Advertisement

ಮೂರೂವರೆ ವರ್ಷಗಳಲ್ಲಿ ಉಡುಪಿಗೆ ವಾರಾಹಿ ನೀರು: ಭರವಸೆ

02:55 AM Dec 23, 2018 | Karthik A |

ಉಡುಪಿ: ಉಡುಪಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅಮೃತ್‌, ಎಡಿಬಿ, ರಾಜ್ಯ ಸರಕಾರ, ನಗರಸಭೆ ಅನುದಾನದ ನೆರವಿನಲ್ಲಿ ಕ್ವಿಮಿಪ್‌ ಟ್ರಾಂಚ್‌-2 ಯೋಜನೆಯಡಿ ದಿನದ 24 ಗಂಟೆ ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನು ಮೂರೂವರೆ ವರ್ಷಗಳಲ್ಲಿ ಉಡುಪಿ ನಗರಕ್ಕೆ ಕುಡಿಯುವ ನೀರು ಸರಬರಾಜಾಗಲಿದೆ ಎಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್ಸಿ) ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ ತಿಳಿಸಿದರು. ಯೋಜನೆಯಿಂದ ಸಾರ್ವಜನಿಕರ ಮೇಲಾಗುವ ಪರಿಣಾಮಗಳ ಕುರಿತು ಶನಿವಾರ ನಗರಸಭೆಯ ಸತ್ಯಮೂರ್ತಿ ಸಭಾಭವನದ ಕಚೇರಿಯಲ್ಲಿ ಶಿರಿಬೀಡು ಮತ್ತು ತೆಂಕಪೇಟೆ ವಾರ್ಡ್‌ ಮಟ್ಟದ ಸಾರ್ವಜನಿಕ ಸಮಾಲೋಚನ ಕಾರ್ಯಾಗಾರ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

Advertisement

ಟೆಂಡರ್‌ ಪ್ರಕ್ರಿಯೆ ಪ್ರಗತಿ
ವಾರಾಹಿ ನದಿಯಿಂದ (ಹಾಲಾಡಿ ಸಮೀಪದ ಕುಳ್ಳುಂಜೆ ಗ್ರಾಮದ ಭರತ್‌ಕಲ್‌) 38 ಕಿ.ಮೀ. ಉದ್ದಕ್ಕೆ  ಪೈಪ್‌ಲೈನ್‌ ಅಳವಡಿಸಿ ಉಡುಪಿ ನಗರ ಮತ್ತು ಪಕ್ಕದ ಕೆಲವು ಗ್ರಾ.ಪಂ.ಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯ ಎರಡು ಹಂತದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು 3ನೇ ಹಂತದ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 295.6 ಕೋ.ರೂ. ವೆಚ್ಚದ ಈ ಯೋಜನೆಯ ಮೊದಲ ಹಂತದ ಕಾಮಗಾರಿ 119.5 ಕೋ.ರೂ. ವೆಚ್ಚದಲ್ಲಿ ನಡೆಯಲಿದೆ. ಇದರಲ್ಲಿ ಪಂಪ್‌ ಅಳವಡಿಕೆ, ಜಾಕ್‌ವೆಲ್‌ ನಿರ್ಮಾಣ, ಪೈಪ್‌ಲೈನ್‌ ಅಳವಡಿಕೆ ಮೊದಲಾದವು ಸೇರಿವೆ. ಇದು ‘ಅಮೃತ್‌’ (ಅಟಲ್‌ ಮಿಷನ್‌ ಫಾರ್‌ ರಿಜುವಿನೇಷನ್‌ ಆ್ಯಂಡ್‌ ಅರ್ಬನ್‌ ಟ್ರಾನ್ಸ್‌ಫಾರ್ಮೇಷನ್‌) ಅನುದಾನದಲ್ಲಿ ನಡೆಯಲಿದೆ.  2ನೇ ಹಂತದ ಕಾಮಗಾರಿ ಎಡಿಬಿ ನೆರವಿನಲ್ಲಿ 112 ಕೋ.ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿದ್ದು ಇದರಲ್ಲಿ ನೀರಿನ ವಿತರಣೆಗೆ ಸಂಬಂಧಿಸಿದ ಕಾಮಗಾರಿಗಳು ಸೇರಿವೆ. 65.5 ಕೋ.ರೂ. ವೆಚ್ಚದಲ್ಲಿ ಶುದ್ಧೀಕರಣ ಘಟಕ ಇನ್ನಿತರ ಕಾಮಗಾರಿಗಳು ರಾಜ್ಯ ಸರಕಾರದ ಅನುದಾನದಿಂದ ನಡೆಯಲಿವೆ. ಇವೆಲ್ಲಕ್ಕೂ ನಗರಸಭೆಯ ಅನುದಾನವೂ ಸೇರಲಿದೆ ಎಂದರು.

36 ತಿಂಗಳ ಕಾಮಗಾರಿ 
ಕಾಮಗಾರಿಯನ್ನು 36 ತಿಂಗಳುಗಳ ಒಳಗೆ (2018ರ ನವೆಂಬರ್‌ನಿಂದ ಮೊದಲ್ಗೊಂಡು) ಪೂರ್ಣಗೊಳಿಸಬೇಕಿದೆ. ಮೊದಲ 8 ವರ್ಷಗಳ ಕಾಲ ಗುತ್ತಿಗೆದಾರ ಕಂಪೆನಿ ನಿರ್ವಹಣೆ ಮಾಡಲಿದೆ. ಕಾಮಗಾರಿ ಆರಂಭಿಸುವ ಮೊದಲು ಸಾರ್ವಜನಿಕರಿಗೆ ಪೂರ್ಣ ಮಾಹಿತಿ ನೀಡಿ ಅವರ ವಿಶ್ವಾಸದೊಂದಿಗೆ ಮುಂದುವರಿಯಲು ಉದ್ದೇಶಿಸಲಾಗಿದೆ. ಪೈಪ್‌ಲೈನ್‌ ಹಾದು ಹೋಗಲಿರುವ 12 ಗ್ರಾ.ಪಂ.ಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂಬ ಬೇಡಿಕೆಯನ್ನು ಗ್ರಾಮೀಣಾಭಿವೃದ್ಧಿ, ಪಂ.ರಾಜ್‌ ಇಲಾಖೆಯ ಮೂಲಕ ಈಡೇರಿಸಲು ನಿರ್ಧರಿಸಲಾಗಿದೆ ಎಂದು ರಾಮಕೃಷ್ಣಯ್ಯ ತಿಳಿಸಿದರು. 

3 ವರ್ಷದಲ್ಲಿ ನೀರು ಸರಬರಾಜು ಸಾಧ್ಯವೇ? ಎನ್ನುವ ನಗರಸಭೆ ಸದಸ್ಯ ಟಿ.ಜಿ. ಹೆಗ್ಡೆ ಅವರ ಪ್ರಶ್ನೆಗೆ ನಗರಸಭೆ ಪರಿಸರ ಅಭಿಯಂತರ ರಾಘವೇಂದ್ರ ಕೆ. ಪ್ರತಿಕ್ರಿಯಿಸಿ, ವಾರಾಹಿಯಲ್ಲಿ  ನೀರು ಸಾಕಷ್ಟು ಲಭ್ಯವಿದ್ದು ವಾರಾಹಿ ಯೋಜನೆಯನ್ನು 17 ಸಾವಿರ ಹೆಕ್ಟೇರ್‌ ಕೃಷಿ ಭೂಮಿಗೆ ನೀರುಣಿಸಲು ಮಾಡಿದ ಯೋಜನೆಯಾಗಿದೆ. ಒಟ್ಟು ಇರುವ 40.46 ಕ್ಯೂಮೆಕ್ಸ್‌ ನೀರಿನಲ್ಲಿ 31.15 ಕ್ಯೂಮೆಕ್ಸ್‌ ನೀರು 17 ಸಾವಿರ ಹೆಕ್ಟೇರ್‌ ಕೃಷಿ ಭೂಮಿಗೆ ಬೇಕಾಗುತ್ತದೆ. ಉಳಿದ 9.46 ಕ್ಯೂಮೆಕ್ಸ್‌ ನೀರು ಉಳಿಕೆಗೊಂಡು ನದಿಗೆ ಹರಿಯುತ್ತಿದೆ. ಇದರಲ್ಲಿ 0.47 ಕ್ಯೂಮೆಕ್ಸ್‌ (41 ಎಂಎಲ್‌ಡಿ) ನೀರು ಉಡುಪಿ ನಗರಸಭೆಗೆ ಬಳಸಿಕೊಳ್ಳಲಾಗುವುದು. ಆದುದರಿಂದ ವಾರಾಹಿ ನದಿಯಲ್ಲಿ ನೀರಿನ ಕೊರತೆ ಎದುರಾಗುವುದಿಲ್ಲ ಎಂದರು.

ಉಡುಪಿ ನಗರಕ್ಕೆ ವರ್ಷದ 8 ತಿಂಗಳು ಸ್ವರ್ಣ ನದಿಯ ನೀರು ಬಳಕೆಗೆ ಲಭ್ಯವಿರುತ್ತದೆ. ಉಳಿದ 4 ತಿಂಗಳು ಮಾತ್ರ ನೀರಿನ ಸಮಸ್ಯೆ ಎದುರಾಗುವ ನೆಲೆಯಲ್ಲಿ ವಾರಾಹಿ ನೀರನ್ನು ಬಳಸಿಕೊಳ್ಳುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಯೋಜನೆ ಯಿಂದ ವಾರಾಹಿ ನದಿ ಪಾತ್ರದ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ ಎಂದು ರೈತ ಸಂಘ ಮತ್ತು ಸ್ಥಳೀಯ ಗ್ರಾ.ಪಂ.ಗಳು ತಡೆಯೊಡ್ಡಿವೆ. ಆದರೆ ವಾರಾಹಿ ಯೋಜನೆಯನ್ನು ಸ್ಥಳೀಯ ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶದಿಂದಲೇ ಮಾಡಲಾಗಿದೆ ಎಂದು ಸಂಬಂಧಪಟ್ಟವರಿಗೆ ಮನವರಿಕೆ ಮಾಡಲಾಗಿದೆ ಎಂದರು. ಯೋಜನೆಗೆ ಸಂಬಂಧಿಸಿ ನೀರಾವರಿ ನಿಗಮದಿಂದ ಮಾಹಿತಿ ಪಡೆದು ಈಗಾಗಲೇ ಅನುಮತಿ ಪಡೆಯಲಾಗಿದೆ. ನ್ಯಾಯಾಲಯದಲ್ಲಿರುವ ತಕರಾರೂ ಕೂಡ ಸಧ್ಯದಲ್ಲೇ ಇತ್ಯರ್ಥಗೊಳ್ಳಲಿದ್ದು, ಯೋಜನೆ ಸುಲಲಿತವಾಗಿ ನಡೆಯಲಿದೆ. 20 ಎಂಎಲ್‌ಡಿ ನೀರು ಸ್ವರ್ಣಾ ನದಿಯಲ್ಲಿ ಲಭ್ಯವಿರುತ್ತದೆ. ಎಲ್ಲಿಯವರೆಗೆ ಒಳಹರಿವು ಇರುತ್ತದೆಯೋ ಅಲ್ಲಿಯವರೆಗೆ ಸ್ವರ್ಣಾ ನದಿ ನೀರನ್ನು ಬಳಸಲಾಗುವುದೆಂದು ರಾಘವೇಂದ್ರ ಕೆ. ಮಾಹಿತಿ ನೀಡಿದರು. ನಗರಸಭಾ ಸದಸ್ಯರಾದ ಮಾನಸಾ ಸಿ. ಪೈ, ಅಮೃತಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next