ಮುಂಬಯಿ: ವಸಾಯಿ ತಾಲೂಕು ಮೊಗವೀರ ಸಂಘದ ಆಶ್ರಯದಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಆ. 12 ರಂದು ವಸಾಯಿ ಪಶ್ಚಿಮದ ಆನಂದ ನಗರದ ನ್ಯೂ ವರ್ಷಾ ಕಟ್ಟಡದಲ್ಲಿರುವ ಸಂಘದ ಕಚೇರಿಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಜರಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಸ್ಥಾಪಕಾಧ್ಯಕ್ಷ ಚಂದ್ರಶೇಖರ್ ಪುತ್ರನ್ ಅವರು ಮಾತನಾಡಿ, ಬಲಿಷ್ಠವಾದ ಸಂಘಟನೆ ಸಮಾಜದ ಅಸ್ವಿತ್ವದ ಅಡಿಪಾಯವಾಗಿದೆ. ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು. ಉನ್ನತ ಶಿಕ್ಷಣದಿಂದ ಸ್ವಾವಲಂಬಿ ಬದುಕು ಸಾಧ್ಯ. ಸಂಪೂರ್ಣ ಸಾಕ್ಷರತೆ ಮೊಗವೀರ ಬಂಧುಗಳ ಧ್ಯೇಯವಾಗಿರಬೇಕು ಎಂದರು.
ಗೌರವಾಧ್ಯಕ್ಷ ರಾಘು ಸುವರ್ಣ ಅವರು ಮಾತನಾಡಿ, ಕೂಡು ಕುಟುಂಬದಲ್ಲಿ ಬೆಳೆದ ನಾವು ಸಂಬಂಧಗಳನ್ನು ಉಳಿಸಿ ಮಧುರ ಬಾಂಧವ್ಯವನ್ನು ಶಾಶ್ವತಗೊಳಿಸಬೇಕು. ಮೊಗವೀರ ಸಂಘದ ಮೂಲಕ ಮೆಡಿಕಲ್ ಫಂಡ್‌ನ್ನು ಸ್ಥಾಪಿಸಿ ಆ ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ನುಡಿದರು.
ಮಾಜಿ ಅಧ್ಯಕ್ಷ ಯಶೋಧರ ಕೋಟ್ಯಾನ್, ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಮೋಹಿನಿ ಮಲ್ಪೆ, ಭೋಜರಾಜ್ ಕೋಟ್ಯಾನ್, ಶುಭ ಹಾರೈಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಸಾಯಿ ತಾಲೂಕು ಮೊಗವೀರ ಸಂಘದ ಅಧ್ಯಕ್ಷ ವಿನೋದ್ ಕುಂದರ್ ಅವರು ಮಾತನಾಡಿ, ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹದೊಂದಿಗೆ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಗೆ ನಿರಂತರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಿರಿಯರ ಮಾರ್ಗದರ್ಶನ, ಸಲಹೆ, ಸೂಚನೆಯಿಂದ ಯಶಸ್ಸಿದ ಹಾದಿ ಸುಗಮವಾಗುತ್ತದೆ. ಉಚಿತ ಪುಸ್ತಕ ಹಾಗೂ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಮಕ್ಕಳು ಹೆಚ್ಚಿನ ಜ್ಞಾನಾರ್ಜನೆ ಸಂಪಾದನೆ ಹೊಂದಿ ಸಹಾಯಹಸ್ತವನ್ನು ಬಡ ಮಕ್ಕಳಿಗೆ ನೀಡಬೇಕು ಎಂದರು.
ಸಮಾರಂಭದಲ್ಲಿ ಸಿಎ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾದ ಶ್ರುತಿ ಧನಂಜಯ ಮೆಂಡನ್ ಅವರನ್ನು ಗಣ್ಯರು ಸಮ್ಮಾನಿಸಿದರು. ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ಮುರಳಿ ಪುತ್ರನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಸಾಲ್ಯಾನ್, ಕೋಶಾಧಿಕಾರಿ ರಾಜ್ ಕಾಂಚನ್ ಉಪಸ್ಥಿತರಿದ್ದರು. ಕಾರ್ಯಕ್ರಮ ವಿಭಾಗದ ಕಾರ್ಯಾಧ್ಯಕ್ಷ ಸುಧೀರ್ ಸಾಲ್ಯಾನ್ ವಂದಿಸಿದರು.
ಟ್ರಸ್ಟಿ ಪ್ರದೀಪ್ ಪುತ್ರನ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಮಾಜ ಸೇವಕರಾದ ದೇವೇಂದ್ರ ಬುನ್ನನ್, ಅಶೋಕ್ ಶೆಟ್ಟಿ, ದಯಾನಂದ ಪೂಜಾರಿ, ಮೋಹನ್ ಪುತ್ರನ್ ದಾನಿಗಳಾಗಿ ಸಹಕರಿಸಿದರು. ಅಧಿಕ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ:ರಮೇಶ್ ಅಮೀನ್