Advertisement

ವಸಾಯಿ ಕರ್ನಾಟಕ ಸಂಘದ 32ನೇ ವಾರ್ಷಿಕೋತ್ಸವ ಸಂಭ್ರಮ

04:43 PM Feb 05, 2018 | Team Udayavani |

ಮುಂಬಯಿ: ಶತಮಾನಗಳ ಇತಿಹಾಸ ಹೊಂದಿರುವ ಸಂಘಟನೆಯಿಂದ ನಾವು ಯಶಸ್ಸಿನ ಹಾದಿಯನ್ನು ತಲುಪಲು ಸಾಧ್ಯವಾಯಿತು. ಆರ್ಥಿಕ ಕ್ಷೇತ್ರದಲ್ಲಿ ಬ್ಯಾಂಕ್‌ಗಳು, ಕ್ರಿಡಿಟ್‌ ಸೊಸೈಟಿಗಳು, ಶಿಕ್ಷಣದಲ್ಲಿ ರಾತ್ರಿ-ಹಗಲು ಶಾಲೆಗಳು, ಕ್ರೀಡೆಗೆ ಪ್ರೋತ್ಸಾಹ, ರಾಜಕೀಯಕ್ಕೆ  ಪ್ರೇರಣೆ, ಲೇಖಕರಿಗೆ ಮುಖ ಪತ್ರಿಕೆ ಇತ್ಯಾದಿಗಳು ಸಮುದಾಯ ಸಂಸ್ಥೆಗಳ ಸಾಹಸದ ಸಾಧನೆಗಳಾಗಿವೆ. ತುಳುನಾಡಿನ ಅಭಿವೃದ್ಧಿಯಲ್ಲಿ ಮುಂಬಯಿ-ಸಂಘಟನೆಗಳ  ಕೊಡುಗೆ ಅಪಾರವಾದದ್ದು ಎಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು ನುಡಿದರು.

Advertisement

ಜ. 28ರಂದು  ವಸಾಯಿ ಪಶ್ಚಿಮದ ಸಾಯಿನಗರ ಮೈದಾನದ ಕಲಾ ವೇದಿಕೆಯಲ್ಲಿ ವಸಾಯಿ ಕರ್ನಾಟಕ ಸಂಘದ 32ನೇ ವಾರ್ಷಿಕೋತ್ಸವದ ಸಮ್ಮಾನ-ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು, ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವುದು ಅಭಿಮಾನದ ಸಂಗತಿ. ತುಳು-ಕನ್ನಡಿಗರ ಸೌಹಾರ್ದದ ಸಂಕೇತ ಬೃಹತ್‌ ಜನಸ್ತೋಮದಿಂದ ಸಾಬೀತಾಗಿದೆ. ಇದೇ ಒಗ್ಗಟ್ಟು ಸದಾ ಮುಂದುವರಿಯಲಿ ಎಂದು ಹಾರೈಸಿದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಭಾಯಂದರ್‌ ಸೈಂಟ್‌ ಆ್ಯಗ್ನೇಸ್‌ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯಾಧ್ಯಕ್ಷ ಅರುಣೋದಯ ರೈ ಅವರು ಮಾತನಾಡಿ, ನಮ್ಮ ಶಾಲೆಯಲ್ಲಿ ಉಚಿತವಾಗಿ ಕನ್ನಡ ಕಲಿಕ ಕೇಂದ್ರವಿದೆ. ಚಿಣ್ಣರ ಬಿಂಬದ 

ಶಿಕ್ಷಕರು ತರಬೇತಿ ನೀಡುತ್ತಾರೆ. ಆಸಕ್ತರು ಇದರಲ್ಲಿ ಭಾಗಿಯಾಗಬಹುದು. ಉತ್ತಮ ಕಲಾಪ್ರೌಢಿಮೆಯ ಮಕ್ಕಳು ವಸಾಯಿ ಪರಿಸರದಲ್ಲಿದ್ದಾರೆ. ಅವರ ಅಪೂರ್ವ ನಟನೆಯ ಕನ್ನಡ ಸಂಭಾಷಣೆಯ ಹಿಡಿತ ಕನ್ನಡ ಭಾಷೆಯನ್ನು ಉಳಿಸಲು ಸಹಕಾರಿಯಾಗಲಿದೆ ಎಂದರು.

ಸಂಘದ ಅಭಿವೃದ್ಧಿಗಾಗಿ ಶ್ರಮಿಸಿದ ದೇವೇಂದ್ರ ಬುನ್ನನ್‌ ದಂಪತಿ ಮತ್ತು ಮಹಿಳಾ ವಿಭಾಗದ ಮಂಜುಳಾ ಆನಂದ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ,  ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ಬಾಲಕಲಾವಿದೆಯರಾದ ದೀಕ್ಷಾ ಶೆಟ್ಟಿ, ಲಕ್ಷಿತಾ ಶೆಟ್ಟಿ, ಪ್ರಥಮ್‌ ಶೆಟ್ಟಿ, ಶಾನ್‌ ಶೆಟ್ಟಿ, ಸಮೀಕ್ಷಾ ಶೆಟ್ಟಿ, ಭಕ್ತಿ ಬುನ್ನನ್‌, ನಿಧಿ ರೈ, ಅವಿಶ್‌ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಜಯಾ ಅಶೋಕ್‌ ಶೆಟ್ಟಿ, ರಾಮಚಂದ್ರ ಹೆಗ್ಡೆ, ಮೋಹಿನಿ ಮಲ್ಪೆ, ಭಾಸ್ಕರ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು.

Advertisement

ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ ಸ್ವಾಗತಿಸಿದರು. ವಾರ್ಷಿಕ ವರದಿಯನ್ನು ಜತೆ ಕಾರ್ಯದರ್ಶಿ ಶಂಕರ ಆಳ್ವ ವಾಚಿಸಿದರು. ಕೋಶಾಧಿಕಾರಿ ಭೋಜ ಟಿ. ಅಂಚನ್‌ ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಪಾಂಡು ಎಲ್‌. ಶೆಟ್ಟಿ, ಜತೆ ಕೋಶಾಧಿಕಾರಿ ವಿಜಯ ಎಂ. ಶೆಟ್ಟಿ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಯಶೋಧರ ಕೋಟ್ಯಾನ್‌ ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ಹರಿಶ್ಚಂದ್ರ ಜಿ. ಕುಂದರ್‌ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವೈಭವ ಮತ್ತು ಡಾ| ಚಿತ್ರಾ ವಿಶ್ವನಾಥನ್‌ ಅವರ ನಿರ್ದೇಶನದಲ್ಲಿ ಮಹಿಳಾ ಸದಸ್ಯೆಯರಿಂದ ಪುರಂದರ ದಾಸರ ಚರಿತ್ರೆ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ಸಂಘದ ಮಾಜಿ ಅಧ್ಯಕ್ಷ ದಿವಂಗತ ಕರ್ನಿರೆ ಶ್ರೀಧರ ಶೆಟ್ಟಿ ಅವರ ಕಾರ್ಯಯೋಜನೆಗಳನ್ನು ಸಾಕಾರಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಸಾಯಿ ಪರಿಸರದ ತುಳು-ಕನ್ನಡಿಗರ 12 ತಂಡಗಳು ನೃತ್ಯದಲ್ಲಿ ಭಾಗವಹಿಸಿ ನಾವೆಲ್ಲ ಒಂದೇ ಎಂಬ  ಸಂದೇಶವನ್ನು ಸಾರಿವೆ.  ಭವಿಷ್ಯದಲ್ಲೂ ಸಂಸ್ಥೆಯ ಮುಖಾಂತರ  ಯಕ್ಷಗಾನ, ಕಲೆಗೆ ಪ್ರೋತ್ಸಾಹ, ವೃತ್ತಿಪರ ಶಿಕ್ಷಣ ತರಬೇತಿ, ಧಾರ್ಮಿಕ ಮತ್ತು ಸಮಾಜಪರ ಕಾರ್ಯಯೋಜನೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಅದಕ್ಕಾಗಿ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ.  
-ಒ.ಪಿ. ಪೂಜಾರಿ, ಅಧ್ಯಕ್ಷರು, ವಸಾಯಿ ಕರ್ನಾಟಕ ಸಂಘ

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next