Advertisement

ವರಮಹಾಲಕ್ಷ್ಮೀಯ ಆರಾಧಿಸಿದ ಜನಮಾನಸ

12:04 PM Aug 05, 2017 | Team Udayavani |

ಬೆಂಗಳೂರು: ಹೂವು, ಹಣ್ಣುಗಳ ಬೆಲೆ ಏರಿಕೆಯ ನಡುವೆಯೂ ನಗರಾದ್ಯಂತ ಸಡಗರ ಸಂಭ್ರಮದಿಂದ ವರಮಹಾಲಕ್ಷ್ಮಿಹಬ್ಬ ದ ಆಚರಣೆ ನಡೆಯಿತು. ಶುಕ್ರವಾರ ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳಲ್ಲಿ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಗ್ರಾಮೀಣ ಪ್ರದೇಶಗಳಿಂದ ಬಂದು ಸಿಲಿಕಾನ್‌ ಸಿಟಿಯಲ್ಲಿ ನೆಲೆಸಿದರೂ, ಸಂಪ್ರದಾಯ ಮರೆಯದೇ ಬಹುತೇಕ ಮಹಿಳೆಯರು ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿ, ಒಳಿತಾಗಲೆಂದು ಪ್ರಾರ್ಥಿಸಿದರು.  

Advertisement

ವ್ರತ ಆಚರಿಸುವ ಸಂಪ್ರಾದಯ ಇಲ್ಲದವರು ಅನೇಕ ಮಹಿಳೆಯರು ದೇವಾಲಯಗಳಿಗೆ ತೆರಳಿ ಮಹಾಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ ಕುಟುಂಬಸ್ಥರು ಕೂಡ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವಿಯನ್ನು ಪ್ರಾರ್ಥಿಸಿದರು. ಮಹಿಳೆಯರು ವ್ರತಾಚರಣೆ ಮಾಡಿ ಸುಮಂಗಲಿಯರಿಗೆ ಕುಂಕುಮ-ಅರಿಶಿಣ, ಬಳೆ ನೀಡಿ ಆಶೀರ್ವಾದ, ಶುಭ ಹಾರೈಕೆ ವಿನಿಮಯ ಮಾಡಿಕೊಂಡರು. 

ವರಲಕ್ಷ್ಮಿಗೆ ವಿಶೇಷ ಅಲಂಕಾರ
ಮನೆಗಳಲ್ಲಿ ವರಮಹಾಲಕ್ಷ್ಮಿಯನ್ನು ಕೂರಿಸುವುದೇ ಒಂದು ಚೆಂದ. ವರಮಹಾಲಕ್ಷ್ಮಿಕಳಶ ಪ್ರತಿಷ್ಠಾಪಿಸಿ, ಅದಕ್ಕೆ ಹೊಸ ಸೀರೆ, ಚಿನ್ನಾಭರಣ, ಹೂವು, ಹಣ್ಣುಗಳಿಂದ ಸಿಂಗರಿಸಿದ್ದರು. ತುಪ್ಪದ ದೀಪ ಹಚ್ಚಿ, ಧೂಪಗಳಿಂದ ವಿಶೇವ ಪೂಜೆ ನೆರವೇರಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು. ವಿಧವಿಧವಾಗಿ ಅಲಂಕರಿಸಿ ಮಂಟಪವಿಡುವುದು, ಮನೆಮುಂದೆ ಬಣ್ಣ, ಬಣ್ಣದ ರಂಗೋಲಿಗಳನ್ನು ಬಿಡಿಸಿ ಬಾಗಿಲುಗಳಿಗೆ ತಳಿರು ತೋರಣ ಕಟ್ಟಿ ಅಲಂಕರಿಸುವುದು. ಬಣ್ಣ ದ ವಿದ್ಯುತ್‌ ದೀಪಗಳನ್ನು ಅಳವಡಿಸಿದ್ದು, ಹಬ್ಬದ ವಿಶೇಷ. 

ವರಮಹಾಲಕ್ಷ್ಮಿಗೆ ಹೋಳಿಗೆ, ಕರ್ಜಿಕಾಯಿ, ಕಜ್ಜಾಯ, ಪಾಯಸ, ಪೊಂಗಲ್‌ ವಿವಿಧ ತಿನಿಸುಗಳನ್ನು ನೈವೇದ್ಯ ಮಾಡಿ ಮನೆಗೆ ಬಂದವರಿಗೂ ಹಂಚಿದರು. ನಗರದ ಬಹುತೇಕ ದೇವಾಲಯಗಳಲ್ಲಿ ಮುಖ್ಯವಾಗಿ ಲಕ್ಷ್ಮೀ ದೇವಾಲಯಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ವರಮಹಾಲಕ್ಷ್ಮೀ ಪೂಜೆಯನ್ನು ಮಾಡಲಾಯಿತು. ಬೆಳ್ಳಂಬೆಳಗ್ಗೆ ಸಹಸ್ರಾರು ಮಂದಿ ಭಕ್ತಾಧಿಗಳು ದೇವಾಲಯಗಳಿಗೆ ಭೇಟಿ ನೀಡಿ ದೇವಿ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. 

ಈ ಬಾರಿ ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿತ್ತು. ಆದರೂ ಭಕ್ತರ ಸಂಭ್ರಮಕ್ಕೆ ಇವು ಅಡ್ಡಿಯಾಗಲಿಲ್ಲ. ಸರ್ಕಾರಿ ರಜೆ ಇದ್ದುದರಿಂದ ಶುಕ್ರವಾರ ಶಾಲಾ, ಕಾಲೇಜುಗಳ ಮಕ್ಕಳು ಮತ್ತು ಮಹಿಳೆಯರು ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆದರೆ, ಬಹುತೇಕ ಖಾಸಗಿ ಕಂಪನಿಗಳಿಗೆ ರಜೆ ಇಲ್ಲದ ಕಾರಣ, ಮುಂಜಾನೆಯೇ ಪೂಜೆ ಮುಗಿಸಿಕೊಂಡು, ಹೊಸ ಉಡುಗೆ ತೊಟ್ಟು, ಕೆಲಸಗಳಿಗೆ ಹಾಜರಾಗಿದ್ದರು. ಸಹೋದ್ಯೋಗಿಗಳಿಗೆ ಮನೆಗಳಲ್ಲಿ ಮಾಡಿಕೊಂಡು ಬಂದಿದ್ದ ಸಿಹಿ ತಿಂಡಿ ನೀಡಿ, ಮಹಿಳಾ ಉದ್ಯೋಗಿಗಳು ಶುಭಕೋರಿದರು.

Advertisement

ಹೂವಿನ ದರ ಇಳಿಕೆ
ಕಳೆದ ಎರಡು ದಿನಗಳಿಂದ ಕನಕಾಂಬರ ಕೆಜಿಗೆ 1500ರಿಂದ 1800 ರೂ.ಗಳಿತ್ತು. ಆದರೆ, ಹಬ್ಬದ ದಿನವಾದ ಶುಕ್ರವಾರ ಕೆಜಿಗೆ 850ರಿಂದ 1000ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಬಟನ್‌ ಗುಲಾಬಿ 500 ರೂ. ಮಲ್ಲಿಗೆ, ಕಾಕಡ 550ರಿಂದ 600 ರೂ., ಚೆಂಡು ಹೂವು 200 ರೂ. ಇದ್ದರೆ ಮಲ್ಲಿಗೆ ಮಾರಿಗೆ 40ರಿಂದ 50 ರೂ. ಇತ್ತು. 

ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರಂ, ಜಯನಗರ, ಹೆಬ್ಟಾಳ, ಗಂಗಾನಗರ, ಜೆ.ಪಿ.ನಗರ, ಆರ್‌.ಟಿ.ನಗರ, ಮಡಿವಾಳ, ಬೊಮ್ಮನಹಳ್ಳಿ, ವಿಜಯನಗರ, ರಾಜರಾಜೇಶ್ವರಿನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಮುಂಜಾನೆ ಬಾಳೆಕಂಬ, ಮಾವಿನ ಸೊಪ್ಪು, ಕಬ್ಬು, ವೀಳಾದೆಲೆ, ಹೂವಿನ ವ್ಯಾಪಾರ ಭರ್ಜರಿಯಾಗಿತ್ತು. ಬಿಸಿಲೇರಿದಂತೆ ವ್ಯಾಪಾರದಲ್ಲಿ ಕುಸಿತ ಕಂಡಿತು. 

ರಸ್ತೆಯಲ್ಲಿ ಹಸಿರು ತ್ಯಾಜ್ಯ 
ಮಧ್ಯಾಹ್ನದ ಹೊತ್ತಿಗೆ ವಿವಿಧ ಗ್ರಾಮಾಂತರ ಪ್ರದೇಶಗಳಿಂದ ವಿವಿಧ ವಾಹನಗಳಲ್ಲಿ ತಂದಿದ್ದ ಬಾಳೆಕಂಬ, ಮಾವಿನಸೊಪ್ಪು ಸೇರಿದಂತೆ ಹಸಿರು ತೋರಣವನ್ನೆಲ್ಲಾ ರಸ್ತೆಯ ಇಕ್ಕೆಲುಗಳಲ್ಲಿಯೇ ರೈತರು ಬಿಟ್ಟು ಹೋಗಿದ್ದರು. ಇದನ್ನು ಬಿಡಾಡಿ ದನಗಳು ಸಾಕಾಗುವಷ್ಟು ತಿಂದಿದ್ದಲ್ಲದೇ, ಉಳಿದದ್ದನ್ನು ರಸ್ತೆಗಳಿಗೆ ಚೆಲ್ಲಾಡಿ ಹೋಗಿದ್ದರು. ಕೆಲವು ಕಡೆಗಳಲ್ಲಿ ಬಿಬಿಎಂಪಿ ಕಸದ ವಾಹನಗಳು ತ್ಯಾಜ್ಯವನ್ನು ತೆರವುಗೊಳಿಸಿದ್ದರು. ಬಹುತೇಕ ಕಡೆಗಳಲ್ಲಿ ಹಸಿರು ತ್ಯಾಜ್ಯ ಹಾಗೆಯೇ ಉಳಿದು, ವಾಹನ ಸವಾರರಿಗೆ ಅಡ್ಡಿಯುಂಟು ಮಾಡುತ್ತಿದ್ದದ್ದು ಸಾಮಾನ್ಯವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next