ಶೃಂಗೇರಿ: ತಾಲೂಕಿನಾದ್ಯಾಂತ ಮುಂಗಾರು ಮಳೆ ಮುಂದುವರಿದಿದ್ದು, ಮಲೆನಾಡು ಈಗ ಮಳೆನಾಡಾಗಿದೆ. ಸತತ ಮಳೆಯಿಂದ ಹಿಂದಿನ ಗತ ವೈಭವ ಮತ್ತೆ ಮರುಕಳಿಸಿದೆ. ಈ ವರ್ಷ ಏಪ್ರಿಲ್‌ನಿಂದ ಮಳೆಯಾಗುತ್ತಿದ್ದು, ಕಳೆದ ಎರಡು ತಿಂಗಳಿಂದ ಸತತವಾಗಿ ಮಳೆಯಾಗುತ್ತಿದೆ. ಜೂನ್ ತಿಂಗಳಿನಲ್ಲಿ ದಾಖಲೆ ಮಳೆಯಾಗಿದ್ದರೆ, ಜುಲೈನಲ್ಲಿ ಮಳೆ ಮುಂದುವರಿದಿದ್ದು, ತುಂಗಾ ನದಿಯಲ್ಲಿ ಈ ಸಾಲಿನಲ್ಲಿ ಐದು ಬಾರಿ ಪ್ರವಾಹ ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಸತತ ಮಳೆ ಮತ್ತು ಗಾಳಿಯಿಂದ ಸ್ವಾಭಾವಿಕ ನೀರಿನ ಬುಗ್ಗೆಗಳು ಎಲ್ಲೆಂದರಲ್ಲಿ ಕಾಣಿಸಿಕೊಂಡಿದೆ. ಕೆರೆ-ಕಟ್ಟೆಗಳು, ಬಾವಿಗಳು ಈಗಾಗಲೇ ಭರ್ತಿಯಾಗಿದ್ದು, ಗುಡ್ಡಗಳ ಬಳಿಯಲ್ಲದೇ, ತಗ್ಗು ಪ್ರದೇಶದಲ್ಲಿ ನೀರಿನ ಬುಗ್ಗೆ ಹುಟ್ಟಿಕೊಂಡಿದೆ. ಅನೇಕ ಮನೆಯ ಸುತ್ತಲೂ ನೀರಿನ ಬುಗ್ಗೆಗಳು ಹುಟ್ಟಿಕೊಂಡಿದ್ದು, ಮಣ್ಣಿನ ಮನೆಗಳು ಸತತ ಮಳೆ ಮತ್ತು ಹುಟ್ಟಿಕೊಂಡಿರುವ ನೀರಿನ ಬುಗ್ಗೆಗಳು ಮನೆಗಳಿಗೆ ಅಪಾಯ ಉಂಟು ಮಾಡುವ ಸ್ಥಿತಿಯಲ್ಲಿದೆ.
ಮನೆಯಂಗಳ, ಸಿಮೆಂಟ್ ನೆಲ ಹಾಸು ಇಲ್ಲದ ಮನೆಯ ಒಳಗಡೆ ನೀರಿನ ಬಗ್ಗೆ ಹುಟ್ಟಿಕೊಳ್ಳುತ್ತಿದೆ. ಇತ್ತೀಚಿನ ವರ್ಷದಲ್ಲಿ ಕುಡಿಯುವ ನೀರಿನ ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಬಹುತೇಕ ಬಾವಿಯಲ್ಲಿ ನೀರು ಉಕ್ಕಿ ಹರಿಯತೊಡಗಿದೆ.
ಹೆಚ್ಚುತ್ತಿರುವ ನೀರಿನ ಬುಗ್ಗೆ: ವಾಡಿಕೆಗಿಂತ ಬೇಗ ಮುಂಗಾರು ಮಳೆ ಆರಂಭವಾಗಿದ್ದು, ಮಳೆ ಆರಂಭವಾದ ನಂತರ ಬಿಡುವು ನೀಡದೇ ಸುರಿಯುತ್ತಿದೆ. ಇದರಿಂದ ತಾಲೂಕಿನಾದ್ಯಾಂತ ನೀರಿನ ಬುಗ್ಗೆ ಹುಟ್ಟಿಕೊಂಡಿದೆ. ಸತತ ಮಳೆ ಮತ್ತು ಬಿಸಿಲಿನ ವಾತಾವರಣ ಉಂಟಾಗದೆ ಇರುವುದು ನೀರಿನ ಬುಗ್ಗೆ ಹೆಚ್ಚಾಗಲು ಕಾರಣವಾಗಿದೆ.
ಅಪಾಯ ಕಟ್ಟಿಟ್ಟ ಬುತ್ತಿ: ಗ್ರಾಮೀಣ ಪ್ರದೇಶದ ಹಳ್ಳ ಹಾಗೂ ತುಂಗಾ ನದಿಯಲ್ಲಿ ಸಾಮಾನ್ಯ ನೀರಿನ ಮಟ್ಟಕ್ಕಿಂತ ಹೆಚ್ಚು ನೀರು ಹರಿಯುತ್ತಿದೆ. ಇನ್ನೂ ಒಂದುವರೆ ತಿಂಗಳು ಮಳೆಗಾಲವಿದ್ದು, ಇದೇ ರೀತಿ ಮಳೆ ಮುಂದುವರಿದರೆ ಅನೇಕ ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಸತತ ಗಾಳಿ: ಸತತ ಜಡಿ ಮಳೆ ನಂತರ ಬಿರುಸಿನ ಗಾಳಿ ಬೀಸುತ್ತಿದ್ದು, ಕಳೆದೆರಡು ದಿನಗಳಿಂದ ಗಾಳಿಯ ಪ್ರಮಾಣ ಅಲ್ಪ ಪ್ರಮಾಣದ ಇಳಿಕೆಯಾಗಿದೆ. ಮನೆಯ ಸಮೀಪ ಕಾಡು ಮರ ಅಥವಾ ತೆಂಗು, ಅಡಕೆ ಮರವಿರುವ ಮನೆಗಳು ಆತಂಕದಲ್ಲಿ ದಿನ ದೂಡುವಂತಾಗಿದೆ. ಮನೆಯ ಸಮೀಪ ವಿದ್ಯುತ್ ಲೈನ್, ಕಾಡು ಮರಗಳಿದ್ದರೆ ತೆರವುಗೊಳಿಸದಿದ್ದರೆ ತೊಂದರೆಯಾಗುವುದು ಖಚಿತವಾಗಿದೆ.
ಅಪಾಯಕಾರಿ ಮರ: ಶೃಂಗೇರಿ ಜಯಪುರ ರಾಜ್ಯ ಹೆದ್ದಾರಿ ಮೆಣಸೆ ಬಳಿ ಅನೇಕ ಕಾಡು ಮರಗಳಿದ್ದು,ರಸ್ತೆಗೆ ಬಾಗಿಕೊಂಡಿದೆ.ರಸ್ತೆ ಬದಿಯ ಮರಗಳು ಡಾಂಬರು ರಸ್ತೆಗೂ ಹಾನಿ ಉಂಟು ಮಾಡುವುದಲ್ಲದೇ, ಮೇ ಫ್ಲವರ್‌ನಂತಹ ಮರಗಳು ಸೂಕ್ಷ್ಮವಾಗಿದ್ದು, ಬೇಗ ಮುರಿದು ಬೀಳುತ್ತದೆ. ಇದು ದ್ವಿಚಕ್ರ ಹಾಗೂ ಇತರೆ ವಾಹನಗಳಿಗೂ ಅಪಾಯ ಉಂಟು ಮಾಡಲಿದೆ. ಇಂಥಹ ಮರಗಳ ರೆಂಬೆಯನ್ನು ಕಟಾವು ಮಾಡಬೇಕಿದೆ.