Advertisement

ವರುಣಾ ಬಿಟ್ಟಿಲ್ಲ; ನಾಳೆಯಿಂದ ಮತ್ತೆ ಪ್ರಚಾರ ಆರಂಭಿಸುತ್ತೇನೆ

06:15 AM Apr 27, 2018 | Team Udayavani |

“ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದಾಕ್ಷಣ ನಾನು ವರುಣಾ ಬಿಟ್ಟು ವಾಪಸ್‌ ಹೋಗಿದ್ದೇನೆ ಎಂದಲ್ಲ’. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಮಾತಿದು. ವರುಣಾದಲ್ಲಿ ಟಿಕೆಟ್‌ ನಿರಾಕರಣೆ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಬೇಕು ಎಂಬುದೊಂದೇ ನಮ್ಮೆಲ್ಲರ ಗುರಿ ಎಂದು ಹೇಳಿದರು.

Advertisement

ನಿಮಗೆ ಟಿಕೆಟ್‌ ತಪ್ಪಲಿದೆ ಎಂಬ ನಿರೀಕ್ಷೆಯಿತ್ತಾ?
           ಇರಲಿಲ್ಲ. ಆದರೆ, ಪಕ್ಷದ ತೀರ್ಮಾನ ಅಂತಿಮ. ವರುಣಾ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರ ಒತ್ತಡದ ಮೇಲೆ ಯಡಿಯೂರಪ್ಪ ಅವರು ಹೋಗಿ ಅಲ್ಲಿ ಕೆಲಸ ಮಾಡು, ಟಿಕೆಟ್‌ ಕೊಡುವ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತೆ ಎಂದು ಹೇಳಿದ್ದರು. ಅದರಂತೆ ಹೋಗಿದ್ದೆ. 

ಟಿಕೆಟ್‌ ನಿರಾಕರಿಸಿದ್ದು ನಿಮಗೆ ನೋವು ತಂದಿಲ್ಲವೇ?
           ನನಗೆ ಟಿಕೆಟ್‌ ನಿರಾಕರಿಸಲಿಲ್ಲ. ಕಾರ್ಯತಂತ್ರದ ಭಾಗವಾಗಿ ಸ್ಪರ್ಧೆ ಮಾಡುವುದು ಬೇಡ ಎಂದು ಪಕ್ಷ ತೀರ್ಮಾನಿಸಿದೆ. ಸ್ಪರ್ಧೆ ಮಾಡಿದ್ದರೆ ಒಂದು ಕ್ಷೇತ್ರಕ್ಕೆ ಸೀಮಿತವಾಗಬೇಕಿತ್ತು. ಈಗ ನಾನು ಎಲ್ಲ ಕಡೆ ಪ್ರವಾಸ ಮಾಡಬಹುದಲ್ಲವೇ.

ವರುಣಾ ಕ್ಷೇತ್ರದಿಂದ ವಾಪಸ್‌ ಹೋಗಿದ್ದೀರಂತೆ?
            ಆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದಾಕ್ಷಣ ನಾನು ವರುಣಾ ಬಿಟ್ಟು ವಾಪಸ್‌ ಹೋಗಿದ್ದೇನೆ ಎಂದಲ್ಲ. ನಾಳೆಯಿಂದಲೇ ಅಲ್ಲಿ ಪ್ರಚಾರ ಮತ್ತೆ ಪ್ರಾರಂಭಿಸಲಿದ್ದೇನೆ. ಮೈಸೂರು, ಚಾಮರಾಜನಗರ ಎರಡೂ ಜಿಲ್ಲೆಗಳಲ್ಲಿ ಬಿಜೆಪಿಗೆ ಅತಿ ಹೆಚ್ಚು ಸೀಟು ಬರಲಿದೆ. 

ನಿಜ ಹೇಳಿ ಟಿಕೆಟ್‌ ತಪ್ಪಿದ್ದು ಬೇಸರವಾಗಿಲ್ಲವಾ?
           ಖಂಡಿತ ಇಲ್ಲ. ನನಗೆ ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ನನ್ನ ಜವಾಬ್ದಾರಿ ಹೆಚ್ಚಾಗಿದೆ. 

Advertisement

ಪಕ್ಷದಲ್ಲೇ ಕೆಲವರು ನಿಮಗೆ ಟಿಕೆಟ್‌ ತಪ್ಪಿಸಿದರು ಎಂಬ ಮಾತಿದೆಯಲ್ಲ?
           ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲವೂ ಊಹಾಪೋಹ. ಬಿಜೆಪಿ ಶಿಸ್ತಿನ ಪಕ್ಷ, ಇಲ್ಲಿ ಮುಖಂಡರು ಎಲ್ಲವನ್ನೂ ಯೋಚಿಸಿಯೇ ತೀರ್ಮಾನಿಸಿದ್ದಾರೆ.

ವರುಣಾದಲ್ಲಿ ಈಗ ಟಿಕೆಟ್‌ ನೀಡಿರುವ ಅಭ್ಯರ್ಥಿಯ ಬಗ್ಗೆ ಅಸಮಾಧಾನ ಇದೆಯಂತೆ, ಯಡಿಯೂರಪ್ಪ ಸೂಚಿಸಿದವರಿಗೆ ಟಿಕೆಟ್‌ ನೀಡಿಲ್ಲವಂತೆ? 
          ಹಾಗೇನಿಲ್ಲ. ಪಕ್ಷ ಒಮ್ಮೆ ಟಿಕೆಟ್‌ ನೀಡಿದ ಮೇಲೆ ಅವರು ಪಕ್ಷದ ಅಭ್ಯರ್ಥಿ. ಏನೇ ಅಸಮಾಧಾನ ಇದ್ದರೂ ಎಲ್ಲ ಸರಿಹೋಗಲಿದೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಗ್ಗೂಡಿ ಶ್ರಮಿಸುತ್ತೇವೆ.

ನಿಮಗೆ ಟಿಕೆಟ್‌ ಸಿಗಲಿಲ್ಲ ಎಂದು ದೊಡ್ಡ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ? 
          ಖಂಡಿತ ಇಲ್ಲ. ಪಕ್ಷದ ಕಾರ್ಯಕರ್ತರಿಗೆ ಬೇಸರ ಆಗಿರಬಹುದು. ಆದರೆ, ಪಕ್ಷದ ನಾಯಕರ ತೀರ್ಮಾನಕ್ಕೆ ಎಲ್ಲರೂ ತಲೆಬಾಗಬೇಕು. 

ನಿಮಗೆ ಟಿಕೆಟ್‌ ತಪ್ಪಿದ್ದರಿಂದ ಅಭಿಮಾನಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ?
          ಆ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೂ ಯಾರೂ ಭಾವೋದ್ವೇಗಕ್ಕೆ ಒಳಗಾಗಬಾರದು. 

ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ-ಜೆಡಿಎಸ್‌ ಜತೆ ಒಳ ಒಪ್ಪಂದ ಮಾಡಿಕೊಂಡಿದೆಯಂತೆ?
           ಅವೆಲ್ಲಾ ಊಹಾಪೋಹ. ಎಲ್ಲ ಕಡೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಮುಂದಿನ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೀರಂತೆ?
           ಮುಂದಿನ ಚುನಾವಣೆ ವಿಷಯ ಈಗ ಮಾತನಾಡುವುದು ಸರಿಯಲ್ಲ.  

ವರುಣಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತಾ?
           ಹೌದು, ಗೆಲ್ಲುತ್ತೆ. ರಾಜ್ಯದಲ್ಲಿ ಸ್ವಂತ ಶಕ್ತಿಯ ಮೇಲೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದು ಖಚಿತ.

ಸಂದರ್ಶನ: ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next