ಯಾವಾಗ ನಾನು ಭೂಮಿಗೆ ಬಂದೆನೋ ಅರಿಯೆ. ಸೀರೆ-ಲಂಗ ಕೊಳ್ಳುವ, ರವಿಕೆಗಳನ್ನು ಹೊಲಿಸುವ ಕಾಲಂಶ ಬೆಲೆಗೇ ರಸ್ತೆ ಬದಿಗಳಲ್ಲಿ ನನ್ನ ಮಾರಾಟ ಶುರುವಾದಾಗ, ಕೆಲವು “ಮುಂದುವರಿದ’ ಮಹಿಳೆಯರು ನನ್ನನ್ನು ಒಪ್ಪಿಕೊಂಡರು. ಕಾಲಕ್ರಮೇಣ ಹಳ್ಳಿಯಲ್ಲಿ ಮನೆಕೆಲಸ, ಕೊಟ್ಟಿಗೆ ಕೆಲಸ ಮಾಡುವ ಹೆಂಗಸರ ಸೀರೆಯ ಸೆರಗು ಜಾರಿ ಹೋಗುವ ಭಯವನ್ನು ನಿವಾರಿಸಿದ ನನ್ನನ್ನು ಮಹಿಳಾಮಣಿಯರು ಮತ್ತಷ್ಟು ಇಷ್ಟ ಪಡತೊಡಗಿದರು.
ಕೆಲವರಂತೂ ನನ್ನನ್ನು ಧರಿಸಿಕೊಂಡೇ ಬೆಳಗ್ಗಿನ ಹಾಲು -ಮೊಸರು ಖರೀದಿಸಲು ಹೊರಬರತೊಡಗಿದರು. ಮಾರುಕಟ್ಟೆಗೆ ಬಟ್ಟೆ ಬದಲಿಸಿ, ತಯಾರಾಗಿ ಹೋಗುವ ಕಷ್ಟ ನೀಗಿಸಿದ ಖ್ಯಾತಿ ನನ್ನದು. ಮನೆ ಎದುರು ಬರುವ ಶಾಲಾ ವಾಹನಗಳಿಗೆ ಮಕ್ಕಳನ್ನು ಹತ್ತಿಸಿ, ಇಳಿಸುವ ಕೆಲಸಗಳೂ ನನ್ನನ್ನು ಧರಿಸಿಕೊಂಡ ಮಹಿಳೆಯರಿಗೆ ಸಲೀಸು. ಕೆಲವು ಮಹಿಳೆಯರಿಗೆ ನಾನು ಬೆಳಗ್ಗಿನ ವಾಕಿಂಗ್‌ನಲ್ಲೂ ಸಾಥಿ. ಮಕ್ಕಳಿಗೆ ಹಾಲೂಡಿಸುವ ಮಹಿಳೆಯರಿಗೆ ಸಹಕರಿಸಲು ದರ್ಜಿಗಳು ನನ್ನ ಎದೆಭಾಗದಲ್ಲಿ ಒಂದು ಝಿಪ್ ಅಳವಡಿಸತೊಡಗಿದರು. ಇದರಿಂದಾಗಿ ತಾಯಂದಿರೂ ಖುಷ್. ಶಿಶುಗಳಿಗೆ ಸಹಾಯಮಾಡಿದ ನಾನೂ ಧನ್ಯತೆಯಲ್ಲಿ ಮನತುಂಬಿಕೊಳ್ಳುತ್ತೇನೆ.
ಆದರೆ, ವಯಸ್ಸಾದ ಸಂಪ್ರದಾಯಸ್ಥ ಮಹಿಳೆಯರಿಗೆ ನಾನೆಂದರೆ ಅಷ್ಟಕ್ಕಷ್ಟೆ. ನನ್ನ ಕಡೆಗೆ ಅವರು ಅಸಡ್ಡೆಯಿಂದ ನೋಡುವುದುಂಟು. ಚೂಡಿದಾರ ಕೂಡ ಕೆಲವೊಮ್ಮೆ ನನ್ನ ಪ್ರತಿಸ್ಪರ್ಧಿ. ಯಾವತ್ತೂ ನನ್ನನ್ನು ಧರಿಸದೇ ಇದ್ದ ಹಿರಿಯ ಮಹಿಳೆಯೊಬ್ಬರಿಗೆ ಇತ್ತೀಚೆಗೆ ಬೆನ್ನಿನ ಶಸ್ತ್ರಚಿಕಿತ್ಸೆ ಆಯಿತು. ಸರ್ಜರಿಯ ನಂತರ ಧರಿಸಲು ಚೂಡಿದಾರ ತೆಗೆದುಕೊಂಡು ಆಸ್ಪತ್ರೆಗೆ ಹೋಗಿದ್ದರು. ಆಪರೇಶನ್‌ನ ನಂತರ, ಚೂಡಿದಾರದ ಪ್ಯಾಂಟ್ ಧರಿಸಿ, ಲಾಡಿಯನ್ನು ಬೆನ್ನಿನ ಗಾಯದ ಮೇಲೆ ಬಿಗಿಯುವ ಹಾಗಿರಲಿಲ್ಲ. ಬರೀ ಟಾಪ್ ಧರಿಸಲು ಅದು ಗಿಡ್ಡ! ಬಹಿರ್ದೆಸೆಗೆ ಹೋಗುವಾಗ ಚೂಡಿದಾರ ಧರಿಸಿದರೆ ಕಮೋಡ್ ಮೇಲೆ ಕುಳಿತುಕೊಳ್ಳಲು ಇರುಸು ಮುರುಸು. ಆಸ್ಪತ್ರೆಯ ದಾದಿಯರು ನೈಟಿ ಧರಿಸಿದರೆ ಒಳ್ಳೆಯದಿತ್ತೆಂದಾಗ, ಮನೆಯವರು ಕೂಡಲೇ ಓಡಿ ನನ್ನನ್ನು ಸಮೀಪದ ಅಂಗಡಿಯಿಂದ ಖರೀದಿಸಿದರು.
ಮನೆಯಲ್ಲಿ ಒಂದು ಒಗೆತದಲ್ಲಿ ಸಾಕಷ್ಟು ಬಣ್ಣವನ್ನು ನೀರಿಗೆ ಚೆಲ್ಲಿದ ನಾನು, ಆಸ್ಪತ್ರೆಗೆ ಬಂದು ಅವರಿಗೆ ಸಹಕರಿಸಿದ ತೃಪ್ತಿ ಹೊಂದಿದೆ. ಅವರ ಸ್ಪಾಂಜ್ ಬಾತ್‌ನ ಸಮಯದಲ್ಲಿ ನನ್ನನ್ನು ಬದಲಿಸುವುದು ಸುಲಭವಾಯಿತು. ಅವರೂ ನನ್ನನ್ನು ಧರಿಸಿ ಸಂತೃಪ್ತರಾಗಿದ್ದರೂ, ಯಾರಾದರೂ ಆಸ್ಪತ್ರೆಯಲ್ಲಿ ಅವರನ್ನು ನೋಡಲು ಬಂದಾಗ ಸ್ವಲ್ಪ ಮುಜುಗರಪಡುತ್ತಿದ್ದುದನ್ನು ಗಮನಿಸಿದೆ. ಇರಲಿ ಬಿಡಿ, ನಂಗೇನೂ ಬೇಜಾರಾಗಿಲ್ಲ,
ಆದರೆ, ಇತ್ತೀಚಿಗೆ ಹಳ್ಳಿಯೊಂದರಲ್ಲಿ ನನ್ನನ್ನು ಧರಿಸಿ ಹಗಲು ಹೊತ್ತಿನಲ್ಲಿ ಹೊರಗೆ ತಿರುಗಾಡುವ ಹೆಂಗಸರಿಗೆ ದಂಡ ವಿಧಿಸಲು ಮುಂದಾಗಿದ್ದಾರಂತೆ, ಆ ಊರಿನ ಗಂಡಸರು. ಅದನ್ನೋದಿದ ಮೇಲೆ ಮಾತ್ರ ಮನಸ್ಸಿಗೆ ತುಂಬಾ ನೋವಾಗಿದೆ. ನೀವೇ ಹೇಳಿ, ಇದು ತಪ್ಪಲ್ವಾ?
-ಡಾ. ಉಮಾಮಹೇಶ್ವರಿ ಎನ್.