ಮಣಿಪಾಲ: ವಾರಾಹಿ ಅಣೆಕಟ್ಟು ಸಮೀಪದಲ್ಲಿ ನೀರು ಶುದ್ಧೀಕರಿಸಿ ಉಡುಪಿ ಜಿಲ್ಲೆಯ ಎಲ್ಲ ವಿಧಾನಸಭಾ ವ್ಯಾಪ್ತಿಗೂ ಹಂಚಿಕೆ ಮಾಡುವ ಎರಡು ಯೋಜನೆಗೆ ಈಗಾಗಲೇ ಒಪ್ಪಿಗೆ ದೊರೆತಿದ್ದು, 2024ರ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಿ.ಪಂ. ಸಿಇಒ ಪ್ರಸನ್ನ ಎಚ್. ತಿಳಿಸಿದರು.
ಜಿಲ್ಲೆಯ ಗ್ರಾಮೀಣ ಸಮಸ್ಯೆಯ ಕುರಿತು “ಉದಯವಾಣಿ’ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಫೋನ್‌ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ವಾರಾಹಿ ಅಣೆಕಟ್ಟಿನಿಂದ ಬೈಂದೂರು ವಿಧಾನಸಭಾ ವ್ಯಾಪ್ತಿಗೆ ನೀರು ಪೂರೈಸಲು 585 ಕೋ.ರೂ. ಯೋಜನೆಯ ಕಾರ್ಯಾರಂಭವಾಗಿದೆ. ಕಾರ್ಕಳ, ಕುಂದಾಪುರ, ಕಾಪು ವಿಧಾನಸಭಾ ವ್ಯಾಪ್ತಿಗೂ ವಾರಾಹಿ ನೀರು ಸರಬರಾಜು ಮಾಡಲು 1,600 ಕೋ.ರೂ. ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ಎರಡು ಯೋಜನೆಯಡಿ ನೀರು ಪೂರೈಕೆಗೆ ಅನುಕೂಲವಾಗುವಂತೆ ಅಣೆಕಟ್ಟಿನ ಸಮೀಪವೇ ಶುದ್ಧೀಕರಣ ಘಟಕವನ್ನು ಆರಂಭಿಸಲಿದ್ದೇವೆ. ನಬಾರ್ಡ್ ಹಾಗೂ ಜಲಜೀವನ್ ಮಿಷನ್ ಯೋಜನೆ ಸಹಯೋಗದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುವುದು. ಉಡುಪಿ ನಗರಕ್ಕೆ ಅಮೃತ್ ಯೋಜನೆಯಡಿ ವಾರಾಹಿ ನೀರು ಪೂರೈಸುವ ಕಾಮಗಾರಿ ಈಗಾಗಲೇ ಭರದಿಂದ ಸಾಗುತ್ತಿದೆ. ಹೀಗಾಗಿ ಇಡೀ ಜಿಲ್ಲೆಗೆ ವಾರಾಹಿ ನೀರು ಪೂರೈಕೆಯಾಗಲಿದೆ ಎಂದರು.
ವಾರಾಹಿ ಡ್ಯಾಂನಿಂದ ಗ್ರಾ.ಪಂ.ಗಳ ನೀರಿನ ಟ್ಯಾಂಕ್ ವರೆಗೂ ನೀರು ಪೂರೈಸುವ ಸಂಪೂರ್ಣ ಉಸ್ತುವಾರಿಯನ್ನು ಗುತ್ತಿಗೆ ಪಡೆದ ಸಂಸ್ಥೆಯೇ ಹೊಂದಿರುತ್ತದೆ. ಟ್ಯಾಂಕ್ ಮೂಲಕ ಮನೆ ಮನೆಗೆ ನೀರು ಸರಬರಾಜು ಮಾಡುವ ಕಾರ್ಯ ಮತ್ತು ನಿರ್ವಹಣೆ ಗ್ರಾ.ಪಂ.ಗಳ ಮೂಲಕ ಆಗಲಿದೆ ಎಂದರು.
ಜಲ ಜೀವನ್ ಮಿಷನ್‌ನ “ಮನೆ ಮನೆಗೆ ಗಂಗೆ’ ಯೋಜನೆಯ ಶೇ. 60ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕೆಲವೊಂದು ಗ್ರಾ.ಪಂ.ಗಳಲ್ಲಿ ಎಲ್ಲ ಮನೆಗೂ ನಲ್ಲಿ ಸಂಪರ್ಕ ಪೂರ್ಣಗೊಂಡಿದೆ. ನೀರಿನ ಸರಬರಾಜು ಟ್ಯಾಂಕ್ ನಿರ್ಮಾಣ ಇತ್ಯಾದಿ ಕಾಮಗಾರಿಗಳು ನಡೆಯುತ್ತಿವೆ. ಇದು ಕೂಡ 2024ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಈ ಯೋಜನೆಯಡಿ ನಲ್ಲಿ ಸಂಪರ್ಕಕ್ಕೆ ಶೇ. 10ರಷ್ಟು ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ವಿವರಿಸಿದರು.
ಜಿ.ಪಂ. ಸಿಪಿಒ ಶ್ರೀನಿವಾಸ ರಾವ್, ಜಲಜೀವನ್ ಮಿಷನ್ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಟಿ. ಮೋಹನ್ ಉಪಸ್ಥಿತರಿದ್ದು ಮಾಹಿತಿ ನೀಡಿದರು.