Advertisement

ವಾರದೊಳಗೆ ವಾರಾಹಿ ಯೋಜನೆಯ ರೂಪುರೇಷೆಗಳ ಸಮಗ್ರ ವರದಿ: ಪ್ರತಾಪ್‌ಚಂದ್ರ ಶೆಟ್ಟಿ

12:03 AM Mar 08, 2021 | Team Udayavani |

ಕೋಟ: ವಾರಾಹಿ ಎಡದಂಡೆ ಏತನೀರಾವರಿ ಯೋಜನೆ ಯಾವ-ಯಾವ ಸ್ಥಳದ ಮೂಲಕ ಹಾದು ಹೋಗಲಿದೆ. ಯಾರಿಗೆಲ್ಲ ಅನುಕೂಲವಾಗಲಿದೆ, ಯೋಜನೆಯ ನೀಲಿನಕಾಶೆ ಹೇಗಿರಲಿದೆ ಎನ್ನುವ ಕುರಿತು ಸ್ಥಳೀಯರಿಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಯೋಜನೆ ಒಳಗೊಂಡಿರುವ ಗ್ರಾ.ಪಂ.ಗಳಿಗೆ ಕಾಮಗಾರಿಯ ಸಮಗ್ರ ವರದಿಯ ಕೈಪಿಡಿಯನ್ನು ವಾರದೊಳಗೆ ಅಧಿಕಾರಿಗಳು ನೀಡಲಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ, ಉಡುಪಿ ಜಿಲ್ಲಾ ರೈತಸಂಘದ ಅಧ್ಯಕ್ಷ ಎಚ್‌. ಪ್ರತಾಪ್‌ಚಂದ್ರ ಶೆಟ್ಟಿ ತಿಳಿಸಿದರು.

Advertisement

ಅವರು ಮಾ.6ರಂದು ಮಂದಾರ್ತಿ ಯಲ್ಲಿ ಉಡುಪಿ ಜಿಲ್ಲಾ ರೈತಸಂಘದ ಆಶ್ರಯದಲ್ಲಿ ಜರಗಿದ ವಾರಾಹಿ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು, ಅಧಿಕಾರಿಗಳು, ಯೋಜನೆಯ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರ ಸಭೆಯಲ್ಲಿ ಈ ವಿಚಾರ ತಿಳಿಸಿದರು.

ಅಧಿಕಾರಿಗಳು ಚುರುಕಾಗಿ
ಪರಿಹಾರ ಕೈ ಸೇರದಿದ್ದರೂ ರೈತರು ಯೋಜನೆಗಾಗಿ ಜಾಗ ಬಿಟ್ಟುಕೊಟ್ಟಿದ್ದಾರೆ ಹಾಗೂ ಕಾಮಗಾರಿ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ. ಎಲ್ಲರೂ ಒಮ್ಮತದಿಂದ ಯೋಜನೆಯೊಂದಕ್ಕೆ ಭೂಮಿ ನೀಡಿರು ವುದು ಇದೇ ಮೊದಲು. ಆದರೆ ಕೆಲವೊಂದು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರಣ್ಯಭೂಮಿಯಲ್ಲಿ ಕಾಮಗಾರಿ ನಡೆಸಲು ಸರಕಾರದ ಒಪ್ಪಿಗೆ
ಪಡೆಯಲು ಹಿನ್ನಡೆಯಾಗಿದೆ. ಇಂತಹ ಕಾರಣಗಳಿಂದಾಗಿಯೇ 41 ವರ್ಷ ಗಳಾದರೂ ಯೋಜನೆ ಪೂರ್ಣಗೊಳ್ಳ ದಿರಲು ಕಾರಣವಾಗಿದೆ. ಸ್ಥಳೀಯರಿಗೆ ವರಪ್ರದವಾಗಿರುವ ಈ ಯೋಜನೆಗಾಗಿ ಅಧಿಕಾರಿಗಳು ಇನ್ನಷ್ಟು ಶ್ರಮವಹಿಸಬೇಕು ಎಂದು ಪ್ರತಾಪ್‌ಚಂದ್ರ ಶೆಟ್ಟಿ ತಿಳಿಸಿದರು.

ಅಧಿಕಾರಿಗಳಿಂದ ಮಾಹಿತಿ
ಹೈಕಾಡಿ ಸಮೀಪ ಕಾಸಾಡಿಯಿಂದ ಶಿರೂರುಮೂಕೈì ತನಕ ಒಂದು ಕಾಲುವೆ ಹಾಗೂ ಅಲ್ಲಿಂದ 9 ಹಾಗೂ 26 ಕಿ.ಮೀ.ಉದ್ದದ ಎರಡು ಪ್ರತ್ಯೇಕ ಕಾಲುವೆಗಳು ಜಿಲ್ಲಾ ಮುಖ್ಯ ರಸ್ತೆಯ ಪಕ್ಕದಲ್ಲಿ ಹಾದು ಹೋಗಲಿದ್ದು 9 ಕಿ.ಮೀ. ಉದ್ದದ ಕಾಲುವೆ
ಶಿರೂರುಮೂಕೈ ಹೆಗ್ಗುಂಜೆ, ಯಡ್ತಾಡಿ ಸಂಪರ್ಕಿಸಲಿದ್ದು, 26 ಕಿ.ಮೀ. ಕಾಲುವೆ ಆವರ್ಸೆ, ವಂಡಾರು, ಬಿಲ್ಲಾಡಿ, ಶಿರಿಯಾರ, ಯಡ್ತಾಡಿ, ಕಾವಡಿ, ಅಚ್ಲಾಡಿ ರೈಲ್ವೇ ಸೇತುವೆವರೆಗೆ ನಿರ್ಮಾಣಗೊಳ್ಳಲಿದೆ ಮತ್ತು ಆವರ್ಸೆ, ಹಿಲಿಯಾಣ, ವಂಡಾರು, ಶಿರೂರು 33 ಭಾಗವನ್ನು ತಲುಪಲಿದೆ. ಇದರ ಉಪ ಕಾಲುವೆಗಳ ಮೂಲಕ ಈ ಭಾಗದ ತೋಡು, ಹೊಳೆಗಳನ್ನು ಸಂಪರ್ಕಿಸಲಾಗುತ್ತದೆ ಎಂದು ಯೋಜನೆಯ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ್‌ ಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಸನ್ನ ಮಾಹಿತಿ ನೀಡಿದರು.

ರೈತರ ಪಶ್ನೆಗಳಿಗೆ ಉತ್ತರ
ಯೋಜನೆಯಿಂದಾಗಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವಾಗ ಯಾವ ಮಾನದಂಡ ಪರಿಗಣಿಸಿದ್ದೀರಿ; ಉಪ ಕಾಲುವೆಗಳು ಯಾವ ಸ್ಥಳದಲ್ಲಿ ನಿರ್ಮಾಣವಾಗಲಿವೆ; ಬೆಳೆನಷ್ಟ ಪರಿಹಾರ ಪರಿಗಣಿಸುವಾಗ ಭತ್ತವನ್ನು ಪರಿಗಣಿಸುತ್ತಿಲ್ಲ; ಮುಖ್ಯ ಕಾಲುವೆಯ ಪಕ್ಕದಲ್ಲಿದ್ದರೂ ಕೆಲವೊಂದು ಗ್ರಾಮಗಳನ್ನು ಯೋಜನೆ ಸಂಪರ್ಕಿಸುತ್ತಿಲ್ಲ ಎನ್ನುವ ವಿಚಾರದ ಕುರಿ‌ತು ರೈತರು ಪ್ರಶ್ನೆ ಎತ್ತಿದರು.

Advertisement

ಭೂಮಿ ಕಳೆದುಕೊಂಡವರಿಗೆ ಪರಿಹಾರವನ್ನು ಉಪವಿಭಾಗಾಧಿಕಾರಿಗಳ ನೇತೃತ್ವದ ಕಮಿಟಿ ನಿರ್ಧಾರ ಮಾಡಲಿದೆ ಹಾಗೂ ಆಯಾಯ ಬೆಳೆ, ಮರಮಟ್ಟುಗಳಿಗೆ ಸಂಬಂಧಿಸಿದಂತೆ ತೋಟಗಾರಿಕೆ, ಅರಣ್ಯ, ಕೃಷಿ ಅಧಿಕಾರಿಗಳು ಬೆಲೆ ನಿಗದಿ ಮಾಡುತ್ತಾರೆ. ಭತ್ತ ದೀಘ ಕಾಲಿಕ ಬೆಳೆಯಲ್ಲದ ಕಾರಣ ಪರಿಹಾರಕ್ಕೆ ಪರಿಗಣಿಸಲಾಗುತ್ತಿಲ್ಲ. ಉಪ ಕಾಲುವೆಗಳ ಕುರಿತು ಇನ್ನಷ್ಟೇ ಯೋಜನೆ ಸಿದ್ಧವಾಗಬೇಕಿದ್ದು ಈ ಬಗ್ಗೆ ಗ್ರಾಮಸ್ಥರು ಸಲಹೆ ನೀಡಬಹುದು. ಮುಖ್ಯ ಕಾಲುವೆ ಹಾದು ಹೋಗುವ ತಗ್ಗು ಪ್ರದೇಶಗಳಿಗೆಲ್ಲ ನೀರಾವರಿ ಸಂಪರ್ಕ ಸಿಗಲಿದೆ ಎಂದು ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next