ಮೈಸೂರು: ನಗರದ ಎನ್‌ಟಿಎಂ ಶಾಲೆ ಉಳಿಸುವಂತೆ ಒತ್ತಾಯಿಸಿ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಸಮಿತಿಯಿಂದ ನಗರದ ವಿವಿಧೆಡೆ ಪ್ರತಿಭಟನೆ ನಡೆಯಿತು.
ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿಗೆ ರಾಜ್ಯ ರೈತ ಸಂಘ, ದಲಿತ ಸಂಘರ್ಷಸಮಿತಿ, ಸ್ವರಾಜ್ ಇಂಡಿಯಾ ಸೇರಿದಂತೆ ಹಲವು ಸಂಘಟನೆಗಳು ಕೈಜೋಡಿಸಿದ್ದು, ಮೈಸೂರಿನ ಟೌನ್ ಹಾಲ್ ಮುಂಭಾಗ, ಜಿಲ್ಲಾಧಿಕಾರಿ ಕಚೇರಿ, ಎನ್‌ಟಿಎಂ ಶಾಲೆ ಮುಂಭಾಗ, ಸದ್ವಿದ್ಯಾ ಪಾಠಶಾಲೆ ಮುಂಭಾಗ ಸೇರಿದಂತೆ ಹಲವೆಡೆ ಎನ್‌ಟಿಎಂ ಶಾಲೆ ಉಳಿಸಿ ಎಂಬ ಪ್ಲೇಕಾರ್ಡ್ ಹಿಡಿದು ಗಮನ ಸೆಳೆಯಲಾಯಿತು.
ವಿವೇಕಾನಂದರು ಎನ್‌ಟಿಎಂ ಶಾಲೆಯಲ್ಲಿ ತಂಗಿದ್ದರು ಎಂಬ ಒಂದೇ ಕಾರಣಕ್ಕೆ ಶಾಲೆಯನ್ನುಕೆಡವಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡುವುದು ಬೇಡ. ಒಂದು ವೇಳೆ ಶಾಲೆಯನ್ನು ನೆಲಸಮಗೊಳಿಸಿದರೆ ವಿವೇಕಾನಂದರ ತತ್ವಾದರ್ಶಗಳಿಗೆ ವಿರುದ್ಧವಾಗಲಿದೆ. ಶಾಲೆಯನ್ನು ಉಳಿಸಿಕೊಂಡು, ಉಳಿದ ಭಾಗದಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಿಸಿದರು.
ಶಾಲೆಯು ಕನ್ನಡದ ಅಸ್ಮಿತೆಯಾಗಿದೆ. ಈ ಅಸ್ಮಿತೆಗಾಗಿ ನಾವು ಹೋರಾಡುತ್ತಿದ್ದೇವೆಯೇ ಹೊರತು ಭೂಮಿಯ ಮಾಲಕತ್ವಕ್ಕಾಗಿ ಅಲ್ಲ. ಹೈಕೋರ್ಟ್ ಆದೇಶ ನೀಡಿದಾಗ್ಯೂ ಸರ್ಕಾರ ಶಾಲೆ ಉಳಿಸುವ ನಿರ್ಧಾರವನ್ನು ಕೈಗೊಂಡರೆ ನ್ಯಾಯಾಂಗ ನಿಂದನೆಯಾಗಲ್ಲ. ಕೂಡಲೇ ಈ ನಿಟ್ಟಿನಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಲ್ಲಿಒತ್ತಾಯಿಸಿದ್ದೇವೆಎಂದರು. ಇದೇ ವೇಳೆ ಮೈಸೂರಿನ ಗನ್ ಹೌಸ್ ಬಳಿ ಕನ್ನಡ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಶಾಲೆ ಉಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರ ಪ.ಮಲ್ಲೇಶ್, ದಸಂಸ ಮುಖಂಡ ಬೆಟ್ಟಯ್ಯ ಕೋಟೆ, ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಕಲ್ಲಳ್ಳಿ ಕುಮಾರ್, ದ್ಯಾವಪ್ಪ ನಾಯಕ, ದಿನೇಶ್, ಶಿವು, ಲಿಂಗರಾಜು, ಶ್ಯಾಮ್, ಅನಿಲ್, ರೈತ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ದೇವಣ್ಣ, ಗೋವಿಂದ ಮಂಡಕಳ್ಳಿ, ಮಹೇಶ್ ಇತರರಿದ್ದರು.