Advertisement

ಇನ್ನೂ ಹಾಕಿಲ್ಲ ವಾರಾಹಿ ಗೇಟು: ಕುಡಿಯುವ ನೀರಿಗೆ ಸಂಕಷ್ಟ !

02:25 AM Oct 30, 2018 | Karthik A |

ಕುಂದಾಪುರ: ಭೀಕರ ಮಳೆಗೆ ತೆರೆದ ವಾರಾಹಿ ನದಿಯ ಉಪನದಿ ಜಂಬೂ ನದಿಯ ಗೇಟು ಮುಚ್ಚದಿದ್ದ ಕಾರಣ ಕುಂದಾಪುರ ಪುರಸಭೆಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಂಗ್ರಹವಾಗದಿದ್ದರೆ ಈ ಬಾರಿಯ ಬೇಸಗೆ ಕಡು ಕಷ್ಟಕಾಲ ತರಲಿದೆ. ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ.

Advertisement

ತೆರೆದ ಗೇಟು
ಆಗಸ್ಟ್‌ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಜಂಬೂ ನದಿ ತುಂಬಿ ಹರಿದಿತ್ತು. ಆ.14ರಂದು ವಾರಾಹಿ ಜಲವಿದ್ಯುತ್‌ ಯೋಜನೆ ವತಿಯಿಂದ ಗೇಟು ತೆರೆಯುವ ಪ್ರಕಟನೆ ನೀಡಲಾಗಿತ್ತು. ತದನಂತರದ ದಿನಗಳಲ್ಲಿ ಗೇಟು ಮುಚ್ಚದ ಕಾರಣ ನೀರು ಸರಾಗವಾಗಿ ಹರಿದು ಸಮುದ್ರ ಸೇರುತ್ತಿತ್ತು. ರವಿವಾರ ರಾತ್ರಿ ಪುರಸಭೆಗೆ ಕುಡಿಯುವ ನೀರಿಗೆ ಬರುವ ನೀರಿನ ಪ್ರಮಾಣ ಕಡಿಮೆಯಾದಾಗ ಅವಾಂತರ ಗಮನಕ್ಕೆ ಬಂದಿದೆ.

ಏನು ಸಮಸ್ಯೆ
ಹೊಳೆಯಲ್ಲಿ ನೀರು ಖಾಲಿಯಾದರೆ ಐದು ಪಂಚಾಯತ್‌ ಹಾಗೂ ಕುಂದಾಪುರ ಪುರಸಭೆ ವ್ಯಾಪ್ತಿಯ ಜನರಿಗೆೆ ಕುಡಿಯುವ ನೀರಿಗೆ ಇರುವ ಏಕೈಕ ಆಧಾರ ಕೈ ಕೊಟ್ಟಂತಾಗುತ್ತದೆ. ಈಗಲೇ ನೀರಿನ ಹರಿವು ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಬರಬಹುದು. 

ಸಮುದ್ರದ ಉಬ್ಬರ ಇಳಿತದ ಸಂದರ್ಭ ಈ ಪ್ರದೇಶಕ್ಕೆ ಹಿನ್ನೀರು ಹೋಗುತ್ತದೆ. ಆಗ ಕೂಡಾ ಗೇಟಿನ ಆವಶ್ಯಕತೆ ಇರುತ್ತದೆ. ಉಪ್ಪುನೀರು ನದಿಯೊಳಗೆ ಮರಳಿ ಹರಿದಾಗ ಗೇಟು ಹಾಕಿರದಿದ್ದರೆ ಕುಡಿಯುವ ನೀರಿನ ಜತೆ ಉಪ್ಪು ನೀರು ಸೇರಿ ಸಮಸ್ಯೆ ಬಿಗಡಾಯಿಸುತ್ತದೆ. ಹಾಗೇನೂ ಸಮಸ್ಯೆಯಾಗಲು ಬಿಡುವುದಿಲ್ಲ. ಕುಡಿಯುವ ನೀರಿನ ಅಗತ್ಯವಿದೆ ಎಂದ ಕೂಡಲೇ ನಮ್ಮಲ್ಲಿ ನೀರಿನ ಲಭ್ಯತೆಯಿದ್ದು ತತ್‌ಕ್ಷಣ ಗೇಟು ಹಾಕಿ ಸಹಕರಿಸುತ್ತೇವೆ ಎಂದು ವಾರಾಹಿ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್‌ ಹೆಗಡೆ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಕುಂದಾಪುರಕ್ಕೆ ನೀರು
ಜಂಬೂ ನದಿಯಿಂದ ಜಪ್ತಿ ಎಂಬಲ್ಲಿ ನೀರು ಸಂಗ್ರಹಿಸಿ ಶುದ್ಧೀಕರಿಸಿ ಪುರಸಭೆ ನಾಗರಿಕರಿಗೆ ಕುಡಿಯಲು ನೀರು ಕೊಡಲಾಗುತ್ತದೆ. ಹೀಗೆ ಪೈಪ್‌ಲೈನ್‌ ಮೂಲಕ ನೀರು ತರುವಾಗ ಪೈಪ್‌ಲೈನ್‌ ಹಾದುಹೋಗುವ ಆನಗಳ್ಳಿ, ಬಸ್ರೂರು, ಕೋಣಿ, ಹಂಗಳೂರು, ಕಂದಾವರ, ಭಾಗಶಃ ಕೋಟೇಶ್ವರ ಪಂಚಾಯತ್‌ನ ಜನತೆಗೆ ನೀರು ಒದಗಿಸಲಾಗುತ್ತದೆ. ಪುರಸಭೆಯಲ್ಲಿ 2,815 ಮನೆಗಳಿಗೆ, 35 ಇತರ, 169 ವಾಣಿಜ್ಯ ಸಂಪರ್ಕಗಳಿವೆ. ಅಗ್ನಿಶಾಮಕ ಠಾಣೆ ಹಾಗೂ ಎಂಜಿನಿಯರಿಂಗ್‌ ಕಾಲೇಜಿಗೆ ಕೂಡಾ ಇದೇ ನೀರಿನ ಸಂಪರ್ಕವಿದೆ. 

Advertisement

ರಾಜ್ಯಕ್ಕೆ ನಂ.1
ನೀರಿನ ವಿತರಣೆ ಹಾಗೂ ಬಿಲ್ಲು ಸಂಗ್ರಹದಲ್ಲಿ ಶೇ.85 ವಸೂಲಿ ಮಾಡಿದ ಇಲ್ಲಿನ ಪುರಸಭೆ ರಾಜ್ಯದಲ್ಲಿ ನಂ.1 ಸ್ಥಾನ ಗಳಿಸಿದ ಹೆಗ್ಗಳಿಕೆಯಲ್ಲಿದೆ. 2017-18ರಲ್ಲಿ 1.15 ಕೋ.ರೂ. ನೀರಿನ ಬಿಲ್ಲು ಸಂಗ್ರಹಿಸಿದ್ದು ಈ ವರ್ಷ ಎಪ್ರಿಲ್‌ನಿಂದ ಅ.25ರವರೆಗೆ 59.54 ಲಕ್ಷ ರೂ. ಸಂಗ್ರಹಿಸಿದೆ. ಈ ವರ್ಷ ಈಗಾಗಲೇ 65,12,38,912ಲೀ. ನೀರು ಖರ್ಚಾಗಿದೆ. ಕಳೆದ ವರ್ಷ 102,08,88,741 ಲೀ. ನೀರು ಖರ್ಚಾಗಿದೆ. 

ದಿನವಿಡೀ ನೀರು
ಪುರಸಭೆಯಲ್ಲಿ ಒಟ್ಟು 23 ವಾರ್ಡ್‌ ಗಳಿದ್ದು ಈಗ 3 ವಾರ್ಡ್‌ಗಳಿಗೆ ದಿನವಿಡೀ ನೀರು ಪೂರೈಸಲಾಗುತ್ತಿದೆ. ಉಳಿದ 17 ವಾರ್ಡ್‌ಗಳಿಗೆ 8 ಗಂಟೆ ನೀರು ಕೊಡಲಾಗುತ್ತಿದ್ದು ಕೋಡಿಯ ಮೂರು ವಾರ್ಡ್‌ಗಳಿಗೆ ನೀರು ಸರಬರಾಜು ವ್ಯವಸ್ಥೆ ಇಲ್ಲ. ಇಲ್ಲಿಗೆ 17 ಕೋ.ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಆರಂಭವಾಗಿದೆ. ಇದಾದ ಬಳಿಕ ಇಡೀ ಪುರಸಭೆ ವ್ಯಾಪ್ತಿಗೆ ದಿನದ 24 ತಾಸು ನೀರು ಕೊಡಲು ಪುರಸಭೆ ಚಿಂತನೆ ನಡೆಸಿದೆ.

ಕ್ರಮ ವಹಿಸಲಾಗುವುದು
ಸಾಮಾನ್ಯವಾಗಿ ವರ್ಷವೂ ನ.15ರ ನಂತರ ಗೇಟು ಹಾಕಲಾಗುತ್ತದೆ. ಹಿನ್ನೀರು ಬಂದಿದೆಯೇ ಎಂದು ಪರಿಶೀಲಿಸಲಾಗುತ್ತಿದ್ದು ಉಪ್ಪುನೀರು ಬಂದ ಕೂಡಲೇ ಗೇಟು ಹಾಕಲಾಗುತ್ತದೆ. ಪುರಸಭೆಗೆ ನೀರು ಕಡಿಮೆಯಾಗಿದೆ ಎಂದು ಮಾಹಿತಿ ತಿಳಿದ ಕೂಡಲೇ ಗೇಟು ಹಾಕಲು ಕ್ರಮ ವಹಿಸಲಾಗುವುದು.
– ಅಶೋಕ್‌, ಸಹಾಯಕ ಎಂಜಿನಿಯರ್‌, ವಾರಾಹಿ ಯೋಜನೆ

ಮಾಹಿತಿ ಕೊಡಲಾಗಿದೆ
ವಾರಾಹಿ ಯೋಜನೆಯವರಿಗೆ ನೀರು ಕಡಿಮೆಯಾದ ಕುರಿತು ಮಾಹಿತಿ ಕೊಡಲಾಗಿದೆ. ಅವರು ಗೇಟು ಹಾಕಿದ ಬಳಿಕ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸವಿದೆ.
– ಮಂಜುನಾಥ್‌ ಶೆಟ್ಟಿ, ಎಂಜಿನಿಯರ್‌, ಪುರಸಭೆ, ಕುಂದಾಪುರ

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next