Advertisement

ವರದಕ್ಷಿಣೆ ಕಿರುಕುಳ: ವರ್ತಿಕಾ ಕಟಿಯಾರ್‌ ದೂರು ದಾಖಲು

12:57 AM Feb 06, 2021 | Team Udayavani |

ಬೆಂಗಳೂರು: ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್‌) ಅಧಿಕಾರಿ ನಿತೀನ್‌ ಸುಭಾಶ್‌ ಯೆಲೋ ಹಾಗೂ ಅವರ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಐಪಿಎಸ್‌ ಅಧಿಕಾರಿ ಎಸ್‌ಪಿ ವರ್ತಿಕಾ ಕಟಿಯಾರ್‌ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

Advertisement

ಪತಿ ನಿತೀನ್‌ ಸುಭಾಶ್‌, ಅವರ ತಾಯಿ, ಸಹೋದರ, ಸೇರಿ ಕುಟುಂಬಸ್ಥರು ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ವರ್ತಿಕಾ ಅವರು ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ನಿತೀನ್‌ ಸುಭಾಶ್‌ ಸಹಿತ ಒಟ್ಟು 7 ಮಂದಿ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ, ಜೀವ ಬೆದರಿಕೆ, ವಂಚನೆ ಆರೋಪಗಳ ಅನ್ವಯ ಎಫ್ಐಆರ್‌ ದಾಖಲಾಗಿದೆ.

2009ರ ಬ್ಯಾಚ್‌ನ ಐಎಫ್ಎಸ್‌ ಅಧಿಕಾರಿ ನಿತೀಶ್‌ ಹಾಗೂ ವರ್ತಿಕಾ ಕಟಿಯಾರ್‌ 2011ರಲ್ಲಿ ವಿವಾಹ ಆಗಿದ್ದರು. ನಿತೀಶ್‌ ಕೊಲಂಬೋ ಸಹಿತ ವಿವಿಧ ದೇಶಗಳ ರಾಯಭಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ವರ್ತಿಕಾ ಅವರು 2010ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸ್ಪಿಯಾಗಿದ್ದು, ಪ್ರಸ್ತುತ ಕೆಎಸ್‌ಆರ್‌ಪಿ ಸಂಶೋಧನ ಹಾಗೂ ತರಬೇತಿ ಕೇಂದ್ರದಲ್ಲಿ ಸೇವೆಯಲ್ಲಿದ್ದಾರೆ.

ಆರೋಪ ಏನು?
ಮದುವೆ ಸಂದರ್ಭದಲ್ಲಿ ನಿತೀಶ್‌ ಹಾಗೂ ಕುಟುಂಬಸ್ಥರು ಚಿನ್ನಾಭರಣ ವನ್ನು ಪಡೆದುಕೊಂಡಿದ್ದರು. ಆ ಬಳಿಕವೂ ಹಣಕ್ಕಾಗಿ ಪೀಡಿಸುತ್ತಿದ್ದರು ಹಾಗೂ ಹಣ ನೀಡದಿದ್ದರೆ ವಿವಾಹ ಸಂಬಂಧ ಮುರಿದುಕೊಳ್ಳುವುದಾಗಿ ಬೆದರಿಸುತ್ತಿದ್ದರು. ಅದಕ್ಕೆ ಹೆದರಿ ಹಲವು ಬಾರಿ ಹಣ ನೀಡಿದ್ದೆ. ಇದಲ್ಲದೆ 2012ರಲ್ಲಿ ನನ್ನ ಅಜ್ಜಿಯ ಬಳಿ ನಿತೀಶ್‌ 5 ಲ.ರೂ. ಮೊತ್ತದ ಚೆಕ್‌ ಪಡೆದು ಕೊಂಡಿದ್ದರು. ಪತಿ ಅತಿಯಾಗಿ ಧೂಮಪಾನ ಹಾಗೂ ಮದ್ಯಪಾನ ಮಾಡುತ್ತಿದ್ದರು. ಅದನ್ನು ಬಿಡುವಂತೆ ತಿಳಿಸಿದರೂ ತಪ್ಪಾಗಿ ತಿಳಿದುಕೊಂಡು ಹಲ್ಲೆ ನಡೆಸುತ್ತಿದ್ದರು. 2016ರಲ್ಲಿ ಕೊಲಂಬೋಗೆ ತೆರಳಿದ್ದಾಗ ನಿತೀಶ್‌ ಹಲ್ಲೆ ನಡೆಸಿದ ಪರಿಣಾಮ ಕೈ ಮುರಿದಿತ್ತು. 2018ರ ದೀಪಾವಳಿ ಹಬ್ಬಕ್ಕೆ ಉಡುಗೊರೆಗಳನ್ನು ಕಳುಹಿಸಲಿಲ್ಲ ಎಂದು ಪತಿಯ ಕುಟುಂಬಸ್ಥರು ಜಗಳ ಮಾಡಿ ವಿಚ್ಛೇದನ ಕೊಡಿಸುವುದಾಗಿ ಬೆದರಿಸಿದ್ದರು. ಅಲ್ಲದೆ ಪತಿ ಹಾಗೂ ಅವರ ಮನೆಯವರು ಮನೆ ಖರೀದಿಸಲು 35 ಲ.ರೂ. ನೀಡುವಂತೆ ಹಲವು ಬಾರಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next