Advertisement

ಚಿತ್ರ ವಿಮರ್ಶೆ: ಫ್ಯಾಮಿಲಿ ಡ್ರಾಮಾದಲ್ಲಿ ನಲಿದ ವಾಸಂತಿ

04:15 PM Dec 03, 2022 | Team Udayavani |

ಆತ ತಂದೆಯ ಪ್ರೀತಿಯ ಮಗ ಸಂಜು. ಹುಟ್ಟುತ್ತಿದ್ದಂತೆಯೇ ತಂದೆಯ ಅದೃಷ್ಟ ಬದಲಾಯಿಸಿದ “ಲಕ್ಕಿ ಚಾರ್ಮ್’ ಹುಡುಗನ ಮೇಲೆ ತಂದೆಗೆ ವಿಪರೀತವೆನ್ನುವಂತಹ ಒಲವು. ಅತಿಯಾಗಿ ಪ್ರೀತಿಯಿಂದ ಆಡಿಸಿ, ಬೆಳೆಸಿದ ಈ ಮಗ ಕಾಲೇಜ್‌ ಮೆಟ್ಟಿಲು ಹತ್ತುತ್ತಿದ್ದಂತೆ, ಬದಲಾಗುತ್ತಾನೆ. ಮಗನೇ ತನ್ನ ಸರ್ವಸ್ವ ಎಂದು ಭಾವಿಸಿದ ತಂದೆಗೆ ಮಗನೇ “ಬಿಸಿತುಪ್ಪ’ವಾಗುತ್ತಾನೆ. ಗರ್ಲ್ ಫ್ರೆಂಡ್ಸ್‌, ವೀಕೆಂಡ್‌ ಪಾರ್ಟಿ, ಸ್ನೇಹಿತರ ಜೊತೆ ಮೋಜು-ಮಸ್ತಿ ಹೀಗೆ ಇಂದಿನ ಜನರೇಶನ್‌ನ ಎಲ್ಲ ಗುಣಸಂಪನ್ನತೆಯನ್ನೂ ಮೈಗೂಡಿಸಿಕೊಳ್ಳುತ್ತಾನೆ. ಮಗನ ಈ ಮಿತಿಮೀರಿದ ವರ್ತನೆ, ತನ್ನ ಸ್ಥಾನಮಾನಕ್ಕೆ ಕುತ್ತು ತರುವಂತಾದರೆ, ಜವಾಬ್ದಾರಿಯುತ ತಂದೆಯಾದವನು ಏನು ಮಾಡಬೇಕು? ಮಗನ ಇಷ್ಟದಂತೆ ಅವನನ್ನು ಬಿಡಬೇಕೇ? ಅಥವಾ ಅವನಿಗೆ ಜೀವನ ಪಾಠ ಕಲಿಸಬೇಕೆ? ಇಂಥದ್ದೊಂದು ವಿಷಯವನ್ನು ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರ “ವಾಸಂತಿ ನಲಿದಾಗ’.

Advertisement

ಹೆತ್ತವರ ಯೋಚನೆ, ಮಕ್ಕಳ ಕನಸು, ಸಮಾಜದ ಸ್ಥಿತಿಗತಿ ಎಲ್ಲವನ್ನೂ ಇಟ್ಟುಕೊಂಡು ಸಿನಿಮಾದ “ವಾಸಂತಿ ನಲಿದಾಗ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ರವೀಂದ್ರ ವೆಂಶಿ.

ಲವ್‌, ಎಮೋಶನ್ಸ್‌, ಕಾಮಿಡಿ, ಹಾಡು, ಡ್ಯಾನ್ಸ್‌, ಆ್ಯಕ್ಷನ್‌ ಹೀಗೆ ಎಲ್ಲ ಎಂಟರ್‌ ಟೈನ್ಮೆಂಟ್‌ ಅಂಶಗಳನ್ನು ಇಟ್ಟುಕೊಂಡು ಕಂಪ್ಲೀಟ್‌ ಫ್ಯಾಮಿಲಿ ಕೂತು ನೋಡುವಂತ ಸಿನಿಮಾವನ್ನು ತೆರೆಮೇಲೆ ತರುವ ಚಿತ್ರತಂಡ ಆಶಯ “ವಾಸಂತಿ ನಲಿದಾಗ’ ಸಿನಿಮಾದಲ್ಲಿ ಈಡೇರಿದೆ.

ನವನಟ ರೋಹಿತ್‌ ಮೊದಲ ಸಿನಿಮಾದಲ್ಲೇ ನಾಯಕನಾಗಿ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ಡ್ಯಾನ್ಸ್‌, ಆ್ಯಕ್ಷನ್‌, ಡೈಲಾಗ್‌ ಡೆಲಿವರಿ ಎಲ್ಲದರಲ್ಲೂ ಪರಿಶ್ರಮ ಹಾಕಿರುವುದು ಚಿತ್ರದಲ್ಲಿ ಕಾಣುತ್ತದೆ. ಮಗನ ಮೇಲೆ ಅತಿಯಾದ ಪ್ರೀತಿಯಿಟ್ಟುಕೊಂಡ ತಂದೆ-ತಾಯಿಯಾಗಿ ಸಾಯಿಕುಮಾರ್‌, ಸುಧಾರಾಣಿ ಅವರದ್ದು ಮನಮುಟ್ಟುವ ಅಭಿನಯ. ಉಳಿದಂತೆ ಬಹುತೇಕ ಹೊಸ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಸಿನಿಮಾದ ಒಂದೆರಡು ಹಾಡುಗಳು, ಛಾಯಾಗ್ರಹಣ ತಂತ್ರಿಕವಾಗಿ ಸಿನಿಮಾವನ್ನು ಅಂದಗಾಣುವಂತೆ ಮಾಡಿದೆ. ವಾರಾಂತ್ಯದಲ್ಲಿ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಸಿನಿಮಾವನ್ನು ನೋಡಲು ಬಯಸುವ ಪ್ರೇಕ್ಷಕರು ಒಮ್ಮೆ ವಾಸಂತಿ ನಲಿಯುವುದನ್ನು ನೋಡಿಬರಲು ಅಡ್ಡಿಯಿಲ್ಲ.

Advertisement

ಜಿಎಸ್‌ಕೆ

Advertisement

Udayavani is now on Telegram. Click here to join our channel and stay updated with the latest news.

Next