Advertisement

ವರಂಗ: ಅಭಿವೃದ್ಧಿ ಕಾಣದ ಬೋರುಗುಡ್ಡೆ ಬೈದಡ್ಪು ರಸ್ತೆ

07:20 PM Jan 16, 2020 | Sriram |

ಅಜೆಕಾರು: ವರಂಗ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೋರುಗುಡ್ಡೆ ಬೈದಡ್ಪು ಸಂಪರ್ಕ ರಸ್ತೆಯು ಅಭಿವೃದ್ಧಿ ಕಾಣದೆ ಕಚ್ಚಾ ರಸ್ತೆಯಾಗಿಯೇ ಉಳಿ ದಿದ್ದು ಸ್ಥಳೀಯರು ತೀವ್ರ ಸಂಕಷ್ಟ ಪಡುವಂತಾಗಿದೆ.

Advertisement

ಸುಮಾರು 3 ಕಿ.ಮೀ. ಉದ್ದವಿರುವ ರಸ್ತೆಯು ಸಂಪೂರ್ಣ ಹೊಂಡ ಗುಂಡಿ ಗಳಿಂದ ಆವೃತವಾಗಿದ್ದು ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಶೇಖರಣೆ ಗೊಂಡು ಸಂಚರಿಸುವುದು ಅಸಾಧ್ಯವಾದರೆ ಬೇಸಗೆಯಲ್ಲಿ ಸಂಪೂರ್ಣ ಧೂಳಿನಿಂದ ಆವೃತವಾಗುತ್ತದೆ.

ಈ ರಸ್ತೆಯು ಭಟ್ಟಿ ಪಲ್ಕೆ, ಹೊನ್ನಪ್ಪಜಡ್ಡು, ತಿಮ್ಮನ ಬೆಟ್ಟು, ಲಚ್ಚಿಲ್‌, ಬೈದಡ್ಪು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿದ್ದು ರಸ್ತೆ ದುಸ್ಥಿತಿಯಿಂದಾಗಿ ಸ್ಥಳೀಯರು ಹೈರಣಾ ಗಿದ್ದಾರೆ.

ಸುಮಾರು 35 ವರ್ಷಗಳ ಹಿಂದೆ ಮಣ್ಣಿನ ರಸ್ತೆಯನ್ನು ನಿರ್ಮಿಸಲಾಗಿದ್ದು ನಂತರದ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಕಾಣದೆ ಹೊಂಡ ಗುಂಡಿಗಳಿಂದ ಆವೃತವಾಗಿದೆ.

ಕೆಲ ವರ್ಷಗಳ ಹಿಂದೆ ವರಂಗ ಪಂಚಾಯತ್‌ ಆಡಳಿತವು ರಸ್ತೆ ಅಂಚಿನಲ್ಲಿ ಕಾಲುವೆ ಹಾಗೂ ಮೋರಿ ನಿರ್ಮಾಣ ಕಾರ್ಯ ನಡೆಸಿದೆಯಾದರೂ ರಸ್ತೆ ಡಾಮಾರು ಭಾಗ್ಯ ಇನ್ನೂ ಕಂಡಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

Advertisement

ಈ ಭಾಗದಲ್ಲಿ ಸುಮಾರು 40 ಮನೆಗಳಿದ್ದು ಕೂಲಿ ಕಾರ್ಮಿಕರು ಹಾಗೂ ಕೃಷಿಕರೇ ಒಳಗೊಂಡಿದ್ದಾರೆ.

ಪ್ರತೀ ನಿತ್ಯ ಈ ಪ್ರದೇಶದ ವಿದ್ಯಾರ್ಥಿಗಳು ಈ ರಸ್ತೆಯ ಮೂಲಕ ನಡೆದುಕೊಂಡೆ ಹೋಗಬೇಕಾಗಿದ್ದು ಶಾಲೆಗೆ ತೆರಳುವ ಸಂದರ್ಭ ಕೆಸರು ಮತ್ತು ಧೂಳಿನಿಂದ ಸಮಸ್ಯೆ ಎದುರಿಸಬೇಕಾಗಿದೆ.

ರಸ್ತೆ ಅಭಿವೃದ್ಧಿಗೆ ಅಡೆ ತಡೆ
ವರಂಗ ಗ್ರಾಮದ ಬಹುತೇಕ ಪ್ರದೇಶವು ಹಿಂದೆ ವರಂಗ ಮಠದ ಅಧೀನಕ್ಕೊಳಪಟ್ಟಿತ್ತು. ಆದರೆ ಭೂ ಮಾಲೀಕತ್ವ ಕಾನೂನು ಬಂದ ಅನಂತರ ವರಂಗದ ನಿವಾಸಿಗಳಿಗೆ ತಾವು ವಾಸವಿದ್ದ ಹಾಗೂ ಕೃಷಿ ಭೂಮಿ ತಮ್ಮ ಒಡೆತನಕ್ಕೆ ಬಂದಿದ್ದರೂ ಈ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮಾತ್ರ ಮಠದ ಅಧೀನದಲ್ಲಿಯೇ ಇರುವುದರಿಂದ ವರಂಗ ಗ್ರಾಮ ವ್ಯಾಪ್ತಿಯ ಬಹುತೇಕ ರಸ್ತೆಗಳು ಅಭಿವೃದ್ಧಿಗೊಳ್ಳಲು ತೊಡಕಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಸ್ತೆ ಅಭಿವೃದ್ಧಿ ಪಡಿಸುವಂತೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೂ ಅರ್ಜಿ ಸಲ್ಲಿಸಿದ್ದು, ಪ್ರಧಾನ ಮಂತ್ರಿ ಇ ಜನಸ್ಪಂದನದಲ್ಲಿ ಅರ್ಜಿ ಸ್ವೀಕೃತಗೊಂಡು ಎಂಜಿನಿಯರಿಂಗ್‌ ವಿಭಾಗಕ್ಕೆ 2019 ಜುಲೈ 22ರಂದು ಪತ್ರ ಬಂದಿದ್ದರೂ ರಸ್ತೆ ಅಭಿವೃದ್ಧಿಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಏಕೈಕ ರಸ್ತೆ
ರಸ್ತೆ ತೀರಾ ಹದಗೆಟ್ಟಿರುವುದರಿಂದ ವಾಹನ ಸಂಚಾರ ನಡೆಸುವುದು ದುಸ್ತರವಾಗಿದೆ. ಈ ಭಾಗದ ಏಕೈಕ ರಸ್ತೆ ಇದಾಗಿದ್ದು ತ್ವರಿತವಾಗಿ ಅಭಿವೃದ್ಧಿಗೊಳ್ಳಬೇಕಿದೆ.
 -ಪ್ರವೀಣ್‌ ಕುಲಾಲ್‌, ರಿಕ್ಷಾ ಚಾಲಕರು

ಸಂಕಷ್ಟ
ರಸ್ತೆ ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನಿರಂತರ ಮನವಿ ಮಾಡಿದ್ದರೂ ರಸ್ತೆ ಅಭಿವೃದ್ಧಿ ಮಾತ್ರ ನಡೆದಿಲ್ಲ. ಹದಗೆಟ್ಟ ರಸ್ತೆಯಿಂದಾಗಿ ರೈತರು ಬೆಳೆದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸುವುದೇ ಕಷ್ಟಕರವಾಗಿದೆ. ಅಲ್ಲದೆ ತುರ್ತು ಸಂದರ್ಭಗಳಲ್ಲಿ ತೀವ್ರ ಸಂಕಷ್ಟಕ್ಕೊಳಬೇಕಾಗಿದೆ.
-ಶ್ಯಾಮ್‌ ರಾಯ್‌ ಆಚಾರ್ಯ, ಸ್ಥಳೀಯರು

ಅಭಿವೃದ್ಧಿ
ಕೆಲವು ತಾಂತ್ರಿಕ ದೋಷಗಳಿಂದ ರಸ್ತೆ ಅಭಿವೃದ್ಧಿ ವಿಳಂಬವಾಗಿದ್ದು ಶಾಸಕ ಸುನಿಲ್‌ ಕುಮಾರ್‌ ಈ ರಸ್ತೆ ಅಭಿವೃದ್ಧಿಗೆ ಸುಮಾರು 50 ಲಕ್ಷ ರೂ. ಅನುದಾನ ಒದಗಿಸಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಸ್ತೆ ಅಭಿವೃದ್ಧಿ ನಡೆಯಲಿದೆ.
 - ಸುರೇಂದ್ರ ಶೆಟ್ಟಿ,
ಅಧ್ಯಕ್ಷರು, ವರಂಗ ಗ್ರಾಮ ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next