Advertisement

Vasati Yojana: ಜಿಲ್ಲೆಯಲ್ಲಿ ನಗರ ವಸತಿ ಯೋಜನೆಗಳಿಗೆ ಗ್ರಹಣ

02:49 PM Sep 12, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಸತಿ ಹಾಗೂ ನಿವೇಶನ ವಿಚಾರದಲ್ಲಿ ಬಡವರೊಂದಿಗೆ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳ ಚೆಲ್ಲಾಟ ಮುಂದುವೆರೆದಿದೆ.

Advertisement

ಬರೀ ಚುನಾವಣೆ ಹೊಸ್ತಿಲಲ್ಲಿ ಮಾತ್ರ ಬಡವರ ವಸತಿ, ನಿವೇಶನ ವಿಚಾರದಲ್ಲಿ ಆಸಕ್ತಿ ತೋರುವ ಅಧಿಕಾರಶಾಹಿ ಹಾಗೂ ಜನಪ್ರತಿನಿಧಿಗಳು ಬಳಿಕ ಅದರ ಬಗ್ಗೆ ಚಕಾರ ಎತ್ತುವುದಿಲ್ಲ ಎಂಬುದಕ್ಕೆ ಜಿಲ್ಲೆಯಲ್ಲಿ ವಾಜಪೇಯಿ ಹಾಗೂ ಅಂಬೇಡ್ಕರ್‌ ನಗರ ವಸತಿ ಯೋಜನೆಗಳ ಪ್ರಗತಿಯೆ ಸಾಕ್ಷಿ.

ಹೌದು, ಜಿಲ್ಲೆಯಲ್ಲಿ 2021-22 ಸಾಲಿನಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳದೇ ಎರಡು ಯೋಜನೆಗಳಲ್ಲಿ ಮಂಜೂರಾದ ಫ‌ಲಾನುಭವಿಗಳಿಗೆ ಅನುದಾನ ಬಾರದೇ ವಸತಿ ಯೋಜನೆಗಳಿಗೆ ಗ್ರಹಣ ಬಡಿದಿದೆ.

ಅಧಿಕಾರಿ ಹಾಗೂ ಜನಪ್ರಿನಿಧಿಗಳ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ಎರಡು ಯೋಜನೆಗಳಿಂದ ಒಟ್ಟು ನಗರ ಸ್ಥಳೀಯ ಸಂಸ್ಥೆಗಳಿಗೆ 525 ಮನೆಗಳು ಮಂಜೂರಾಗಿದ್ದು, ಆ ಪೈಕಿ 495 ಫ‌ಲಾನುಭವಿಗಳು ಆಯ್ಕೆಗೊಂಡರೂ ಇಲ್ಲಿವರೆಗೂ ಕೇವಲ 49 ಮನೆಗಳ ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, ಉಳಿದಂತೆ 476ಕ್ಕೂ ಮನೆಗಳ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿದೆ. ನಗರ ಭಾಗದಲ್ಲಿ ಕೂಡ ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಗಳಲ್ಲಿರುವ ಬಡ ಕುಟುಂಬಗಳಿಗೆ ಅದರಲ್ಲೂ ಸ್ವಂತ ನಿವೇಶನ ಇದ್ದರೆ ವಾಜಪೇಯಿ ಹಾಗೂ ಅಂಬೇಡ್ಕರ್‌ ವಸತಿ ಯೋಜನೆಯಡಿ ಸೂರು ಕಲ್ಪಿಸುವ ಯೋಜನೆ ಇದ್ದರೂ, ಜಿಲ್ಲೆಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಅಸಡ್ಡೆಯಿಂದ ವಸತಿ ಯೋಜನೆಗಳು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಕಾಲದಲ್ಲಿ ಅನುಷ್ಠಾನಗೊಳ್ಳದೇ ಕುಂಟುತ್ತಾ ಸಾಗಿದ್ದು ಹೇಳ್ಳೋವರು ಕೇಳ್ಳೋವರು ಇಲ್ಲವಾಗಿದೆ. 525 ಮಂಜೂರಾದ ಮನೆಗಳ ಪೈಕಿ ಇಲ್ಲಿವರೆಗೂ 109 ಮನೆಗಳಿಗೆ ತಳಪಾಯ ಹಾಕಿದ್ದು, ಉಳಿದಂತೆ 64 ಮನೆಗಳಿಗೆ ಲಿಂಟಲ್‌, 112 ಮನೆಗಳು ಛಾವಣಿವರೆಗೂ ಕಾಮಗಾರಿ ನಡೆದಿದೆಂದು ಜಿಲ್ಲಾ ನಗರಾಭಿವೃದ್ಧಿ (ಕೋಶ) ಇಲಾಖೆ ದಿಶಾ ಸಭೆಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.

ಗಮನ ಕೊಡದ ಜಿಲ್ಲಾಡಳಿತ: ಜಿಲ್ಲೆಯಲ್ಲಿ ಮೊದಲೇ ನಿವೇಶನ ರಹಿತರ ಪರದಾಟ ಮುಂದುವರೆದಿದೆ. ಸಾವಿರಾರು ಎಕರೆ ಜಮೀನು ಹುಡುಕಿ ನಿವೇಶನ ರಹಿತರಿಗೆ ಇನ್ನೂ ಹಕ್ಕು ಪತ್ರ ಕೊಡದೇ ಮೀನಾಮೇಷ ಎಣಿಸುತ್ತಿರುವ ಜಿಲ್ಲಾಡಳಿತ, ಕನಿಷ್ಟ ನಿವೇಶನ ಇದ್ದರೂ ಫ‌ಲಾನುಭವಿಗಳಿಗೆ ಸರ್ಕಾರದಿಂದ ಮನೆ ನಿರ್ಮಿಸಿಕೊಳ್ಳಲು ಸಿಗಬೇಕಾದ ಅನುದಾನವನ್ನು ಸಕಾಲದಲ್ಲಿ ಕೊಡಿಸುವಲ್ಲಿ ಜಿಲ್ಲೆಯ ಸಂಬಂಧಪಟ್ಟ ಇಲಾಖೆಗಳು, ಚುನಾಯಿತ ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳದೇ ಇರುವುದು ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ.

Advertisement

161 ಮನೆ ಅಡಿಪಾಯವೇ ಹಾಕಿಲ್ಲ : ಜಿಲ್ಲೆಯ ಆರು ನಗರ ಸ್ಥಳೀಯ ಸಂಸ್ಥೆಗಳಿಗೆ ಮಂಜೂರಾಗಿರುವ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಯೋಜನೆಯಡಿ 2021-22ನೇ ಸಾಲಿನಲ್ಲಿ ಮಂಜೂರು ಆಗಿರುವ ಒಟ್ಟು 525 ಮನೆಗಳ ಪೈಕಿ 161 ಮನೆಗಳ ಕಟ್ಟಡ ಕಾಮಗಾರಿಯೆ ಆರಂಭಗೊಂಡಿಲ್ಲ. ಚಿಕ್ಕಬಳ್ಳಾಪುರದಲ್ಲಿ 30, ಚಿಂತಾಮಣಿಯಲ್ಲಿ 32, ಶಿಡ್ಲಘಟ್ಟದಲ್ಲಿ 44, ಗೌರಿಬಿದನೂರಲ್ಲಿ 35, ಬಾಗೇಪಲ್ಲಿ ಪುರಸಭೆ ವ್ಯಾಪ್ತಿಯಲ್ಲಿ 7 ಹಾಗೂ ಗುಡಿಬಂಡೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 13 ಮನೆಗಳ ನಿರ್ಮಾಣ ಕಾರ್ಯ ಇನ್ನೂ ಆರಂಭಗೊಳ್ಳದೇ ನನೆಗುದಿಗೆ ಬಿದ್ದಿದೆ.

ಫ‌ಲಾನುಭವಿಗಳಿಗೆ ಅನುದಾನ ಬರುತ್ತಿಲ್ಲವಂತೆ!: ವಾಜಪೇಯಿ ನಗರ ವಸತಿ ಯೋಜನೆಯಡಿ ಮಂಜೂರಾದ ಫ‌ಲಾನುಭವಿಗಳಿಗೆ ಸಕಾಲದಲ್ಲಿ ಸರ್ಕಾರದಿಂದ ಬಿಡುಗಡೆ ಆಗುವ ಸಹಾಯ ಧನ ಕಂತು ಕಾಲಕಾಲಕ್ಕೆ ಬರುತ್ತಿಲ್ಲ ಎಂದು ಫ‌ಲಾನುಭವಿಗಳು ತಮ್ಮ ಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ತಾವೇ ಹಣ ಹೊಂದಿಸಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ, ಬಹುತೇಕ ಬಡವರು ಸರ್ಕಾರದಿಂದ ಬರುವ ಸಹಾಯ ಧನಕ್ಕೆ ಎದುರು ನೋಡುತ್ತಿದ್ದು, ಸರ್ಕಾರ ತಮ್ಮ ಪಾಲಿನ ಸಹಾಯಧನ ಕೊಟ್ಟರೆ ನಾವು ಮನೆ ನಿರ್ಮಿಸಿಕೊಳ್ಳಬಹುದೆಂದು ವಸತಿ ಯೋಜನೆಗೆ ಆಯ್ಕೆಗೊಂಡ ಫ‌ಲಾನುಭವಿಗಳು ಹೇಳುತ್ತಿದ್ದಾರೆ.

 -ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next