ಕಳೆದ ವರ್ಷ ಮುಂಗಾರು ಆರಂಭದಿಂದಲೇ ಅಬ್ಬರಿಸಿದ ಕಾರಣ ಭತ್ತದ ಕೃಷಿಕನ ನೇಜಿ ನಾಟಿಗೆ ಯಾವುದೇ ತೊಡಕು ಉಂಟಾಗಿರಲಿಲ್ಲ. ಜೂನ್ ತಿಂಗಳಲ್ಲಿ ಭತ್ತದ ನೇಜಿ ನಾಟಿ ಮಾಡಿ ನೆಮ್ಮದಿಯ ಉಸಿರು ಬಿಡುತ್ತಿದ್ದ ರೈತ ಈ ಬಾರಿ ಅಸಹಾಯಕನಾಗಿದ್ದಾನೆ. ಮೇ ತಿಂಗಳ ಅಂತ್ಯದಲ್ಲಿ ಒಂದೆರಡು ವಾಡಿಕೆ ಮಳೆಯಾಗಿ ಜೂನ್ ಆರಂಭದಲ್ಲಿ ಭುವಿಗಿಳಿಯುತ್ತಿದ್ದ ಮುಂಗಾರು ಮಳೆ ಈ ಬಾರಿ ಜುಲೈ ತಿಂಗಳು ಅಂತ್ಯವಾಗುತ್ತಿದ್ದರೂ ಕರುಣೆ ತೋರಿಲ್ಲ.
Advertisement
ಯಾವುದೇ ಬೆಳೆ ಬೆಳೆಯಬೇಕಾದರೂ ಸರಿಯಾದ ಸಮಯದಲ್ಲಿ, ಸರಿಯಾಗಿ ಮಳೆ ಸುರಿದರಷ್ಟೇ ಫಲ. ಕಡಿಮೆ ಮಳೆ, ಮಳೆಯ ವಿಳಂಬ ಕೃಷಿ ಕ್ಷೇತ್ರಕ್ಕೆ ಎಂದಿಗೂ ಪೆಟ್ಟು. ಈ ಬಾರಿ ವರುಣ ಸರಿಯಾಗಿ ಕೃಪೆ ತೋರದ ಕಾರಣ ರೈತರು ಪರದಾಡುವಂತಾಗಿದೆ. ಕಳೆದ ವರ್ಷ ನೇಜಿ ನಾಟಿಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಈ ಬಾರಿ ಜುಲೈ ತಿಂಗಳು ಅಂತ್ಯವಾಗಿದ್ದರೂ ಹೇಳಿಕೊಳ್ಳುವಷ್ಟು ಮಳೆಯಾಗಿರದ ಕಾರಣ ಭತ್ತ ಬೆಳೆಯುವ ರೈತರು ಸಮಸ್ಯೆಯ ನ್ನು ಎದುರಿಸುತ್ತಿದ್ದು, ಆತಂಕ ಸೃಷ್ಟಿಸಿದೆ.
ಒಂದೆರಡು ಮಳೆ ಬಿದ್ದ ತತ್‌ಕ್ಷಣ ಚಾಪೆ ನೇಜಿ ತಯಾರು ಮಾಡಿಕೊಂಡು ಗದ್ದೆ ಕೆಲಸಕ್ಕೆ ಮುಂದಾಗುತ್ತಿದ್ದ ರೈತನ ಪಾಲಿಗೆ ಈ ಬಾರಿ ಅಂತಹ ಅವಕಾಶವೇ ಸಿಕ್ಕಿಲ್ಲ. ಚಾಪೆ ನೇಜಿಯನ್ನೇನೋ ಕಷ್ಟಪಟ್ಟು ತಯಾರು ಮಾಡಿರುವ ಕೃಷಿಕನ ಗದ್ದೆಯ ಯಾವ ಕೆಲಸವನ್ನು ನಡೆಸಲೂ ಧೈರ್ಯ ಸಿಕ್ಕಿಲ್ಲ. ಮುಂಗಾರು ಮಳೆಯಿಂದ ಗದ್ದೆಯ
ತುಂಬಾ ನೀರು ನಿಲ್ಲುತ್ತಿದ್ದ ದಿನಗಳ ಬದಲಿಗೆ ಇಂದು ನೀರಿನ ಪಸೆಯೂ ಉಳಿದುಕೊಂಡಿಲ್ಲ. ದಾಖಲೆಯ ಮಳೆ ಕುಸಿತ
ಪುತ್ತೂರು ತಾಲೂಕಿನಲ್ಲಿ 2017 ರ ಜೂನ್ ತಿಂಗಳಲ್ಲಿ 1,155.35 ಮಿ.ಮೀ ಮಳೆ ಸುರಿದಿತ್ತು. 2018 ರಲ್ಲಿ 1,184.21 ಮಿ.ಮೀ ಮಳೆಯಾಗಿತ್ತು. ಆದರೆ 2019ರ ಜೂನ್ ಅಂತ್ಯದವರೆಗೆ ಮಳೆಯಾಗಿರುವುದು ಕೇವಲ 300 ಮಿ.ಮೀ. ಮಾತ್ರ…! ದಾಖಲೆ ಲೆಕ್ಕದಲ್ಲಿ ಈ ಬಾರಿ ಮಳೆ ಕಡಿಮೆಯಾಗಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಶೇ. 25 ಮಳೆಯಾಗಿದೆ. ಮಳೆಗಾಲ ಮುಗಿಯುವ ಆಗಸ್ಟ್ ತಿಂಗಳ ವಾತಾವರಣ ಜೂನ್ ತಿಂಗಳ ಅಂತ್ಯದಲ್ಲಿಯೇ ಕಂಡುಬರುತ್ತಿದೆ.
Related Articles
ಈ ಬಾರಿ ನೇಜಿ ನಾಟಿ ಮಾಡುವುದು ಅಸಾಧ್ಯವೇನೋ ಎಂಬಂಥ ಸ್ಥಿತಿ ಇದೆ. ಈ ಬಾರಿ ಜೂನ್ ತಿಂಗಳಲ್ಲಿ ನಾಟಿ ಕಾರ್ಯವೇ ಆರಂಭವಾಗಿಲ್ಲ. ಇನ್ನೂ ಸಮರ್ಪಕವಾಗಿ ಮಳೆ ಸುರಿಯುವ ಲಕ್ಷಣ ಕಂಡುಬರುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಈ ಬಾರಿ ಭತ್ತ ಬೆಳೆಯುವುದು ಸಾಧ್ಯವೇ ಇಲ್ಲ.
– ರಾಮಣ್ಣ ಗೌಡ ಪಾಲೆತ್ತಾಡಿ
Advertisement
ಚಾಪೆ ನೇಜಿ ತಯಾರು ಮಾಡಿ ಸುಮಾರು 15ರಿಂದ 20 ದಿನಗಳ ಒಳಗೆ ನಾಟಿ ಮಾಡಬೇಕು. ಆದರೆ ನಾಟಿ ಮಾಡಲು ಗದ್ದೆ ಹದ ಮಾಡುವಷ್ಟು ಧೈರ್ಯವನ್ನು ಈ ಬಾರಿ ಮಳೆ ನೀಡಿಲ್ಲ. ಇತ್ತ ಚಾನೇಜಿ ಪಾತಿಯಲ್ಲಿಯೇ ಬೆಳೆಯುತ್ತಿದೆ. ಇರುವ ಒಂದಷ್ಟು ಭತ್ತ ಬೆಳೆಯುವ ರೈತನ ಬೇಸಾಯದ ಕನಸು ಕಮರಿ ಹೋಗುವ ಭೀತಿ ಇದೆ. ಕಾರ್ತೆಲ್ ಆರಂಭದಲ್ಲಿ ಸಾಮಾನ್ಯವಾಗಿ ಭತ್ತದ ಕೃಷಿ ಮಾಡುವ ರೈತರು ನೇಜಿ ನಾಟಿ ಕಾರ್ಯ ಮುಗಿಸುತ್ತಾರೆ. ಇದು 120 ದಿನಗಳ ಅನಂತರ ಕಟಾವಿಗೆ ಬರುತ್ತದೆ. ನೇಜಿ ನಾಟಿ ಮಾಡಿದ ಅನಂತರ ಮಳೆ ವಿಪರೀತವಾದಲ್ಲಿ ರೋಗ ನಿಯಂತ್ರಣಕ್ಕೆ ನೇಜಿಗೆ ಔಷಧ ಸಿಂಪಡಣೆ ಅನಿವಾರ್ಯವಾಗುತ್ತದೆ. ಹಾಗಾಗಿ ಚಾಪೆ ನೇಜಿ ತಯಾರು ಮಾಡುವುದರಿಂದ ಹಿಡಿದು ಭತ್ತದ ತೆನೆ ಗಟ್ಟಿಕಟ್ಟುವವರೆಗೆ ಕೃಷಿಕ ಅದರೊಂದಿಗೆ ಕಲೆತು ಬದುಕುತ್ತಾನೆ. ಆದರೆ ಈ ಬಾರಿ ಎಲ್ಲವೂ ವಿರುದ್ಧವಾಗಿದೆ. ದಿನಕ್ಕೊಮ್ಮೆ ತುಂತುರು ಮಳೆ ಸುರಿದರೂ ರೈತನ ಪಾಲಿಗೆ ಪ್ರಯೋಜನವಿಲ್ಲ.
ರಾಜೇಶ್ ಪಟ್ಟೆ