ಕನ್ನಡದಲ್ಲಿ ಸುಮಾರು 35 ಕ್ಕೂ ಹೆಚ್ಚು ಚಿತ್ರಗಳಲ್ಲಿ ನೆಗೆಟಿವ್ ಶೇಡ್ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ವರ್ಧನ್, “ಹಫ್ತಾ’ ಮೂಲಕ ನಾಯಕರಾಗಿ ಎಂಟ್ರಿ ಯಾ ಗಿದ್ದರು. ಅದಾದ ಮೇಲೆ ಒಂದಷ್ಟು ಕಥೆಗಳನ್ನು ಕೇಳಿದ್ದ ವರ್ಧನ್, ಈಗ ಹೊಸದೊಂದು ಕಥೆ ಒಪ್ಪಿಕೊಂಡಿದ್ದಾರೆ. ಹೌದು, ವರ್ಧನ್ ಈಗ ಹೊಸ ಚಿತ್ರಕ್ಕೆ ಹೀರೋ. ಆ ಚಿತ್ರಕ್ಕೆ “ದಾರಿ ಯಾವುದಯ್ಯಾ ವೈಕುಂಠಕೆ…’ ಎಂಬ ಹೆಸರಿಡಲಾಗಿದೆ. ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ನಿರ್ದೇಶಕರು.
ಈ ಹಿಂದೆ “ಕೃಷ್ಣ ಗಾರ್ಮೆಂಟ್ಸ್’ ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಅವರ ಎರಡನೇ ಸಿನಿಮಾ ಇದು. ಶ್ರೀಶರಣಪ್ಪ ಎಂ.ಕೊಟಗಿ ಚಿತ್ರದ ನಿರ್ಮಾಪಕರು. ಇವರಿಗಿದು ಮೊದಲ ಅನುಭವ. ಅಂದಹಾಗೆ, ಸೋಮವಾರ ಚಿತ್ರದ ಶೀರ್ಷಿಕೆ ಪೋಸ್ಟರ್ ಅನ್ನು ನಿರ್ದೇಶಕ ರಿಷಭ್ ಶೆಟ್ಟಿ ರಿಲೀಸ್ ಮಾಡಿ ಶುಭಹಾರೈಸಿದ್ದಾರೆ. ತಮ್ಮ ಚಿತ್ರದ ಕುರಿತು ಹೇಳಿಕೊಳ್ಳುವ ವರ್ಧನ್, “ಇದೊಂದು ಹೊಸ ಜಾನರ್ ಹೊಂದಿರುವ ಕಥೆ.
ಇಲ್ಲಿ ಕಥೆಯೇ ನಾಯಕ, ನಾಯಕಿ. ಕಥೆಯ ಒನ್‌ಲೈನ್ ಹೇಳುವುದಾದರೆ, ಕ್ರಿಮಿನಲ್ ಒಬ್ಬನ ಎಮೋಷನಲ್ ಕಂಟೆಂಟ್ ಹೊಂದಿರುವ ಚಿತ್ರಣ ಇರಲಿದೆ. ತನ್ನ ಮನಸ್ಸಲ್ಲಿರುವುದನ್ನೆಲ್ಲಾ ಆಚೆ ಬಿಟ್ಟರೆ, ಏನೆಲ್ಲಾ ಪರಿಣಾಮ ಬೀರುತ್ತೆ ಎನ್ನುವುದರ ಅಂಶಗಳನ್ನು ಇಲ್ಲಿ ಹೇಳಹೊರಟಿದ್ದೇವೆ. ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಜೀವಾಳ ಎನ್ನುವ ವರ್ಧನ್, ಇದು ಆ್ಯಕ್ಷನ್,ಲವ್, ಹಾರರ್, ಕಾಮಿಡಿ, ಥ್ರಿಲ್ಲರ್ ಇವೆಲ್ಲದರಿಂದ ಹೊರತಾಗಿರುವ ಕ್ರಿಮಿನಲ್ ಒಬ್ಬನ ಕುರಿತಾದ ಭಾವುಕ ಪಯಣ ಹೊಂದಿದೆ’ ಎನ್ನುತ್ತಾರೆ.
ಫೆಬ್ರವರಿಯಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ. ಬೆಂಗಳೂರು, ರಾಮನಗರದಲ್ಲಿ ಚಿತ್ರೀಕರಣ ನಡೆಯಲಿದ್ದು, ರಾಮನಗರದಲ್ಲಿ ಮನೆಯೊಂದರ ವಿಶೇಷ ಸೆಟ್ ಹಾಕಲಾಗುತ್ತಿದೆ. ಅದೂ ಕೂಡ ಚಿತ್ರದ ಪ್ರಮುಖ ಪಾತ್ರವಹಿಸಲಿದೆ. ಚಿತ್ರದಲ್ಲಿ “ತಿಥಿ’ ಖ್ಯಾತಿಯ ಪೂಜಾ ಪ್ರಮುಖ ಆಕರ್ಷಣೆ. ಉಳಿದಂತೆ ಬಲರಾಜವಾಡಿ, ಅರುಣ್ ಮೂರ್ತಿ ಸೇರಿದಂತೆ ಬಹುತೇಕ ರಂಗಭೂಮಿ ಕಲಾವಿದರೇ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
“ವೈರ’ ಹಾಗು “ಸೈಕೋ ಶಂಕ್ರ’ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ನಿತಿನ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹಾಡುಗಳಿಲ್ಲ. ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಮಹತ್ವ ಇರುವುದರಿಂದ ಇಬ್ಬರು ಸಂಗೀತ ನಿರ್ದೇಶಕರ ಜೊತೆ ಮಾತುಕತೆ ನಡೆಯುತ್ತಿದೆ ಎಂಬುದು ವರ್ಧನ್ ಮಾತು.