Advertisement

ವಾಡಿ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಸೌಲಭ್ಯ

12:37 PM May 16, 2022 | Team Udayavani |

ವಾಡಿ: ಪಟ್ಟಣದ ಹೊರ ವಲಯದ ಬಳಿರಾಮ ಚೌಕ್‌ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೀಗ ಸಂತಾನ ಹರಣ ಶಸ್ತ್ರಚಿಕಿತ್ಸಾ ಸೌಲಭ್ಯ ಒದಗಿಸಲಾಗಿದ್ದು, ನಗರ ಸೇರಿದಂತೆ ಸುತ್ತಲಿನ ಗ್ರಾಮಗಳ ಬಡ ಕುಟುಂಬದ ಬಾಣಂತಿಯರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಕಲಬುರಗಿ ನಗರದ ನುರಿತ ತಜ್ಞ ವೈದ್ಯರಿಂದ ಪ್ರತಿ ತಿಂಗಳು ಸಂತಾನ ಹರಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗುತ್ತಿದೆ.

Advertisement

ಕಳೆದ ಮೂರು ತಿಂಗಳ ಹಿಂದೆ ಚಿತ್ತಾಪುರ ತಾಲೂಕು ವೈದ್ಯಾಧಿಕಾರಿ ಡಾ| ಅಮರದೀಪ ಪವಾರ ಸ್ಥಳೀಯ ಆಸ್ಪತ್ರೆಗೆ ಅಗತ್ಯವಾಗಿದ್ದ ಸಂತಾನ ಹರಣ ಚಿಕಿತ್ಸಾ ಕೇಂದ್ರ ತೆರೆಯುವ ಮೂಲಕ ಜನರ ಬಹುದಿನಗಳ ಬೇಡಿಕೆ ಈಡೇರಿಸಿದ್ದಾರೆ. ಇದುವರೆಗೂ ಮೂರು ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸಲಾಗಿದ್ದು, ಸುಮಾರು 60ಕ್ಕೂ ಹೆಚ್ಚು ಮಹಿಳೆಯರು ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ನರಳುತ್ತಿದ್ದ ಆಸ್ಪತ್ರೆಗೆ ಈಗ ಮೂವರು ವೈದ್ಯರನ್ನು ನೇಮಿಸಲಾಗಿದೆ.

ಆಸ್ಪತ್ರೆ ವೈದ್ಯಾಧಿಕಾರಿ ಡಾ| ರಿಜೀವುಲ್ಲಾ ಖಾದ್ರಿ ನಿಯೋಜಿತ ಸೇವೆ ಸಲ್ಲಿಸುತ್ತಿದ್ದಾರೆ. ಹೆರಿಗೆ ಮತ್ತು ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ ಕಲಬುರಗಿ ನಗರಗಳ ಖಾಸಗಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದ ಸ್ಥಳೀಯರು ಸರ್ಕಾರಿ ಆಸ್ಪತ್ರೆಯತ್ತ ಮುಖಮಾಡಿದ್ದಾರೆ.

ವೈದ್ಯರು ಮತ್ತು ಅಗತ್ಯ ಸಿಬ್ಬಂದಿಗಳ ಸೇವೆ ಹೊಂದಿರುವ ಕಾರಣಕ್ಕೆ ಹಳಕರ್ಟಿ, ಲಾಡ್ಲಾಪುರ, ಚಾಮನೂರ, ಇಂಗಳಗಿ, ರಾವೂರ, ಕುಂದನೂರ, ಕಮರವಾಡಿ, ಸೂಲಹಳ್ಳಿ, ಕೊಂಚೂರು, ಬಳವಡಗಿ, ಕಡಬೂರ ಗ್ರಾಮಗಳು ಸೇರಿದಂತೆ ವಿವಿಧ ತಾಂಡಾಗಳ ಜನರು ವಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಹೆರಿಗೆಗಾಗಿ ದಾಖಲಾಗುತ್ತಿದ್ದಾರೆ. 108 ಸುರಕ್ಷಾ ಕವಚ ಸೌಲಭ್ಯ ಹೊಂದಿರುವ ಈ ಆಸ್ಪತ್ರೆ ಗ್ರಾಮೀಣ ಜನರ ಕೈಗೆಟುಕುವಂತಿದೆ.

ಸಮುದಾಯ ಆರೋಗ್ಯ ಕೇಂದ್ರ ಈಗ ಮತ್ತಷ್ಟು ಸುಧಾರಣೆ ಕಂಡಿದೆ. ಇಬ್ಬರು ಹೆರಿಗೆ ಶುಶ್ರೂಷಕಿಯರು ನೇಮಕವಾದ ನಂತರ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಡ್‌ಗಳ ಕೊರತೆಯಿಲ್ಲ. ದಿನದ 24 ಗಂಟೆಯಲ್ಲಿ ಯಾವುದೇ ಗಳಿಗೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರ ಹೆರಿಗೆ ಸುಸೂತ್ರವಾಗಿ ನೆರವೇರಿಸಲಾಗುತ್ತಿದೆ. ಜಿಲ್ಲಾ ವೈದ್ಯರಿಂದ ಪ್ರತಿ ತಿಂಗಳು ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಎರಡು ತಿಂಗಳಲ್ಲಿ 60 ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಎಷ್ಟೇ ಮಹಿಳೆಯರು ಆಸ್ಪತ್ರೆಗೆ ಬಂದು ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ ಹೆಸರು ನಮೂದಿಸಿದರೂ ತಿಂಗಳ ಕೊನೆ ವಾರದಲ್ಲಿ ಚಿಕಿತ್ಸೆ ನಡೆಸಲಾಗುತ್ತದೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಲ್ಲ. ಆದರೆ ರಾತ್ರಿ ಪಾಳಿಯದ್ದೇ ಸಮಸ್ಯೆ. ವೈದ್ಯರಿಗೆ ವಸತಿ ಸೌಲಭ್ಯ ದೊರೆತರೆ ರಾತ್ರಿ ವೇಳೆಯಲ್ಲೂ ವೈದ್ಯರ ಸೇವೆ ಸಿಗಲಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನೂ ಬಗೆಹರಿಸುತ್ತೇನೆ. -ಡಾ| ಅಮರದೀಪ ಪವಾರ, ಟಿಎಚ್‌ಒ, ಚಿತ್ತಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next