ದೇವನಹಳ್ಳಿ: ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಇರುವುದರಿಂದ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಗಗನ ಮುಖ್ಯವಾಗಿದ್ದು ಹೂಗಳನ್ನು ಬೆಲೆ ಕೇಳಿದರೆ ತಲೆ ತಿರುಗುವ ಉಂಟಾಗುತ್ತದೆ. ಬೆಲೆಗಳು ಹೆಚ್ಚಾಗಿದ್ದರೂ ಕೂಡ ಹಬ್ಬದ ಸಡಗರ ಮಾತ್ರ ಕಡಿಮೆಯಾಗಿರಲಿಲ್ಲ.
ಪ್ರತಿಯೊಂದು ದಿನಬಳಕೆ ವಸ್ತುಗಳು ಏರಿಕೆಯಾಗಿದ್ದರೂ ಹಾಗೂ ದಿನನಿತ್ಯ ಮಳೆ ಬರುತ್ತಿರುವುದರಿಂದ ಸಮರ್ಪಕವಾಗಿ ಸಾಮಗ್ರಿಗಳು ಬಾರದೆ ಇದ್ದುದರಿಂದ ಬೆಲೆಗಳ ಏರಿಕೆ ಸಾಮಾನ್ಯವಾಗಿದೆ. ವರಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಪ್ರತಿ ಮನೆಯಲ್ಲೂ ಹಬ್ಬ ಆಚರಣೆ ಮಾಡಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕೇಳಿಕೊಳ್ಳುತ್ತಾರೆ. ವರಲಕ್ಷ್ಮೀ ವ್ರತ ಇರುವುದರಿಂದ ಬುಧವಾರ ಮತ್ತು ಗುರುವಾರ ತಾಲೂಕಿನ ವಿವಿಧ ಕಡೆಗಳಿಂದ ಹಾಗೂ ಪಟ್ಟಣದ ವಿವಿಧ ಕಡೆಗಳಿಂದ ಹೆಚ್ಚು ಜನ ಹಬ್ಬದ ವ್ಯಾಪಾರ ಮಾಡಲು ಬರುವುದರಿಂದ ಪಟ್ಟಣ ಹಳೆ ಬಸ್ ನಿಲ್ದಾಣದಿಂದ ಬಜಾರ್ ರಸ್ತೆವರೆಗೆ ಹೆಚ್ಚು ಜನ ಸಂದಣಿ ಇದ್ದುದ್ದರಿಂದ ಟ್ರಾಪಿಕ್ ಸಮಸ್ಯೆ ಎದುರಿಸಿದರು.
ವಾಹನ ಸವಾರರು ಒಂದು ಬಾರಿ ಬಜಾರ್ ರಸ್ತೆಗೆ ಬಂದರೆ ಹೆಚ್ಚು ಜನ ಇರುವುದರಿಂದ ಮುಂದೆ ಹೋಗಲು ಹರಸಾಹಸ ಪಡುವಂತಾಯಿತು. ಕನಕಾಂಬರ ಹೂ ಪ್ರತಿ ವರಲಕ್ಷ್ಮೀ ಹಬ್ಬಕ್ಕೆ 2000 ರೂ ಬೆಲೆ ಈವರೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಮಲ್ಲಿಗೆ ಹೂವು ಸಹ 1200ರೂ. ಆಗಿದೆ. ಲಕ್ಷ್ಮೀ ಪೂಜೆಗೆ ಅವಶ್ಯವಿರುವ ಹೂ, ಹಣ್ಣು ಸೇರಿ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಆದರೂ ಸಹ ಜನರು ಖರೀದಿಸಲು ಮುಗಿ ಬಿದ್ದಿದ್ದಾರೆ. ಮಾರುಕಟ್ಟೆಯಲ್ಲಿರುವ ಆಕರ್ಷಕ ಮಹಾ ಲಕ್ಷ್ಮೀ ಮೂರ್ತಿಗಳು ಜನರನ್ನು ಸೆಳೆಯುತ್ತಿದ್ದು 1800-2000 ರೂವರೆಗೆ ದೊರೆಯುತ್ತಿದೆ.
ಹೂ ಬೆಲೆ ದುಬಾರಿ: ಕನಕಾಂಬರ ಹೂ 2000 ರೂ ಕೆ.ಜಿ.ಗೆ, ಮಲ್ಲಿಗೆ ಕೆ.ಜಿ.1200 ರೂ., ಕಾಕಡ 600 ರೂ., ಮಳ್ಳೆ 600 ರೂ., ಸೇವಂತಿಗೆ 200-240 ರೂ., ಚಂಡಿನ ಹೂ 60 ರೂ., ರೋಸ್ 280 ರೂ., ಬಟನ್ಸ್ 200 ರೂ., ಸುಗಂಧರಾಜ 280ರೂ., ಮಾರೀಗೋಲ್ಡ್ 240 ರೂ., ಸಂಪಿಗೆ 300 ರೂ., ಆಸ್ಟೇಲಿಯಾ ಹೂ 160 ರೂ., ರುದ್ರಾಕ್ಷಿ 100 ರೂ.ಗಳಷ್ಟು ತುಟ್ಟಿಯಾಗಿದೆ. ಹಣ್ಣುಗಳ ತುಟ್ಟಿ: ಸೇಬು ಕೆ.ಜಿ.ಗೆ 160- 180-200 ರೂ, ಏಲಕ್ಕಿ ಬಾಳೆ 140 ರೂ., ಪಚ್ಚಬಾಳೆ 50ರೂ, ಸಪೋಟ 140 ರೂ., ಮೂಸಂಬಿ 100-120 ರೂ., ದ್ರಾಕ್ಷಿ 200 ರೂ., ಅನಾನಸ್ ಜೊತೆ 80 ರೂ., ದಾಳಿಂಬೆ 200 ರೂ, ಮಾವಿನ ಹಣ್ಣು 120 ರೂ, ಕಿತ್ತಳೆ 150 ರೂ, ಕಮಲ ಹೂ ಜೊತೆ 50-80 ರೂ, ಬಾಳೆ ಕಂಬ ಜೊತೆ 80-100 ಮಾರಾಟವಾಗುತ್ತಿತ್ತು. ಹೂ, ಹಣ್ಣಿನ ಜೊತೆಗೆ ದಿನಸಿ ಪದಾರ್ಥಗಳ ಬೇಡಿಕೆ ಬೆಲೆ ಏರಿದೆ. ಪ್ಲಾಸ್ಟಿಕ್ ಹೂಗಳು, ಅಲಂಕಾರಿಕ ಸಾಮಗ್ರಿ ಗಳ ಮಾರಾಟ ಬರದಿಂದ ಸಾಗಿದೆ. ಮಹಿಳೆಯರು ದೇವಿಗೆ ವಿವಿಧ ರೀತಿಯ ಅಲಂಕಾರ ಮಾಡಿ ಹೂಗಳು, ಬಣ್ಣ ಬಣ್ಣದ ರಂಗೋಲಿ ಇಡುತ್ತಾರೆ. ದೇವಿಗೆ ಸೀರೆ ಉಡಿಸಿ, ಕೆಂಪು ಬಣ್ಣದ ಗಾಜಿನ ಬಳೆಗಳು ಹಾಗೂ ನಾನಾ ಬಗೆಯ ಆಭರಣಗಳನ್ನು ತೊಡಿಸಿ ಪೂಜಿಸ ಲಾಗುತ್ತದೆ. ವಿವಿಧ ಮುಖ ಬೆಲೆಯ ನೋಟು ಹಾಗೂ ನಾಣ್ಯಗಳನ್ನು ಇರಿಸಿ ಆರಾಧಿಸುತ್ತಾರೆ.
ವರಮಹಾಲಕ್ಷ್ಮೀ ಹಬ್ಬವನ್ನು ಪ್ರತಿಯೊಬ್ಬರು ಆಚರಿಸುವ ಹಬ್ಬವಾಗಿದೆ. ಪ್ರತಿದಿನ ನಿತ್ಯ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್ ಡೀಸೆಲ್ ಮತ್ತು ಇತರೆ ವಸ್ತುಗಳು ಹೆಚ್ಚಾಗಿರುವುದರಿಂದ ಸಾಗಾಣಿಕ ವೆಚ್ಚ ದುಬಾರಿಯಾಗಿದೆ. ಆದರೂ ಸಹ ವ್ಯಾಪಾರ ವಹಿವಾಟು ಮಾಡುವುದು ಬಿಡಲು ಆಗುವುದಿಲ್ಲ.
● ರತ್ನಮ್ಮ, ವ್ಯಾಪಾರಸ್ಥೆ
ಎಷ್ಟೇ ಬೆಲೆ ಏರಿಕೆಯಾದರೂ ಸಹ ನಮ್ಮ ಹಿಂದೂ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿರುವ ಹಬ್ಬ ಗಳನ್ನು ಮಾಡಿಕೊಂಡು ಹೋಗಬೇಕು. ವರ ಲಕ್ಷ್ಮೀ ಹಬ್ಬ ಶ್ರಾವಣ ಮಾಸದ ಮೊದಲ ಹಬ್ಬವಾಗಿದೆ. ವರ ಲಕ್ಷ್ಮೀ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದೇವೆ
. ● ಶಶಿಕಲಾ, ಗ್ರಾಹಕಿ
–ಎಸ್.ಮಹೇಶ್