ದೊಡ್ಡ ಬೋರ್ಡೊಂದರ ಹಾಳೆ ಮೇಲೆ ಬಕ್ಕತಲೆ ಜತೆಗೆ ಮೂಗು ಬರೆದು ಸಭಿಕರಲ್ಲೊಬ್ಬರದ್ದೆಂದು ಊಹಿಸಲು ಹೇಳಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಬಕ್ಕತಲೆಯವರೇ ಇದ್ದ ಪ್ರೇಕ್ಷಕರಲ್ಲಿ ಒಬ್ಬರನ್ನೊಬ್ಬರು ನೋಡುತ್ತಾ ನಗೆಯ ಅಲೆ ಏಳಲಾರಂಭಿಸಿ ಸರಿಯಾದ ವ್ಯಕ್ತಿಯನ್ನು ಗುರುತಿಸುತ್ತಾರೆ. ಅವರನ್ನು ಎದುರುಗಡೆ ನಿಲ್ಲಿಸಿ, ಹಿಗ್ಗಾಮುಗ್ಗಾ ಎಳೆದು ಚಿತ್ರಿಸಿದವರು ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ. ಉಡುಪಿಯ ಸುಹಾಸಂ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ ನಗೆಗೆರೆಗಳ ಕ್ಯಾರಿಕೇಚರ್ ಕಾರ್ಯಕರ್ಮ- ವಾರೆಕೋರೆ ಎಂಬ ಶೀರ್ಷಿಕೆಯ ಕಾರ್ಯಕ್ರಮದ ಸಣ್ಣ ತುಣುಕು ಇದು.
ಒಬ್ಬ ವ್ಯಕ್ತಿಯನ್ನು ಅತಿರೇಕಗೊಳಿಸಿ ನೋಡುಗರನ್ನು ನಗಿಸುವುದಷ್ಟೇ ಕ್ಯಾರಿಕೇಚರ್ ಅಥವಾ ವ್ಯಂಗ್ಯ ಭಾವಚಿತ್ರ ಕಲೆಯ ಉದ್ದೇಶ. ಆ ವ್ಯಕ್ತಿಯ ಹಾವ-ಭಾವ, ಗುಣ-ಲಕ್ಷಣ, ವೃತ್ತಿ-ಪ್ರವೃತ್ತಿಗಳ ಒಟ್ಟಾರೆ ಫೀಚರ್ ಕೂಡ ಕಾಣಬಹುದು. ಪ್ರಕಾಶ್ ಶೆಟ್ಟಿಯವರು ಈ ವರೆಗೆ ಒಂದೂವರೆ ಲಕ್ಷಕ್ಕೂ ಮಿಕ್ಕಿ ಸ್ಥಳದಲ್ಲೇ ವ್ಯಂಗ್ಯ ಭಾವಚಿತ್ರ ರಚಿಸಿದ ಅನುಭವಿ ಕ್ಯಾರಿಕೇಚರಿಸ್ಟ್. ಅವರು ಇದೀಗ ಕ್ಯಾರಿಕೇಚರ್ ಕಲೆಯನ್ನು ವಿವಿಧ ಸಾಧ್ಯತೆಗಳ ಮೂಲಕ ಜನರಿಗೆ ತಲುಪಿಸುವ ಪ್ರಯೋಗಕ್ಕೆ ಇಳಿದಿದ್ದಾರೆ.
ಅದರಲ್ಲೂ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ವಿಶ್ವದಲ್ಲೇ ಅಪರೂಪವೆನಿಸಿದ ಮೆಮರಿ ಸ್ಪಾಟ್ ಕ್ಯಾರಿಕೇಚರ್ ಪ್ರೇಕ್ಷಕರನ್ನು ನಗಿಸುತ್ತಾ ಅಚ್ಚರಿಗೊಳಿಸಿತು. ಸಭಿಕರಲ್ಲೊಬ್ಬರನ್ನು ಆಯ್ಕೆ ಮಾಡಿ ಸ್ವಲ್ಪ ಸಮಯವಷ್ಟೇ ನೋಡಿ ಮನದಲ್ಲೇ ಸ್ಕ್ಯಾನ್ ಮಾಡಿ, ನಂತರ ಸ್ಮರಣ ಶಕ್ತಿಯಿಂದಲೇ ಕ್ಯಾರಿಕೇಚರ್ ರಚಿಸುವ ಹೊಸ ಅವಿಷ್ಕಾರವಿದು.
ಮತ್ತೂಂದು ಐಟಂ ಉಲ್ಟಾ ಕ್ಯಾರಿಕೇಚರ್ ರಚನೆ ಕೂಡ ಸಭಿಕರ ಆಲೋಚನೆಗಳನ್ನು ತಲೆಕೆಳಗೆ ಮಾಡಿತು. ಚಿತ್ರ ಮುಗಿಯುವವರೆಗೆ ಗುರುತಿಸಲಾಗದ ಪರದಾಟದ ತಮಾಷೆಯ ವಾತಾವರಣ ಸೃಷ್ಟಿಸಿತು. ಮೋದಿ ಕ್ಯಾರಿಕೇಚರ್ ಮೋಜು ನೀಡಿತು.
ಹಾಸ್ಯ ಅಂದ ಕೂಡಲೇ ನೆನಪಾಗುವುದು ಮೌನದಲ್ಲೇ ನಗಿಸಿದ ಚಾರ್ಲಿ ಚಾಪ್ಲಿನ್. ಗಾಂಧೀಜಿ ಮತ್ತು ಚಾಪ್ಲಿನ್ ಪರಸ್ಪರ ದೊಡ್ಡ ಅಭಿಮಾನಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಕೊನೆಯದಾಗಿ ಚಾಪ್ಲಿನ್‌ಗಾಗಿ ರೂಪಾಂತರ ಎಂಬ ನಗೆಗೆರೆಗಳ ಅರ್ಪಣೆ ಅರ್ಥಪೂರ್ಣವಾಗಿತ್ತು. ಮಹಾತ್ಮ ಗಾಂಧೀಜಿಯ ಕ್ಯಾರಿಕೇಚರ್ ಇದ್ದಕ್ಕಿದ್ದಂತೆ ಪರಿವರ್ತನೆಗೊಳ್ಳುತ್ತಾ ಚಾರ್ಲಿ ಚಾಪ್ಲಿನ್ ಆಗಿ ಸ್ಟಿಕ್ ತಿರುಗಿಸುತ್ತಾ ತನ್ನ ವಿಶಿಷ್ಟ ಶೈಲಿಯ ನಡೆಯಿಂದ ಗಮನ ಸೆಳೆಯುತ್ತದೆ. ಕ್ಯಾರಿಕೇಚರ್‌ಗಳು ಮೂಡುತ್ತಿದ್ದಂತೆ ಹಿನ್ನೆಲೆಯಲ್ಲಿ ಸೂಕ್ತ ಸಂಗೀತದೊಂದಿಗೆ ಪ್ರಕಾಶ್ ಸಹೋದರ ಜೀವನ್ ಶೆಟ್ಟಿಯವರ ನಿರೂಪಣೆ ಮನರಂಜನೆಗೆ ಕಳೆ ನೀಡಿತು.
ಜೀವನ್ ಶೆಟ್ಟಿ