Advertisement

ಕಳಕೊಂಡ ಸಂಪತ್ತೇ ಹೆಚ್ಚು ; ಗಳಿಕೆ ಜನಪ್ರೀತಿ ಮಾತ್ರ

06:15 AM Apr 03, 2018 | Team Udayavani |

ಕಟಪಾಡಿ: ಎರಡು ಬಾರಿ ಮೀನುಗಾರಿಕೆ, ಬಂದರು ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ, ಐದು ಬಾರಿ ಶಾಸಕರಾಗಿ ಕಾಪುವನ್ನು ಪ್ರತಿನಿಧಿಸಿದ್ದ ವಸಂತ ವಿ. ಸಾಲ್ಯಾನ್‌ ಸುದೀರ್ಘ‌ ರಾಜಕೀಯ ಬದುಕನ್ನು ಕಂಡವರು. ಅವರ ಪತ್ನಿ ಗೀತಾ ವಿ. ಸಾಲ್ಯಾನ್‌ “ಉದಯವಾಣಿ’ ಪ್ರತಿನಿಧಿ ಯೊಂದಿಗೆ ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ…

Advertisement

ಮತದಾರರಿಂದ ಆದರಾತಿಥ್ಯ
ಸಾಲ್ಯಾನರು ಎಷ್ಟೇ ಕಾರ್ಯದೊತ್ತಡದಲ್ಲಿದ್ದರೂ ಅಹವಾಲು ಹಿಡಿದುಕೊಂಡು ಬಂದವನ್ನು ಕಾಯಿಸುತ್ತಿರಲಿಲ್ಲ. ಚುನಾವಣೆ ಸಂದರ್ಭ ಪ್ರಚಾರಕ್ಕೆ ನಾನೂ ಮನೆ ಮನೆಗೆ ಹೋಗುತ್ತಿದ್ದೆ. ಆಗ ಮತದಾರರು ಬಹ ಳಷ್ಟು ಆದರಾತಿಥ್ಯ ನೀಡುತ್ತಿದ್ದರು.  ಪತಿಯೊಂದಿಗೆ ತೆರಳುವಾಗ ನಾನು ಚೀಲದಲ್ಲಿ ಬಿಸ್ಕಿಟ್‌, ನೀರು, ಆಹಾರದ ಪೊಟ್ಟಣ ಹಿಡಿದುಕೊಂಡೇ ಹೊರಡುತ್ತಿದ್ದೆ. “ಸಾಲ್ಯಾನ್‌ರ್‌ ಜನೊಕುಲ್ನ ಮಸ್ತ್ ಬೇಲೆ ಮಲೆªರ್‌’ ಎಂದು ಜನ ಅಭಿಮಾನದಿಂದ ಹೇಳುವಾಗ ಮನಸ್ಸಿಗೆ ಖುಷಿಯಾಗುತ್ತಿತ್ತು. ಜತೆಗೆ ಚಾಲಕ, ಗನ್‌ಮ್ಯಾನ್‌, ಸೆಕ್ಯೂರಿಟಿ ಯಾರೇ ಇದ್ದರೂ ಮೊದಲು ಅವರಿಗೆ ಊಟ, ತಿಂಡಿ, ಚಹಾ ಕೊಡಿಸುತ್ತಿದ್ದರು.

ಕನ್ನಡ ಶಾಲೆಯ ಮಕ್ಕಳಿಗೆ ಶೂ: ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಾಲ್ಯಾನ್‌ ಅವರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ ಪಡುಬೆಳ್ಳೆ ನಾರಾಯಣಗುರು ಶಾಲೆಗೆ 16 ಎಕರೆ ಜಮೀನು ಮಂಜೂರುಗೊಳಿಸಿದ್ದರು. ಅಲ್ಲಿನ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಶೂ ಧರಿಸುತ್ತಾರೆ. ಕನ್ನಡ ಮಾಧ್ಯಮ ಮಕ್ಕಳಿಗೆ ಬೂಟು ಇಲ್ಲ ಎಂದು ಬೇಸರಪಟ್ಟ ನಮ್ಮವರು ತಮ್ಮ ಪಿಂಚಣಿಯಲ್ಲಿ 35,000 ರೂ. ಕೊಟ್ಟು ಶೂ ವಿತರಿಸಿದ್ದರು ಎಂದು ಗೀತಾ ನೆನಪಿಸಿಕೊಳ್ಳುತ್ತಾರೆ. ನಮ್ಮವರಿಗೆ ಐಸ್‌ಪ್ಲಾಂಟ್‌ ಇತ್ತು. ರಾಜಕೀಯದಿಂ ದಾಗಿ ಅದನ್ನು ಮಾರಾಟ ಮಾಡಬೇಕಾಯಿತು. ಮಣಿಪಾಲದಲ್ಲಿದ್ದ ಕೈಗಾರಿಕೆ ಮೇಲೂ ಸಾಕಷ್ಟು ಸಾಲ ಪಡೆದಿದ್ದರು. ರಾಜಕೀಯದಲ್ಲಿ ಕಳಕೊಂಡದ್ದೇ ಹೆಚ್ಚು. ಗಳಿಸಿದ್ದು ಜನರ ಅಭಿಮಾನ, ಪ್ರೀತಿ ಮಾತ್ರ. ರಾಜಕಾರಣಿಗಳ ಭ್ರಷ್ಟಾಚಾರದ ಬಗೆಗೆ ಮಾತು ಕೇಳಿಬಂದಾಗ “ನಮ್ಮ ಮನೆಗೆ ರೈಡ್‌ ಮಾಡಿದರೆ ಸಾಲ ಪತ್ರ ಮಾತ್ರ ಸಿಗುತ್ತದೆ’ ಎಂದು ಸಾಲ್ಯಾನ್‌ ಹೇಳುತ್ತಿದ್ದರು. ಸಾರ್ವಜನಿಕರು “ಸಾಲ್ಯಾನರು ಹಣ ಮಾಡಲಿಲ್ಲ’ ಎಂಬುದನ್ನು ಈಗಲೂ ಹೇಳುತ್ತಾರೆ.

ಎಲ್ಲರೂ ಕೈಬಿಟ್ಟಾಗ …
ಕಟ್ಟಿ ಬೆಳೆಸಿದ ಪಕ್ಷವೇ ಕೈಬಿಟ್ಟಾಗ ತುಂಬಾ ಚಿಂತಿತರಾಗಿದ್ದ ಸಾಲ್ಯಾನ್‌ ಅವರು ಜೆಡಿಎಸ್‌ನಲ್ಲಿ ಚುನಾವಣೆ ಎದುರಿಸುವಂತಾಗಿತ್ತು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮನೆಗೆ ಬಂದು ಬೆಂಬಲಿಸಿದ್ದರು. ಹೊರಗಿನ ಎಲ್ಲರೂ ಕೈಬಿಟ್ಟಾಗ ಅವರ ಕುಟುಂಬಿಕರಾಗಿ ನಾವು ಬೆಂಬಲಿಸಿದ್ದೆವು. ಜನಸೇವೆಯನ್ನು  ಮುಂದುವರಿಸುವ ಅಭಿಲಾಷೆಯಿಂದ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತನಾಗಿ ತೊಡಗಿಸಿಕೊಂಡರು.  2004, 2008ರಲ್ಲಿ  ಸೋಲುಂಡರೂ ಪಕ್ಷ ಕಟ್ಟುವ ಕೆಲಸ ಮುನ್ನಡೆಸಿದ್ದರು. ತಾನೇ ಪಕ್ಷವನ್ನು ಕಟ್ಟಿ ಬೆಳೆಸಿದ ಕಾಪು ಕ್ಷೇತ್ರದಲ್ಲಿ  ಟಿಕೆಟ್‌ ಕೊಡದೆ ಕಾಂಗ್ರೆಸ್‌ ನಾಯಕರು ಅನ್ಯಾಯ ಮಾಡಿದರೆಂಬ ಕೊರಗು ಸಾಯುವವರೆಗೂ ಇತ್ತು. ಅದನ್ನು ನೆನೆದು ಆಗಾಗ ಕಣ್ಣೀರು ಹಾಕುತ್ತಿದ್ದರು ಎಂದು ಗೀತಾ ಮನದ ದುಗುಡವನ್ನು ಹೊರಗೆಡಹಿದರು.

– ವಿಜಯ ಆಚಾರ್ಯ, ಉಚ್ಚಿಲ

Advertisement
Advertisement

Udayavani is now on Telegram. Click here to join our channel and stay updated with the latest news.

Next