ಮುಳಬಾಗಿಲು: ಸಾಮಾನ್ಯವಾಗಿ ಜನಪ್ರತಿನಿಧಿಗಳು ತಮ್ಮ ಸರ್ಕಾರಿ ಕಚೇರಿಗಳನ್ನು ವಾಸ್ತು ರೀತಿ ಬದಲಾಯಿಸಿಕೊಳ್ಳುವುದನ್ನು ನೋಡಿ ದ್ದೇವೆ. ಆದರೆ, ನಗರದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ವಾಸ್ತು ದೋಷವೆಂದು ದಕ್ಷಿಣ ದಿಕ್ಕಿಗೆ ಇದ್ದ ತಮ್ಮ ಕಚೇರಿ ಬಾಗಿಲನ್ನು ಮುಚ್ಚಿ, ಪೂರ್ವಕ್ಕೆ ನಿರ್ಮಿಸಿರುವ ಘಟನೆ ನಡೆದಿದೆ.
ಸರ್ಕಾರ ಕೃಷಿ ಕ್ಷೇತ್ರ ಅಭಿವೃದ್ಧಿ ಪಡಿಸಲು, ಅಗತ್ಯ ಯೋಜನೆ ಅನುಷ್ಠಾನ, ಕೃಷಿಗೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡಲು ನಗರದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ನಿರ್ಮಿಸಲಾಗಿತ್ತು. ಅಂತೆಯೇ 1988ರ ಜೂ.16 ರಂದು ಅಂದಿನ ಕೃಷಿ ಸಚಿವ ಆರ್. ವಿ.ದೇಶಪಾಂಡೆ, ಶಾಸಕ ಆರ್. ವೆಂಕಟರಾಮಯ್ಯ ಉದ್ಘಾಟನೆ ಮಾಡಿದ್ದರು.
ರೈತರ ಸೇವೆಗೆ ಬಳಕೆ: ಅಂದಿನಿಂದ ತಾಲೂಕಿನ ಆವಣಿ, ದುಗ್ಗಸಂದ್ರ, ಬೈರಕೂರು, ತಾಯಲೂರು, ಕಸಬಾ ಹೋಬಳಿಗಳ 350 ಹಳ್ಳಿಗಳ ರೈತರಿಗೆ ಬೆಳೆಗೆ ಸಂಬಂಧಿಸಿದಂತೆ ಮಾಹಿತಿ, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ಕೃಷಿ ಸಲಕರಣೆಗಳ ವಿತರಣೆ, ಯೋಜನೆಗಳ ಅನುಷ್ಠಾನ, ನಿರ್ವಹಣೆ ಕಾರ್ಯಕ್ರಮವನ್ನು ಈ ಕಚೇರಿಯಿಂದ ಅಧಿಕಾರಿಗಳು ಮಾಡುತ್ತಿದ್ದರು.
31 ವರ್ಷಗಳಿಂದ ಸೇವೆ: ಇಂತಹ ಕಚೇರಿಯಲ್ಲಿ 31 ವರ್ಷಗಳಿಂದ ಹಲವು ಅಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರು ಸೇವೆ ಸಲ್ಲಿಸಿದ್ದಾರೆ. ಅದರಂತೆ ವರ್ಷದಿಂದ ಎಡಿಎ ಆಗಿ ಇದೇ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಮರನಾರಾಯಣರೆಡ್ಡಿ, ಮೂರುನಾಲ್ಕು ದಿನಗಳಿಂದ ತಮ್ಮ ಈ ಕೃಷಿ ಇಲಾಖೆ ಕಚೇರಿ ವಾಸ್ತು ದೋಷವೆಂದು ದಕ್ಷಿಣ ದಿಕ್ಕಿಗೆ ಇದ್ದ ಬಾಗಿಲನ್ನು ಮುಚ್ಚಿ, ಪೂರ್ವ ದಿಕ್ಕಿಗೆ ಇದ್ದ ಗೋಡೆ ಹೊಡೆದು ಹೊಸದಾಗಿ ನಿರ್ಮಿಸಿದ್ದಾರೆ ಎಂದು ರೈತರು ಆರೋಪಿಸುತ್ತಾರೆ.
31 ವರ್ಷಗಳಿಂದ ಯಾವ ಅಧಿಕಾರಿಗಳಿಗೂ ಕಂಡು ಬರದ ಈ ವಾಸ್ತುದೋಷವು, ಈಗ ಎಡಿಎಗೆ ಏಕೆ ಕಂಡು ಬಂತು? ಅಲ್ಲದೆ, ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೇ ವಿನಃ, ವಾಸ್ತು ದೋಷ, ಯಾರೋ ಹೇಳಿದ ಮಾತು ನಂಬಿಕೊಂಡು ಸಾರ್ವಜನಿಕರ ಸ್ವತ್ತಾದ ಸರ್ಕಾರಿ ಕಚೇರಿಯನ್ನೇ ತಮಗೆ ಬಂದಂತೆ ಬದಲಿಕೊಳ್ಳುವುದು ಸರಿಯಲ್ಲ ಎಂಬುದು ರೈತರ ಆರೋಪ.
ಮೇಲಧಿಕಾರಿಗಳ ಅನುಮತಿ ಇಲ್ಲದೇ ಮೂರು ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಸರ್ಕಾರಿ ಕೃಷಿ ಇಲಾಖೆ ಕಚೇರಿ ವಾಸ್ತುದೋಷವೋ ? ಅಥವಾ ಮಲಮೂತ್ರ ವಿಸರ್ಜನೆಯೋ? ಒಟ್ಟಿನಲ್ಲಿ ದುರಸ್ತಿ ಮಾಡಿಸುತ್ತಿರುವುದಕ್ಕೆ ರೈತರಲ್ಲಿ ಆಕ್ರೋಶ ವ್ಯಕ್ತವಾಗಿದೆ.