Advertisement

ಕರಾವಳಿಯ ಎಲ್ಲೆಡೆ ವರುಣಾರ್ಭಟ; ಅಲ್ಲಲ್ಲಿ ಹಾನಿ

09:22 AM Jul 24, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ದಿನವಿಡೀ ವರುಣ ಅಬ್ಬರಿಸಿದ ಪರಿಣಾಮ ವಿವಿಧೆಡೆ ಭೂಕುಸಿತ, ಮರ ಧರೆಗುರುಳಿದ ಮತ್ತು ಮನೆ ಕುಸಿದ ಘಟನೆಗಳು ಸಂಭವಿಸಿವೆ. ಮಳೆಯಿಂದ ನಗರ ಜನಜೀವನ ಅಸ್ತವ್ಯಸ್ತಗೊಂಡಿತ್ತು.

Advertisement

ನಗರದ ಬಿಜೈಯಲ್ಲಿ ರಸ್ತೆಯ ಮೇಲೆ ಗುಡ್ಡ ಕುಸಿದ ಮತ್ತು ಕಂಕನಾಡಿಯಲ್ಲಿ ರಸ್ತೆಗೆ ಮರ ಬುಡಮೇಲಾಗಿ ಬಿದ್ದದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕಂಕನಾಡಿ ವ್ಯಾಪ್ತಿಯಲ್ಲಿ 11ಕ್ಕೂ ಅಧಿಕ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ಕಂಕನಾಡಿ ಹೂವಿನ ಮಾರುಕಟ್ಟೆ ಸಮೀಪದಲ್ಲಿದ್ದ ಹಳೆಯ ಆಲದ ಮರ ರಿಕ್ಷಾದ ಮೇಲೆ ಉರುಳಿಬಿದ್ದಿದೆ. ಮರ ಬಿದ್ದ ರಭಸಕ್ಕೆ ಹತ್ತಿರದ ಮೂರು ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಕಂಬ -ವಿದ್ಯುತ್‌ ತಂತಿಗಳೂ ನೆಲಕ್ಕುರುಳಿವೆ.

ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಯ ಸಮೀಪ ಬೃಹತ್‌ ಮರ ನೆಲಕ್ಕೆ ಬಿದ್ದು ಸುಮಾರು 8 ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಇನ್ನಷ್ಟು ವಿದ್ಯುತ್‌ ಕಂಬಗಳು ಅಪಾಯದ ಸ್ಥಿತಿಯಲ್ಲಿವೆ.

ಬಿಜೈ ಸಕೀìಟ್‌ ಹೌಸ್‌ ಪಕ್ಕದ ಮುಖ್ಯರಸ್ತೆಯ ಬಟ್ಟಗುಡ್ಡದಲ್ಲಿ ಗುಡ್ಡ ಕುಸಿದು ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತವಾಯಿತು. ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಮುಂಭಾಗ ನೀರು ನಿಂತು ಸಮಸ್ಯೆಯಾಯಿತು.

Advertisement

ಬಂಟ್ವಾಳ: ಧಾರಾಕಾರ ಮಳೆ; ಹಾನಿ
ಬಂಟ್ವಾಳ: ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗಿದ್ದು, 2 ಮನೆಗಳಿಗೆ ಹಾನಿ, 5 ಕಡೆಗಳಲ್ಲಿ ಸಣ್ಣಪುಟ್ಟ ಹಾನಿಯಾಗಿದೆ.

ಉಳ್ಳಾಲದ ಅಂಬ್ಲಿಮೊಗರು ಗ್ರಾಮದ ಮದಕ ಜಂಕ್ಷನ್‌ ಬಳಿ ಗುಡ್ಡ ಕುಸಿದು ಎರಡು ಮನೆಗಳಿಗೆ ಮತ್ತು ವಿದ್ಯುತ್‌ ಕಂಬಕ್ಕೂ ಹಾನಿಯಾಗಿದೆ.

ಸಂಜೆ ಬೀಸಿದ ಗಾಳಿಗೆ ಯೇನಪೊಯ ಆಸ್ಪತ್ರೆ ಬಳಿ ಕೊಣಾಜೆ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮುಖ್ಯ ಲೈನ್‌ ತುಂಡಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಯಿತು. ಸುಮಾರು 12ಕ್ಕೂ ಹೆಚ್ಚಿನ ವಿದ್ಯುತ್‌ ಕಂಬಗಳು ಧರೆಗುರುಳಿವೆ. ಮೆಸ್ಕಾಂ ಇಲಾಖೆ ರಾತ್ರಿವರೆಗೆ ಕಾಮಗಾರಿ ನಡೆಸಿ ವಿದ್ಯುತ್‌ ಕಂಬ ಬದಲಾವಣೆಯ ಕಾರ್ಯ ನಡೆಸಿತು.

ಕೊಡಗು: ಸಾಧಾರಣ ಮಳೆ
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದೆ.

ಕಂಕನಾಡಿ: ಮರ
ಉರುಳಿ ಇಬ್ಬರಿಗೆ ಗಾಯ
ನಗರದ ಕಂಕನಾಡಿ ವೃತ್ತದ ಬಳಿ ಬೃಹತ್‌ ಆಲದ ಮರ ಸೋಮವಾರ ಸಂಜೆ ಗಾಳಿ-ಮಳೆಗೆ ಉರುಳಿ ವಿದ್ಯಾರ್ಥಿನಿ ಸಹಿತ ಇಬ್ಬರು ಗಾಯಗೊಂಡಿದ್ದಾರೆ.

ವೆಲೆನ್ಸಿಯಾ ನಿವಾಸಿ, ಖಾಸಗಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ರಿಯಾ (13) ಮತ್ತು ಓರ್ವ ಆ್ಯಕ್ಟೀವಾ ಸವಾರ ಗಾಯಗೊಂಡವರು.

ವಿದ್ಯಾರ್ಥಿನಿ ರಿಯಾ ಮತ್ತು ಐವರು ಸ್ನೇಹಿತೆಯರು ಮನೆ ಕಡೆಗೆ ಹೊರಟಿದ್ದ ವೇಳೆ ಬೀಸಿದ ಗಾಳಿಮಳೆಯಿಂದ ಆಲದಮರ ನೆಲಕ್ಕುರುಳಿತು. ರಿಯಾಗೆ ಮರದ ಗೆಲ್ಲು ತಾಗಿ ತಲೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಫ‌ಳ್ನೀರ್‌ ಕಡೆಯಿಂದ ಕಂಕನಾಡಿಗೆ ತೆರಳುತ್ತಿದ್ದ ಆ್ಯಕ್ಟಿವಾ ಸ್ಕೂಟರ್‌ ಸವಾರ ಮರದ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದರು.

ಉಡುಪಿಯಲ್ಲಿ ಭಾರೀ ಮಳೆ
ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಭಾರೀ ಮಳೆಯಾಗಿದೆ. ಪಡುಬಿದ್ರಿ, ಕಾಪು, ಕಟಪಾಡಿ, ಬೆಳ್ಮಣ್‌, ಮಲ್ಪೆ, ಬ್ರಹ್ಮಾವರ, ಉಪ್ಪುಂದ ಭಾಗಗಳಲ್ಲಿ ಉತ್ತಮ ಮಳೆ ಸುರಿಯಿತು. ಉಡುಪಿ ನಗರದಲ್ಲೂ ಬೆಳಗ್ಗಿನಿಂದಲೇ ಮಳೆ ಇತ್ತು. ಗಾಳಿ ಮಳೆಗೆ ಮೆಸ್ಕಾಂ ಉಡುಪಿ ವಿಭಾಗದ 7 ಕಂಬಗಳು ಧರೆಗುರುಳಿವೆ.

ಕುಂದಾಪುರ: ಮರ ಬಿದ್ದು ಹಾನಿ
ಕುಂದಾಪುರ: ತಾಲೂಕಿನೆಲ್ಲೆಡೆ ಉತ್ತಮ ಮಳೆಯಾಗಿದೆ. ಹೊಂಬಾಡಿ – ಮಂಡಾಡಿ ಗ್ರಾಮದ ಮನೆಗೆ ಮರ ಬಿದ್ದು ಹಾನಿಯಾಗಿದೆ. ಕುಂದಾಪುರ, ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ಸಿದ್ದಾಪುರ, ಹಾಲಾಡಿ, ಶಂಕರ ನಾರಾಯಣ, ಬೈಂದೂರು, ಶಿರೂರು, ಉಪ್ಪುಂದ, ಮರವಂತೆ, ನಾವುಂದ, ಗಂಗೊಳ್ಳಿ, ಹೆಮ್ಮಾಡಿ, ತಲ್ಲೂರು, ಕೊಲ್ಲೂರು, ವಂಡ್ಸೆ, ಗೋಳಿಯಂಗಡಿ ಸಹಿತ ಎಲ್ಲೆಡೆ ನಿರಂತರ ಮಳೆಯಾಗಿದೆ.

ಆಗುಂಬೆ: ರಸ್ತೆಗೆ ಉರುಳಿದ ಮರ
ಹೆಬ್ರಿ: ಆಗುಂಬೆ ಘಾಟಿಯ ಎರಡನೇ ಸುತ್ತಿನಲ್ಲಿ ಮರವೊಂದು ಸೋಮವಾರ ಬೆಳಗ್ಗೆ ರಸ್ತೆಗೆ ಉರುಳಿದ ಪರಿಣಾಮ ಸ್ವಲ್ಪ ಹೊತ್ತು ಸಂಚಾರಕ್ಕೆ ಸಮಸ್ಯೆಯಾಯಿತು. ಬಳಿಕ ಬಸ್ಸಿನ ಸಿಬಂದಿ ಮತ್ತು ಪ್ರಯಾಣಿಕರು ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕಾಸರಗೋಡು: ಧಾರಾಕಾರ ಮಳೆ
ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಎರಡು ಮನೆಗಳಿಗೆ ಭಾರೀ, 30 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕಾಸರಗೋಡು ಚೇರಂಗೈ ಕಡಪ್ಪುರದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದೆ.

ಸಂಪಾಜೆ: ಸುರಿಯುತ್ತಿರುವ ಭಾರೀ ಮಳೆಯಿಂದ ಇಲ್ಲಿಗೆ ಸಮೀಪದ ಎರಡನೇ ಮೊಣ್ಣಂಗೇರಿಯಲ್ಲಿ ಸೋಮವಾರ ಸಂಜೆ ಗುಡ್ಡ ಕುಸಿದು ಒಳರಸ್ತೆಯೊಂದು ಸಂಪೂರ್ಣ ಬಂದ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next