Advertisement

ವ್ಹಾ! ವಾರಂ‌ಬಳ್ಳಿ, ಶಾಲೆ ತಲುಪಿದ ಯಕ್ಷ ಕಲೆ

06:00 PM Feb 28, 2018 | Team Udayavani |

ನಿವೃತ್ತಿಯ ವಯಸ್ಸಿನಲ್ಲಿ ಮೈ-ಮನಸ್ಸು ವಿಶ್ರಾಂತಿಯನ್ನು ಬಯಸುತ್ತದೆ. ಆದರೆ, ಇಲ್ಲೊಬ್ಬರು ತಮ್ಮ ಇಳಿ ವಯಸ್ಸಿನಲ್ಲಿ ಶಾಲೆ- ಶಾಲೆಗೂ ಹೋಗಿ ಯಕ್ಷಗಾನ ಕಲಿಸುವ ಕಾಯಕದಲ್ಲಿದ್ದಾರೆ. ಅದೂ ಉಚಿತವಾಗಿ! ಕರಾವಳಿಯ “ಗಂಡುಕಲೆ’
ಯಕ್ಷಗಾನವನ್ನು ಉಸಿರಾಗಿಸಿಕೊಂಡಿರುವ ಇವರ ಹೆಸರು ಮೂಕಾಂಬಿಕಾ ವಾರಂಬಳ್ಳಿ. ಮೂಲತಃ ಉಡುಪಿಯವರು.
ಕಲಾದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿರುವ ಇವರು ಯಕ್ಷಗಾನದ ಪಾತ್ರಗಳಿಗೆ ಜೀವತುಂಬಿ ಕಲಾ ಸೇವೆಗೈದಿರುವುದಷ್ಟೇ ಅಲ್ಲದೆ, ಮುಂದಿನ ತಲೆಮಾರಿಗೆ ಅದನ್ನು ಉಚಿತವಾಗಿ ಕಲಿಸುತ್ತಾ ಕಲಾಸೇವೆಯನ್ನು ಮತ್ತೂಂದು ಮಟ್ಟಕ್ಕೆ ಒಯ್ದಿದ್ದಾರೆ.

Advertisement

ಮೂಕಾಂಬಿಕಾ ಅವರು ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗೆ ನಿವೃತ್ತರಾದರು. ಚಿಕ್ಕ ವಯಸ್ಸಿನಲ್ಲಿ
ಯಕ್ಷಗಾನದ ಸೆಳೆತಕ್ಕೊಳಗಾಗಿ, ಅಜ್ಜ ರಾಮಕೃಷ್ಣ ಹೆಬ್ಟಾರ್‌ ಅವರ ಪ್ರೇರಣೆಯಿಂದ ಗೆಜ್ಜೆ ಕಟ್ಟಿದರು. ಹಾಗೆ ಬೆಳೆದ ಇವರ
ಕಲಾಸಕ್ತಿಗೆ, ಮದುವೆಯ ನಂತರ ಪತಿ ಗೋವಿಂದ ರಾಜ್‌ ವಾರಂಬಳ್ಳಿಯವರ ಪ್ರೋತ್ಸಾಹ ಸಿಕ್ಕಿತು. ವೃತ್ತಿ ಬದುಕಿನ ಜೊತೆ ಜೊತೆಗೇ, ತಾಮ್ರಧ್ವಜ ಕಾಳಗದ ಕರ್ಣ, ಭೀಷ್ಮ, ದೇವವ್ರತ ಮುಂತಾದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿ ಯಕ್ಷರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೆ, ಇವರ ಮನಸ್ಸಿನಲ್ಲಿದ್ದದ್ದು ಈ ಜಾನಪದ ಕಲೆಯನ್ನು ಎಲ್ಲ ಕಡೆಗೆ ಪಸರಿಸಬೇಕು, ಬೆಳೆಸಬೇಕು ಎಂಬ ಆಶಯ.

ಬಹಳ ಹಿಂದಿನಿಂದಲೂ ಸಾಧ್ಯವಾದಾಗಲೆಲ್ಲ, ಹಳ್ಳಿ ಹಳ್ಳಿಯ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಉಚಿತವಾಗಿ ಯಕ್ಷಗಾನ ತರಬೇತಿ ಕೊಡುತ್ತಾ ಬಂದಿದ್ದಾರೆ. ಸುಮಾರು 13 ವರ್ಷಗಳಿಂದ ಬಹಳಷ್ಟು ಮಕ್ಕಳಿಗೆ ಯಕ್ಷಗಾನದ ಹೆಜ್ಜೆಯನ್ನು,
ತಾಳ- ಭಾಗವತಿಕೆಯನ್ನು ಕಲಿಸಿದ ಸಾರ್ಥಕ್ಯ ಭಾವ ಇವರದ್ದು. ಈಗ ವೃತ್ತಿಯಿಂದ ನಿವೃತ್ತಿಯಾಗಿದ್ದರೂ ಇವರು ಕಲಾಸೇವೆಯಿಂದ ನಿವೃತ್ತಿ ಪಡೆದಿಲ್ಲ. ಈಗಲೂ ಒಂದೆರಡು ಶಾಲೆಗಳಿಗೆ ಹೋಗಿ ಮಕ್ಕಳಿಗೆ ಯಕ್ಷಗಾನದ ತರಬೇತಿ ಕೊಡುತ್ತಿದ್ದಾರೆ.

ಇವರ ಸಾಧನೆ, ಪರಿಶ್ರಮವನ್ನು ಗುರುತಿಸಿ, ಯಕ್ಷ ಪ್ರಮೀಳಾ ಪ್ರಶಸ್ತಿ, ಯಕ್ಷಗಾನ ಬಯಲಾಟ ಅಕಾಡೆಮಿ ಮುಂತಾದ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.

ಚಿತ್ರ ಲೇಖನ : ಬಳಕೂರು ವಿ.ಎಸ್.ನಾಯಕ್

Advertisement
Advertisement

Udayavani is now on Telegram. Click here to join our channel and stay updated with the latest news.

Next