಗಳ ಸಂರಕ್ಷಣೆ: ಕಳೆದ ಮೂರ್ನಾಲ್ಕು ವರ್ಷದ ಹಿಂದೆ ಸರ್ಜಾಪುರ ಹಾಗೂ ಮಾರುತ್ತಹಳ್ಳಿ ಜಂಕ್ಷನ್‌ ವ್ಯಾಪ್ತಿಯಲ್ಲಿ ಸುಮಾರು 30 ಹೂವರಸಿ ಮರಗಳ ಮೇಲೆ ಮೇಲೆ ಆ್ಯಸಿಡ್‌ ದಾಳಿ ನಡೆಸಲಾಗಿತ್ತು. ದಿನದಿಂದ ದಿನಕ್ಕೆ ಆ ಮರಗಳು ಒಣಗುತ್ತಿದ್ದವು. ಇವುಗಳಲ್ಲಿ ಸುಮಾರು 17 ಹೂವರಸಿ ಮರಗಳನ್ನು ಮರಗಳನ್ನು ಸಂರಕ್ಷಿಸಲಾಗಿತ್ತು ಎಂದು ಮರ ಸಂರಕ್ಷಣಾಧಿಕಾರಿಗಳು ಹೇಳುತ್ತಾರೆ. ನಂತರ ನಡೆಸಿದ ತನಿಖೆಯಲ್ಲಿ ಈ ಹೋರ್ಡಿಂಗ್‌ ಗಳು ಅಕ್ರಮ ಎಂದು ತಿಳಿದುಬಂದಿದೆ.

Advertisement

ಮರಗಳ ಬೇರುಗಳ ಮೇಲೆ ಆಮ್ಲವನ್ನು ಸುರಿಯಲಾಗಿದೆ ಎಂದು ತನಿಖೆಗಳು ತೋರಿಸಿವೆ. ಜಾಹೀರಾತು ಮಾಫಿಯಾ ಮರಗಳು ಸಹಜ ಸಾವು ಎಂಬ ಭಾವನೆ ಮೂಡಿಸಲು ಬಯಸಿದ್ದವು ಎನ್ನುತ್ತಾರೆ.

ಏನಿದು ವಾಸ್ತು ಪ್ರಕಾರ?: ಸಿಲಿಕಾನ್‌ ಸಿಟಿಯ ಪ್ರದೇಶ ವ್ಯಾಪ್ತಿಯಲ್ಲಿ ಹಲವು ಕಾರಣಗಳಿಂದಾಗಿ ಮರಗಳ ಮೇಲೆ ಆಗಾಗ ಆ್ಯಸಿಡ್‌ ದಾಳಿ ನಡೆಯುತ್ತಲೇ ಇದೆ. ಹೊಸ ಲೇಔಟ್‌ ನಿರ್ಮಾಣ , ಜಾಹೀರಾತು ಹೋರ್ಡಿಂಗ್‌ ಮಾಫಿಯಾ ಇದರ ಹಿಂದೆ ಅಡಗಿದೆ. ಯಾರಿಗೂ ತಿಳಿಯದ ರೀತಿಯಲ್ಲಿ ಮರಗಳ ಮಧ್ಯೆ ರಂಧ್ರ ಕೊರೆದು ಆಮ್ಲ ಸುರಿಯುವ ಕೆಲಸ ನಡೆಯುತ್ತಿದೆ. ಅದರಲ್ಲೂ ಹೆಚ್ಚಿನ ದಾಳಿ ವಾಸ್ತು ದೋಷ ಎಂಬ ಕಾರಣದಿಂದಾಗಿ ದಾಳಿ ನಡೆದಿದೆ ಎಂದು ಟ್ರೀ ಡಾಕ್ಟರ್‌ ವಿಜಯ್‌ ನಿಶಾಂತ್‌ ಹೇಳುತ್ತಾರೆ.

ಹಳ್ಳಿ ಪ್ರದೇಶಗಳಂತೆ ಇದೀಗ ನಗರ ಪ್ರದೇಶಗಳ ಜನರು ಅಧಿಕ ಸಂಖ್ಯೆಯಲ್ಲಿ ಜೋತಿಷಿಗಳ ವಾಸ್ತು ಪ್ರಕಾರವನ್ನು ನಂಬುತ್ತಾರೆ. ಮನೆ ಮುಂದಿರುವ ಮರ ವಾಸ್ತು ದೋಷಕ್ಕೆ ಕಾರಣವಾಗಿ ಎಂದು ಆ್ಯಸಿಡ್‌ ದಾಳಿ ನಡೆಸಿರುವುದು ಕೆಲವು ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ದೊಡ್ಡ ಗಾತ್ರದ ಮರಗಳು ತಮ್ಮ ಕಟ್ಟಡ ಸೌಂದರ್ಯಕ್ಕೆ ಅಡ್ಡಿಯಾಗಿದೆ ಎಂದೂ ದಾಳಿ ನಡೆದಿದೆ ಎಂದು ತಿಳಿಸುತ್ತಾರೆ.

ಪಾಲಿಕೆಯ 8 ವಲಯಗಳಲ್ಲಿ ಪ್ರತಿ ತಿಂಗಳು 2 ರಿಂದ 3 ಮರಗಳ ಮೇಲಿನ ಆ್ಯಸಿಡ್‌ ದಾಳಿ ಪ್ರಕರಣಗಳು ಕಂಡು ಬರುತ್ತವೆ. ಅದರಲ್ಲಿ ಹೆಚ್ಚಿನ ಪ್ರಕರಣಗಳು ಮನೆಗಳ ಮುಂದಿರುವ ಮರ ವಾಸ್ತು ದೋಷಕ್ಕೆ ಕಾರಣವಾಗಿದೆ ಎಂಬುವುದು ತನಿಖೆ ವೇಳೆ ಬಯಲಿಗೆ ಬಂದಿದೆ. ಮರ ಸಂರಕ್ಷಣಾ ಕಾಯ್ದೆ ಪ್ರಕಾರ ಮರಗಳಿಗೆ ಹಾನಿ ಉಂಟುಮಾಡಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಪಾಲಿಕೆ ಕೂಡ ಮರ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಿದೆ. – ನರೇಂದ್ರ ಬಾಬು, ಡಿಫ್ಯೂಟಿ ಆರ್‌ಎಫ್ಒ, ಬಿಬಿಎಂಪಿ

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next