Advertisement

ಬಗೆ ಬಗೆಯ ಸಿಹಿ, ದೀಪಾವಳಿ ವಿಶೇಷ 

02:14 PM Nov 03, 2021 | Team Udayavani |

ಎಂದಿನಂತೆ ಮತ್ತೆ ಬಂದಿದೆ ದೀಪಾವಳಿ. ಹಬ್ಬವೆಂದರೆ ವಿವಿಧ ಖಾದ್ಯಗಳ ತಯಾರಿಯೇ ಸಂಭ್ರಮ ಕೊಡುವಂಥದ್ದು. ಪ್ರತಿ ವರ್ಷದಂತೆ ಈ ಬಾರಿಯೂ ಅದೇ ಸಿಹಿ, ಅದೇ ಖಾರ ಮಾಡುವ ಯೋಚನೆ ಬಿಡಿ. ಈ ಬಾರಿ ಏನಾದರೂ ಹೊಸದನ್ನು ಟ್ರೈ ಮಾಡಿ. ದೀಪಾವಳಿ ಎಂದರೆ ದೇಶಾದ್ಯಂತ ನಡೆಯುವ ವಿಶೇಷ ಹಬ್ಬ. ಹೀಗಾಗಿ ಈ ದಿನಕ್ಕಾಗಿ ಸಿಹಿ- ಖಾರ ಸಹಿತ ಹಲವಾರು ವಿಶಿಷ್ಟವಾದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಕುರಿತು ಕೆಲವು ರೆಸಿಪಿಗಳು ಇಲ್ಲಿವೆ. ಈ ಬಾರಿ ಹಬ್ಬಕ್ಕೆ ಏನಾದರೂ ವಿಶೇಷ ಮಾಡಬೇಕೆಂದರೆ ಇವುಗಳಲ್ಲಿ ಒಂದೆರಡು ಖಾದ್ಯವನ್ನಾದರೂ ಮಾಡಿ ಮನೆಯವರು, ಅತಿಥಿಗಳಿಂದ ಮೆಚ್ಚುಗೆ ಪಡೆಯಬಹುದು.

Advertisement

ಆಂಧ್ರ ಪ್ರದೇಶ
ಬೆಲ್ಲದ ಜಾಮೂನ್‌

ಬೇಕಾಗುವ ಸಾಮಗ್ರಿ
· ಕೋವಾ- 250 ಗ್ರಾಂ
· ಮೈದಾ- 175 ಗ್ರಾಂ
· ಬೇಕಿಂಗ್‌ ಸೋಡಾ- ಅರ್ಧ ಚಮಚ
· ಏಲಕ್ಕಿ ಹುಡಿ- ಅರ್ಧ ಚಮಚ
· ಬೆಲ್ಲ- ಎರಡುವರೆ ಕೆ.ಜಿ.
· ನೀರು- ಒಂದುವರೆ ಲೀಟರ್‌

ಮಾಡುವ ವಿಧಾನ
ಕೋವಾ, ಮೈದಾ, ಬೇಕಿಂಗ್‌ ಸೋಡಾ, ಏಲಕ್ಕಿ ಹುಡಿ ಮತ್ತು ನೀರನ್ನು ಜಾಮೂನ್‌ ಮಾಡಲು ಬೇಕಾಗುವಷ್ಟು ಗಟ್ಟಿಯಾಗಿ ಕಲಸಿ. ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಒಂದು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ಉಂಡೆಯನ್ನು ಅದರಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಇದೇ ಸಂದರ್ಭದಲ್ಲಿ ಬೆಲ್ಲ ಶುಗರ್‌ ಸಿರಪ್‌ ತಯಾರಿಸಿಕೊಳ್ಳಿ. ಕರಿದ ಉಂಡೆಯನ್ನು ಇದರಲ್ಲಿ ಹಾಕಿ. ಬಳಿಕ ಇದನ್ನು ಪಿಸ್ತಾ ಚೂರಿನಿಂದ ಅಲಂಕರಿಸಿ. ಬಿಸಿ ಇರುವಾಗಲೇ ಸವಿಯಲು ಕೊಡಿ.

ಕಾಶ್ಮೀರಿ
ಕಾಶ್ಮೀರಿ ಹಲ್ವ 

ಬೇಕಾಗುವ ಸಾಮಗ್ರಿಗಳು
· ಓಟ್ಸ್‌- 1 ಕಪ್‌
· ಸಕ್ಕರೆ-  ಅರ್ಧ ಕಪ್‌
· ಹಾಲು- 2 ಕಪ್‌
· ತುಪ್ಪ- 4 ಚಮಚ
· ಏಲಕ್ಕಿ ಹುಡಿ-  1 ಚಮಚ
· ಗೋಡಂಬಿ, ಬಾದಾಮಿ,
. ಒಣದ್ರಾಕ್ಷಿ-  ಸ್ವಲ್ಪ

ಮಾಡುವ ವಿಧಾನ
ಒಂದು ನಾನ್‌ ಸ್ಟಿಕ್‌ ಪ್ಯಾನ್‌ನಲ್ಲಿ 2- 3 ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಅದರಲ್ಲಿ ಓಟ್ಸ್‌ ಅನ್ನು ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ ಇಡಿ. ಇನ್ನೊಂದು ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ ಅದಕ್ಕೆ ಸಕ್ಕರೆಯನ್ನು ಬೆರೆಸಿ ಚೆನ್ನಾಗಿ ಕುದಿಸಿ. ಸಕ್ಕರೆ ಸಂಪೂರ್ಣ ಕರಗಿದ ಮೇಲೆ ಓಟ್ಸ್‌ ಅನ್ನು ಹಾಕಿ ಕಲಸಿ. ಬಳಿಕ ಏಲಕ್ಕಿ ಹುಡಿ ಬೆರೆಸಿ. ಸ್ವಲ್ಪ ಕೇಸರಿ ದಳವನ್ನು ಬೆರೆಸಬಹುದು. ಈ ಮಿಶ್ರಣವು ಪ್ಯಾನ್‌ ನಲ್ಲಿ ತಳ ಬಿಡುತ್ತ ಬಂದಾಗ ಒಲೆಯಿಂದ ಕೆಳಗಿಳಿಸಿ. ಬಳಿಕ ಹುರಿದ ಗೋಡಂಬಿ, ಬಾದಾಮಿ, ಒಣದ್ರಾಕ್ಷಿಯಿಂದ ಅಲಂಕರಿಸಿ. ಬಿಸಿ ಬಿಸಿ ಇರುವಾಗಲೇ ಸವಿಯಿರಿ.

Advertisement

ಬಿಹಾರ
ಅನಾರ್ಸಾ

ಬೇಕಾಗುವ ಸಾಮಗ್ರಿಗಳು
· ಕೋಲಂ ಅಕ್ಕಿ- 1ಕಪ್‌
· ತುಪ್ಪ- 7  ಚಮಚ,
· ರವಾ- 2  ಚಮಚ,
· ಸಕ್ಕರೆ- 2 ಚಮಚ

ಮಾಡುವ ವಿಧಾನ
ರಾತ್ರಿ ನೆನೆಸಿಟ್ಟ ಅಕ್ಕಿಯನ್ನು 15-20 ನಿಮಿಷಗಳ ಕಾಲ ಬಟ್ಟೆಯ ಮೇಲೆ ಹರಡಿ ನೀರು ಹೀರಿಕೊಳ್ಳುವವರೆಗೆ ಬಿಡಬೇಕು. ಅನಂತರ ಮಿಕ್ಸಿಜಾರ್‌ ನಲ್ಲಿ ನುಣ್ಣಗೆ ಪುಡಿ ಮಾಡಿ ಕೊಂಡು ಜರಡಿ ಮೂಲಕ ಸಾರಿಸಿಕೊಂಡು ನೀರನ್ನು ಬಳಸದೇ ಬೆಲ್ಲ, ತುಪ್ಪ ಸೇರಿಸಿ ಮೃದುವಾಗಿ ಕಲಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಹಾಲನ್ನು ಬಳಸಿಕೊಳ್ಳಬಹುದು. ಕಲಸಿದ ಹಿಟ್ಟನ್ನು 1 ಗಂಟೆ ಕಾಲ ಇಟ್ಟು ಬಳಿಕ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಕೊಂಡು ಅದಕ್ಕೆ ರವೆ ಮತ್ತು ಸಕ್ಕರೆಯನ್ನು ಹಾಕಿ ಕಲಸಿ. ಅದನ್ನು ಚಿಕ್ಕ ಬಾಲ್‌ ಗಳ ಆಕೃತಿ ಮಾಡಿಕೊಂಡು ತುಪ್ಪದಲ್ಲಿ ಅದನ್ನು ಕೆಂಪಗಾಗುವವರೆಗೆ ಹುರಿದುಕೊಂಡರೆ ರುಚಿ ರುಚಿಯಾದ ಅನಾರ್ಸಾ ಸವಿಯಲು ಸಿದ್ಧ.

ತಮಿಳ್ನಾಡು ಸ್ವೀಟ್‌ ಇಡ್ಲಿ
ಬೇಕಾಗುವ ಸಾಮಗ್ರಿಗಳು
· ತುರಿದ ಕುಂಬಳಕಾಯಿ- 1 ಕಪ್‌
· ತುರಿದ ಕೊಬ್ಬರಿ- ಅರ್ಧ ಕಪ್‌
· ಬೆಲ್ಲ- ಕಾಲು ಕಪ್‌
· ಇಡ್ಲಿ ರವಾ ಅಥವಾ ಅಕ್ಕಿ
. ರವಾ- ಅರ್ಧ ಕಪ್‌
· ನೀರು- 2- 3 ಚಮಚ
· ಉಪ್ಪು- ರುಚಿಗ

ಮಾಡುವ ವಿಧಾನ:
ಕೊಬ್ಬರಿ, ಬೆಲ್ಲ, ಏಲಕ್ಕಿಯನ್ನು ಮಿಕ್ಸಿ ಜಾರ್‌ ನಲ್ಲಿ ಹಾಕಿ ನೀರು ಹಾಕದೆ ಗ್ರೈಂಡ್‌ ಮಾಡಿ. ಬಳಿಕ ಇದನ್ನು ಒಂದು ಬೌಲ್‌ಗೆ ಹಾಕಿ. ಬಳಿಕ ಇದಕ್ಕೆ ತುರಿದ ಪಂಪ್‌ ಕಿನ್‌ ಸೇರಿಸಿ. ಬಳಿಕ ರವಾ ಹಾಕಿ ನೀರು ಬೆರೆಸಿ. ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷ ಬಿಡಿ. ಬಳಿಕ 12- 15 ನಿಮಿಷ ಗಳ ಕಾಲ ಇಡ್ಲಿ ತಟ್ಟೆಯಲ್ಲಿ ಹಾಕಿ ಹಬೆಯಲ್ಲಿ ಬೇಯಿಸಿ. ಬಿಸಿ ಇರುವಾಗಲೆ ತುಪ್ಪ ಅಥವಾ ಜೇನುತುಪ್ಪದೊಂದಿಗೆ ಸವಿಯಿರಿ.

ಮಹಾರಾಷ್ಟ್ರ
ಡ್ರೈಫ್ರುಟ್ಸ್‌ ಖೀರ್‌

ಬೇಕಾಗುವ ಸಾಮಗ್ರಿಗಳು
· ಹಾಲು- 2ಕಪ್‌
· ಸಕ್ಕರೆ- 1 ಕಪ್‌
· ಬಾದಾಮಿ- 10
· ಪಿಸ್ತಾ- 10
· ಕೇಸರಿ- 5-6 ದಳ
· ಏಲಕ್ಕಿ ಹುಡಿ- ಅರ್ಧ ಚಮಚ
· ಮಿಲ್ಕ್ ಪೌಡರ್‌- 3 ಚಮಚ

ಮಾಡುವ ವಿಧಾನ:
ಪಾತ್ರೆಯಲ್ಲಿ ಹಾಲನ್ನು ಹಾಕಿ ಚೆನ್ನಾಗಿ ಕಾಯಿಸಬೇಕು ಅನಂತರ ಹಾಲಿನ ಹುಡಿ ಸೇರಿಸಬೇಕು ಅದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ, ಬಾದಾಮಿ, ಪಿಸ್ತಾ, ಕೇಸರಿ, ಏಲಕ್ಕಿ ಹುಡಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಕಲಸಬೇಕು. ಬಳಿಕ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಕಾಯಿಸಬೇಕು. ಹಾಲು ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ಆರಲು ಬಿಡಿ. ತಣಿದ ಅನಂತರ ಡ್ರೈ ಫ್ರುಟ್ಸ್‌ ಖೀರ್‌ ಸವಿಯಲು ಸಿದ್ಧ.

ಕರ್ನಾಟಕ
ರವೆ ಖೀರ್‌

ಬೇಕಾಗುವ ಸಾಮಗ್ರಿಗಳು
· ತುಪ್ಪ: 1 ಚಮಚ
· ಗೋಡಂಬಿ,
. ದ್ರಾಕ್ಷಿ : ಸ್ವಲ್ಪ
· ಸೂಜಿ ರವೆ: 5 ಚಮ ಚ
· ಹಾಲು: ಒಂದೂವರೆ ಕಪ್‌
· ನೀರು: ಅರ್ಧ ಕಪ್‌
· ಸಕ್ಕರೆ: ಎರಡು ಕಪ್‌

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಗೋಡಂಬಿ, ದ್ರಾಕ್ಷಿಯನ್ನು ಹುರಿದುಕೊಳ್ಳಬೇಕು. ಅನಂತರ ಅದೇ ಪಾತ್ರೆಯಲ್ಲಿ ತುಪ್ಪ ಹಾಕಿ ರವೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಪಾತ್ರೆಗೆ ಅರ್ಧಕಪ್‌ ಹಾಲುಮತ್ತು ನೀರನ್ನು ಸೇರಿಸಿ ಕುದಿಯಲು ಬಿಡಿ. ಅನಂತರ ಅದಕ್ಕೆ ಹುರಿದ ರವೆಯನ್ನು ಸೇರಿಸಿ. ಒಮ್ಮೆ ಚೆನ್ನಾಗಿ ತಿರುವಿದ ಬಳಿಕ 1 ಕಪ್‌ ಹಾಲನ್ನು ಸೇರಿಸಿ ಮಿಶ್ರಣ ಗಂಟಾಗದಂತೆ ನಿರಂತರವಾಗಿ ತಿರುವುತ್ತಲೇ ಇರಿ. ಸಕ್ಕರೆ ಸೇರಿಸಿ ಚೆನ್ನಾಗಿ ತಿರುವಿ. ಗೋಡಂಬಿ, ದ್ರಾಕ್ಷಿ ಹಾಕಿ ಗ್ಯಾಸ್‌ ಆಫ್ ಮಾಡಿ. ಬಿಸಿ ಇರುವಾಗಲೇ ಸವಿಯಿರಿ.

ಕೇರಳ
ಕಡಲೆ ಬೇಳೆ ಮಾಲ್ಡಿ 

ಬೇಕಾಗುವ ಸಾಮಗ್ರಿಗಳು
· ಕಡಲೆ ಬೆಳೆ- 1ಕಪ್‌
· ಸಕ್ಕರೆ ಪುಡಿ – 1 ಕಪ್‌
· ಒಣ ಕೊಬ್ಬರಿ -ಸ್ವಲ್ಪ
· ಬಟಾಣಿ –  ಅರ್ಧ ಕಪ್‌
· ಗಸ ಗಸೆ –  ಅರ್ಧ ಕಪ್‌
· ಏಲಕ್ಕಿ- 2 ಚಮಚ

ಮಾಡುವ ವಿಧಾನ:
ಕಡಲೆ ಬೆಳೆಯನ್ನು ಚೆನ್ನಾಗಿ ಹುರಿದು ಅದನ್ನು ಮಿಕ್ಸಿಗೆ ಹಾಕಿ ಪೌಡರ್‌ ಮಾಡಿಕೊಳ್ಳಿ ಅನಂತರ ಅದನ್ನು ಚಪಾತಿ ಹಿಟ್ಟಿ ನಂತೆ ಕಲಸಿ ಬೇಯಿಸಿ. ಬಳಿಕ ಅದನ್ನು ಚಿಕ್ಕ ಚಿಕ್ಕದಾಗಿ ಮುರಿದು ಮಿಕ್ಸಿಯಲ್ಲಿ ಹಾಕಿ ಹುಡಿ ಮಾಡಿ ಕೊಂಡು ಅದಕ್ಕೆ ಸಕ್ಕರೆ ಪುಡಿ, ಒಣ ಕೊಬ್ಬರಿ, ಪುಟಾಣಿ, ಗಸ ಗಸೆ, ಏಲಕ್ಕಿ ಹಾಕಿ ಕಲ ಸಿ ಕೊಂಡರೆ ಕಡಲೆ ಬೇಳೆ ಮಾಲ್ಡಿ ಸವಿಯಲು ಸಿದ್ಧ.

ರಾಜಸ್ಥಾನ
ಮೋತಿಚೂರ್‌ ಲಡ್ದು 

ಬೇಕಾಗುವ ಸಾಮಗ್ರಿ
· ಕಡಲೆ ಹಿಟ್ಟು-3 ಕಪ್‌
· ಸಕ್ಕರೆ- 2 ಕಪ್‌
· ಕೇಸರಿ- 5-6 ದಳ
· ಬೇಕಿಂಗ್‌ ಸೋಡಾ- ಕಾಲು ಚಮಚ
· ಹಾಲು- 1 ಕಪ್‌
· ಫ‌ುಡ್‌ ಕಲರ್‌-  1 ಚಮಚ
· ಏಲಕ್ಕಿ-2 ಚಮಚ

ಮಾಡುವ ವಿಧಾನ: 
ಒಂದು ಕಪ್‌ ಕಡಲೆ ಹಿಟ್ಟಿಗೆ 3 ಚಮಚ ಹಾಲು, ನೀರು, ಬೇಕಿಂಗ್‌ ಸೋಡಾ, ಫ‌ುಡ್‌ ಕಲರ್‌ ಹಾಕಿ ಚೆನ್ನಾಗಿ ಕಲಸಿ. ಅದರಿಂದ ತಯಾರಿಸಿದ ಸಣ್ಣ ಸಣ್ಣ ಕಾಳುಗಳನ್ನು ಎಣ್ಣೆಯಲ್ಲಿ ಹಾಕಿ ಕರಿಯಬೇಕು. ಬಳಿಕ ಕಾಳುಗಳನ್ನು ಹುಡಿ ಮಾಡಿ . ಸಕ್ಕರೆ ಪಾಕ ಮಾಡಿ ಅದಕ್ಕೆ ಏಲಕ್ಕಿ , ಕೇಸರಿ ಜತೆಗೆ ಹುಡಿ ಮಾಡಿಟ್ಟ ಬೊಂದಿಯನ್ನು ಸೇರಿಸಬೇಕು, ಆನಂತರ ಈ ಮಿಶ್ರಣವನ್ನು ಚೆನ್ನಾಗಿ ಕಲಕಿ ಉಂಡೆ ಮಾಡಿಕೊಂಡರೆ ಮೋತಿಚೂರ್‌ ಲಡ್ಡು ಸಿದ್ಧ.

ವೆಸ್ಟ್‌ ಬೆಂಗಾಲ್‌
ರಸಗುಲ್ಲಾ 

ಬೇಕಾದ ಸಾಮಗ್ರಿಗಳು
· ಹಾಲು: 1 ಲೀಟರ್‌
· ಸಕ್ಕರೆ: 250 ಗ್ರಾಂ
· ಲಿಂಬೆ ರಸ: 2 ಚಮಚ

ಮಾಡುವ ವಿಧಾನ:
ಹಾಲನ್ನು ಚೆನ್ನಾಗಿ ಕುದಿಸಿ ಅದಕ್ಕೆ ಲಿಂಬೆರಸವನ್ನು ಸೇರಿಸಿ ಅದು ಒಡೆದು ಹೋಗುವಂತೆ ಮಾಡಿ ಪನ್ನೀರ್‌ ತಯಾರಿಸಿಕೊಳ್ಳಬೇಕು. ಆಮೇಲೆ ಅದನ್ನು ಸೋಸಿ ಬಟ್ಟೆಯಲ್ಲಿ ಗಟ್ಟಿಯಾಗಿ ಕಟ್ಟಿ ಇಡಬೇಕು. ಆಗ ಅದರ ನೀರು ಸಂಪೂರ್ಣವಾಗಿ ಸೋಸಿ ಹೋಗುತ್ತದೆ. ಬಾಣಲೆಯಲ್ಲಿ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ಸಕ್ಕರೆಯನ್ನು ಹಾಕಿ 5 ಕಪ್‌ ನೀರನ್ನು ಬೆರೆಸಬೇಕು. ಅದು ಕುದಿಯುವಾಗ ಬಟ್ಟೆಯಲ್ಲಿ ಕಟ್ಟಿದ ಪನ್ನೀರ್‌ನ್ನು ಬಿಚ್ಚಿ ಚೆನ್ನಾಗಿ ನಾದಿಕೊಂಡು ಅದನ್ನು ಉರುಟಾಗಿ ರಚಿಸಿ ಸಕ್ಕರೆ ಪಾಕಕ್ಕೆ ಹಾಕಿ 15 ನಿಮಿಷ ಬೇಯಿಸಿಕೊಳ್ಳಬೇಕು. ಆಗ ರುಚಿಯಾದ ರಸಗುಲ್ಲಾ ಸವಿಯಲು ಸಿದ್ಧ.

ಬೆಂಗಾಳಿ
ಚಂಪಕಲಿ

ಬೇಕಾಗುವ ಸಾಮಗ್ರಿಗಳು
· ಹಾಲು- ಮುಕ್ಕಾಲು ಲೀಟರ್‌
· ಸಕ್ಕರೆ- 150 ಗ್ರಾಂ
· ಮೈದಾ- 2 ಚಮಚ
· ಚೆರ್ರಿ- ಸ್ವಲ್ಪ ಅಲಂಕಾರಕ್ಕೆ
· ಕೋವಾ- ಸ್ವಲ್ಪ
· ನಿಂಬೆ ಹಣ್ಣಿನ ರಸ- 1- 2 ಚಮಚ
· ಕೇಸರಿ ದಳಗಳು- 4
· ನೀರು: ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ
ಹಾಲನ್ನು ಕುದಿಸಿ ಅದಕ್ಕೆ ಲಿಂಬೆ ರಸವನ್ನು ಹಾಕಿ ಒಡೆಯುವಂತೆ ಮಾಡಬೇಕು. ಹಾಲು ಸಂಪೂರ್ಣವಾಗಿ ಒಡೆದ ಅನಂತರ ಗಟ್ಟಿಯಾಗಿ ನೀರಿನಿಂದ ಬೇರ್ಪಟ್ಟು ನಿಲ್ಲುತ್ತದೆ. ಆಗ ಅದನ್ನು ಬಟ್ಟೆಗೆ ಹಾಕಿ ಸೋಸಿಕೊಳ್ಳಬೇಕು. ಆಗ ಅದು ಪನ್ನೀರ್‌ ಆಗುತ್ತದೆ. ಬಳಿಕ  ಅದಕ್ಕೆ ನೀರು ಹಾಕಿ ಸಂಪೂರ್ಣವಾಗಿ ಸೋಸಬೇಕು. ಆಗ ಲಿಂಬೆರಸದ ವಾಸನೆ ಹೋಗುತ್ತದೆ. ಅದರ ನೀರು ಸಂಪೂರ್ಣ ಹೋಗುವವರೆಗೆ ಆ ಪನ್ನೀರ್‌ ಅನ್ನು ಬಟ್ಟೆಯಲ್ಲಿ ಗಟ್ಟಿಯಾಗಿ ಕಟ್ಟಿ ನೇತಾಡಿಸಬೇಕು. ಕೋವಾಗೆ ಕೇಸರಿ ಮಿಶ್ರಿತ ಹಾಲನ್ನು ಹಾಕಿ ನಾದಿಕೊಳ್ಳಬೇಕು. ಒಲೆಯಲ್ಲಿ ಸಕ್ಕರೆಗೆ 4 ಕಪ್‌ ನೀರು ಹಾಕಿ ಕುದಿಯಲು ಇಡಿ. ಕಟ್ಟಿ ಇಟ್ಟ ಪನ್ನೀರ್‌ ಅನ್ನು ಕೈಯಿಂದ ಚೆನ್ನಾಗಿ ಅದುಮಿ ಹಿಟ್ಟಿನ ರೂಪಕ್ಕೆ ತರಬೇಕು. ಅದಕ್ಕೆ ಮೈದಾವನ್ನು ಸೇರಿಸಿಕೊಳ್ಳಬೇಕು. ಅನಂತರ ಅದನ್ನು ಬೇಕಾದ ಆಕಾರ ಮಾಡಿಕೊಂಡು ಸಕ್ಕರೆ ಪಾಕಕ್ಕೆ ಹಾಕಬೇಕು. 15 ನಿಮಿಷ ಸಕ್ಕರೆ ಪಾಕದಲ್ಲಿ ಅದನ್ನು ಕುದಿಸಬೇಕು. 5 ನಿಮಿಷಕ್ಕೊಮ್ಮೆ ಮಗುಚಬೇಕು. ತಯಾರಾದ ಪನ್ನೀರ್‌ನ ನಡುವೆ ಕೋವಾವನ್ನು ಇಟ್ಟು ಅದರ ಮೇಲೆ ಚೆರ್ರಿಯನ್ನು ಅಲಂಕರಿಸಿದರೆ ರುಚಿಯಾದ ಚಂಪಾಕಲಿ ತಯಾರಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next