ಬೆಂಗಳೂರು: ಸಿಗ್ನಲ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಯಲಚೇನಹಳ್ಳಿ-ನಾಗಸಂದ್ರ ಮಾರ್ಗದಲ್ಲಿ ಭಾನುವಾರ ಮಧ್ಯಾಹ್ನ ಸುಮಾರು ಒಂದೂವರೆ ತಾಸು ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.
ಮಧ್ಯಾಹ್ನ 2ರ ಸುಮಾರಿಗೆ ಯಲಚೇನಹಳ್ಳಿ-ಜಯನಗರ ಮಾರ್ಗದಲ್ಲಿನ ಸಿಗ್ನಲ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿತು. ಇದರಿಂದ ಪ್ರಯಾಣಿಕರನ್ನು ಹತ್ತಿರದ ನಿಲ್ದಾಣಗಳಲ್ಲಿ ಇಳಿಸಲಾಯಿತು. ನಂತರ ಸುಮಾರು ಒಂದೂವರೆ ತಾಸು ಈ ಮಾರ್ಗದಲ್ಲಿ ಮೆಟ್ರೋ ಸೇವೆ ಇರಲಿಲ್ಲ. ಪರಿಣಾಮ ಮೆಟ್ರೋ ಏರಲು ಬಂದ ಜನ ನಿರಾಸೆಯಿಂದ ಬಸ್‌ಗಳನ್ನು ಏರಿದರು.
ಮಧ್ಯಾಹ್ನ 2ರಿಂದ 3.30ರವರೆಗೆ ನ್ಯಾಷನಲ್ ಕಾಲೇಜಿನಿಂದ ನಾಗಸಂದ್ರವರೆಗೆ ಮೆಟ್ರೋ ಸೇವೆ ಎಂದಿನಂತಿತ್ತು. ಸಿಗ್ನಲ್‌ನಲ್ಲಿಯ ತಾಂತ್ರಿಕ ದೋಷವು 3.30ರ ಸುಮಾರಿಗೆ ಸರಿಪಡಿಸಲಾಯಿತು. ಆದರೂ ರೈಲುಗಳ ಅವಧಿಯಲ್ಲಿ ವ್ಯತ್ಯಾಸ ಇತ್ತು. ಪ್ರತಿ 8 ನಿಮಿಷದ ಬದಲಿಗೆ 10 ನಿಮಿಷಕ್ಕೊಂದು ರೈಲು ಸೇವೆ ಲಭ್ಯವಿತ್ತು. ಕೆಲಹೊತ್ತಿನ ನಂತರ ನಿಧಾನವಾಗಿ ಅವಧಿಯನ್ನು ತಗ್ಗಿಸಲಾಯಿತು.
ಬೆಳಿಗ್ಗೆಯೂ ಪರದಾಟ: ಇನ್ನು ಬಹುತೇಕ ಜನ ಮಾಹಿತಿ ಕೊರತೆಯಿಂದ ಭಾನುವಾರ ಬೆಳಿಗ್ಗೆ 5.30ರಿಂದಲೇ ಮೆಟ್ರೋ ನಿಲ್ದಾಣಗಳತ್ತ ಬಂದು ಪರದಾಡುವಂತಾಯಿತು. ನಿರ್ವಹಣೆ ಹಿನ್ನೆಲೆಯಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 8ರಿಂದ ಸೇವೆ ಲಭ್ಯವಾಗಲಿದೆ ಎಂದು ಶನಿವಾರ ರಾತ್ರಿ ಬಿಎಂಆರ್‌ಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಭಾನುವಾರ ಬೆಳಿಗ್ಗೆ ಪ್ರಕಟಗೊಂಡಿದೆ.
ಆದರೆ, ಬೆಳಗಿನಜಾವ ಕೆಲಸಕ್ಕೆ ತೆರಳುವ ಅಥವಾ ಕಾರ್ಯನಿಮಿತ್ತ ಬೇರೆ ಕಡೆಗೆ ಹೋಗುವವರು, ಊರುಗಳಿಗೆ ತೆರಳಲು ಮೆಜೆಸ್ಟಿಕ್‌ಗೆ ಹೋಗುವವರು ಬೆಳಿಗ್ಗೆ 5.30ರಿಂದಲೇ ಸಮೀಪದ ಮೆಟ್ರೋ ನಿಲ್ದಾಣಗಳಿಗೆ ಬರುತ್ತಿರುವುದು ಕಂಡುಬಂತು. ಆದರೆ, ಅವರಿಗೆ ನಿರಾಸೆ ಕಾದಿತ್ತು.
ಬೆಳಿಗ್ಗೆ 8.30ರಿಂದ ಸೇವೆ ಆರಂಭ ಎಂದು ಹೇಳಿಕಳುಹಿಸಲಾಗುತ್ತಿತ್ತು. ನಂತರ ಅವರೆಲ್ಲಾ ಸ್ವಂತ ವಾಹನ ಅಥವಾ ಆಟೋ-ಟ್ಯಾಕ್ಸಿಗಳ ಮೊರೆಹೋದರು. ಬಹುತೇಕ ಎಲ್ಲ ನಿಲ್ದಾಣಗಳ ಮುಂದೆ ಬೆಳಿಗ್ಗೆ 8ರವರೆಗೂ ಜನರ ಗುಂಪು ಮೆಟ್ರೋಗಾಗಿ ಕಾಯುತ್ತಿದ್ದುದು ಕಂಡುಬಂತು.