Advertisement

ಪುತ್ತೂರು ತಾಲೂಕಿನ ವಿವಿಧೆಡೆ ಷಷ್ಠಿ ಉತ್ಸವ, ವ್ರತಾಚರಣೆ 

02:03 PM Nov 25, 2017 | |

ಪುತ್ತೂರು: ತಾಲೂಕಿನಾದ್ಯಂತ ಚಂಪಾ ಷಷ್ಠಿಯ ದಿನವಾದ ಶುಕ್ರವಾರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಉತ್ಸವ,
ವ್ರತಾಚರಣೆ ನಡೆಯಿತು.

Advertisement

ಚೌತಿಯಂದು ಗಣೇಶನ ವಿಗ್ರಹಕ್ಕೆ ಪ್ರಧಾನ ಆರಾಧನೆ. ಆದರೆ ಷಷ್ಠಿ ದಿನ ವ್ರತವೇ ಪ್ರಮುಖ. ಸುಬ್ರಹ್ಮಣ್ಯ ದೇವರಿಗೆ ಷಷ್ಠಿ ತಿಥಿಯಂದು ವಿಶೇಷ ಪೂಜೆ ಸಲ್ಲುತ್ತದೆ. ಆದ್ದರಿಂದ ಸುಬ್ರಹ್ಮಣ್ಯ ದೇವರ ಪ್ರೀತ್ಯರ್ಥವಾಗಿ ಅದೇ ದಿನ ವ್ರತಾಚರಣೆ ಕೈಗೊಳ್ಳುವವರಿದ್ದಾರೆ.

ಚಂಪಾ ಷಷ್ಠಿ ಅಂದರೆ ಪ್ರಮುಖ ಎಂದರ್ಥ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ಉತ್ಸವ ನಡೆಯುತ್ತಿರುತ್ತವೆ. ಅದೇ ರೀತಿ ತಾಲೂಕಿನ ಹಲವು ದೇವಸ್ಥಾನಗಳಲ್ಲಿ ಸುಬ್ರಹ್ಮಣ್ಯ ದೇವರ ವಾರ್ಷಿಕ ಜಾತ್ರೆ ನಡೆಯುತ್ತವೆ. ಇದು ಬಿಟ್ಟರೆ ಚಂಪಾ ಷಷ್ಠಿಯ ಅನಂತರದ ತಿಂಗಳಲ್ಲಿ ಬರುವ ಕಿರುಷಷ್ಠಿ ಸುಬ್ರಹ್ಮಣ್ಯ ದೇವರನ್ನು ಆರಾಧನೆ ಮಾಡುವ ಇನ್ನೊಂದು ವಿಶೇಷ ದಿನ. ಹೆಸರಿಗೆ ತಕ್ಕಂತೆ ಇದು ಕಿರು ಷಷ್ಠಿ. ಸುಬ್ರಹ್ಮಣ್ಯ ದೇವರ ಅಧಿದೇವತೆ ನಾಗ. ಕರಾವಳಿ ಜಿಲ್ಲೆಗಳಲ್ಲಿ ನಾಗನಿಗೆ ವಿಶೇಷ ಪ್ರಾಧಾನ್ಯತೆ. ಯಾವುದೇ ಕಾಯಿಲೆ, ದೋಷ ಕಂಡುಬಂದರೂ ನಾಗನಿಗೆ ಪ್ರಥಮ ಆದ್ಯತೆ. ಆದ್ದರಿಂದಲೇ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಆರಾಧನೆ ನಡೆಯುತ್ತದೆ. ಸುಬ್ರಹ್ಮಣ್ಯ ಎಂದರೆ ಶುದ್ಧಾಚಾರ. ಆದ್ದರಿಂದ ಷಷ್ಠಿಯಂದು ಶುದ್ಧಾಚಾರದಲ್ಲಿದ್ದು, ಉಪವಾಸ ಕೈಗೊಳ್ಳುತ್ತಾರೆ. ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಬಲಿವಾಡು ನೀಡಿ, ಮಧ್ಯಾಹ್ನ ದೇವರ ಪ್ರಸಾದ ಸ್ವೀಕರಿಸಿಯೇ ಊಟ ಮಾಡುವವರು ಅನೇಕರಿದ್ದಾರೆ.

ತೋಟದ ನಡುವೆ
ಕೆಲವು ವರ್ಷಗಳ ಹಿಂದೆ ಷಷ್ಠಿ ದಿನದಂದು ತೋಟದ ನಡುವೆ ಅನ್ನ ಬೇಯಿಸಿ, ಊಟ ಮಾಡುವ ಸಂಪ್ರದಾಯವಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಸಂಪ್ರದಾಯ ಕಡಿಮೆಯಾಗಿದೆ. ಎಲ್ಲರೂ ದೇವಸ್ಥಾನಗಳಿಗೆ ಬಲಿವಾಡು ನೀಡಿ, ದೇವರ ಪ್ರಸಾದ ಸ್ವೀಕರಿಸುತ್ತಾರೆ. ಇದಕ್ಕಿಂತ ಭಿನ್ನವಾಗಿ ಮನೆಯಲ್ಲೇ ಷಷ್ಠಿ ಆಚರಿಸಿ ಸಂಭ್ರಮ ಪಡುವ ದಿನಗಳಿತ್ತು. ಮನೆಯಿಂದ ಸ್ವಲ್ಪ ದೂರದಲ್ಲಿ ಸಣ್ಣ ಒಲೆ ನಿರ್ಮಿಸಿ, ಅದರಲ್ಲೇ ಅಡುಗೆ ಮಾಡಲಾಗುತ್ತಿತ್ತು. 

ತಾಲೂಕಿನ ದೇಗುಲಗಳು
ಪುತ್ತೂರು ತಾಲೂಕಿನ ಎಲ್ಲ ಸುಬ್ರಹ್ಮಣ್ಯ ದೇಗುಲಗಳಲ್ಲೂ ಷಷ್ಠಿ ಆಚರಣೆ ನಡೆಯುತ್ತವೆ. ಕೆಲವು ದೇವಸ್ಥಾನಗಳಲ್ಲಿ ಉತ್ಸವಾದಿ ಗಳು ನಡೆದರೆ, ಇನ್ನೂ ಕೆಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಬಲಿವಾಡು ಸೇವೆ ನಡೆಯಿತು. ಪ್ರಮುಖವಾಗಿ ಕೆಮ್ಮಿಂಜೆ ಶ್ರೀ ಮಹಾವಿಷ್ಣು-ಶ್ರೀ ಷಣ್ಮುಖ ದೇಗುಲ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇಗುಲ, ಕುಕ್ಕಿನಡ್ಕ ಶ್ರೀ ಸುಬ್ರಾಯ ದೇಗುಲ, ಕೊಳ್ತಿಗೆ ಬಾಯಂಬಾಡಿ ಶ್ರೀ ಷಣ್ಮುಖ ದೇಗುಲ, ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇಗುಲ, ಕೋಲ್ಪೆ ಶ್ರೀ ಸುಬ್ರಹ್ಮಣ್ಯ ದೇಗುಲ, ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇಗುಲ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇಗುಲ, ದೋಲ್ಪಾಡಿ ಶ್ರೀ ಬಾಲಸುಬ್ರಹ್ಮಣ್ಯ ದೇಗುಲ, ನಳೀಲು ಶ್ರೀ ಸುಬ್ರಹ್ಮಣ್ಯ ದೇಗುಲ, ಹಿರೇಬಂಡಾಡಿ ಶ್ರೀ ಸುಬ್ರಹ್ಮಣ್ಯ ದೇಗುಲ, ಮುಂಡೂರು ದೋಂತಿಲ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಷಷ್ಠಿ ಆಚರಣೆ ನಡೆಯಿತು.

Advertisement

ಪ್ರತಿ ತಿಂಗಳು ವ್ರತ 
ಸುಬ್ರಹ್ಮಣ್ಯನ ಆರಾಧಕರು ಪ್ರತಿ ತಿಂಗಳು ವ್ರತ ಹಿಡಿಯುವವರು ಇದ್ದಾರೆ. ಷಷ್ಠಿ ತಿಥಿಯನ್ನು ವೃದ್ಧಿ ಮತ್ತು ಕ್ಷಯ ಎಂಬರ್ಥದಲ್ಲಿ ವಿಂಗಡಿಸಲಾಗಿದೆ. ಹುಣ್ಣಿಮೆ ಬಳಿಕ ಕ್ಷಯ, ಅಮಾವಾಸ್ಯೆ ಬಳಿಕ ವೃದ್ಧಿ. ಅಮಾವಾಸ್ಯೆ ಬಳಿಕ ಚಂದ್ರ ಪೂರ್ಣಚಂದ್ರನಾಗುತ್ತಾ ಸಾಗುತ್ತಾನೆ. ಇದನ್ನು ವೃದ್ಧಿ ಎಂಬರ್ಥದಲ್ಲಿ ವಿಶ್ಲೇಷಿಸಲಾಗಿದೆ. ಪ್ರತಿ ತಿಂಗಳ ವೃದ್ಧಿಯ ಷಷ್ಠಿ ದಿನದಂದು ವ್ರತ ಹಿಡಿಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next