ದಾವಣಗೆರೆ: ಹಲವು ಬಾರಿ ಸಭೆ ನಡೆಸಿ, ಮನವೊಲಿಸಿ ಎಚ್ಚರಿಕೆ ನೀಡಿದರೂ ಮಾಲೀಕರು ಹಂದಿಗಳ ಸ್ಥಳಾಂತರಕ್ಕೆ ಮುಂದಾಗದೇ ಇರುವುದರಿಂದ ಪಾಲಿಕೆ ಇದೀಗ ಇನ್ನೊಂದು ಮಾರ್ಗದಲ್ಲಿ ಹಂದಿ ಸಮಸ್ಯೆ ನಿರ್ಮೂಲನೆಗೆ ಮುಂದಾಗಿದೆ. ಹಂದಿಮುಕ್ತ ಸ್ಮಾರ್ಟ್ ಸಿಟಿ ನಿರ್ಮಿಸುವ ಕಾರ್ಯಾಚರಣೆಗೆ ಪಾಲಿಕೆ ಕೈ ಹಾಕಿದ್ದು, ಸೋಮವಾರ ತಮಿಳುನಾಡಿನ ತಂಡ ಹಂದಿಗಳನ್ನು ಹಿಡಿದು ಕೊಂಡೊಯ್ಯುತ್ತಿದೆ.
ಈ ತಂಡದವರೇ ನಗರದಲ್ಲಿನ ಹಂದಿಗಳನ್ನು ಹಿಡಿದುಕೊಂಡು ತಮಿಳುನಾಡಿಗೆ ಸಾಗಿಸುವ ಜವಾಬ್ದಾರಿ ಹೊತ್ತಿದ್ದಾರೆ. ಈ ಕೆಲಸಕ್ಕೆ ಪೊಲೀಸ್ ಇಲಾಖೆ ಸಹ ಕೈ ಜೋಡಿಸಿದೆ. ಹಂದಿಗಳನ್ನು ಹಿಡಿದು ದಾವಣಗೆರೆ ಜಿಲ್ಲೆಯ ಗಡಿ ದಾಟಿಸುವವರೆಗೆ ಈ ತಂಡಕ್ಕೆ ಪೊಲೀಸ್ ಇಲಾಖೆ ಭದ್ರತೆ ನೀಡಲಿದೆ. ಚಿತ್ರದುರ್ಗದ ಜಿಲ್ಲೆ ಗಡಿ ಮುಕ್ತಾಯದವರೆಗೂ ಆ ಜಿಲ್ಲಾ ಪೊಲೀಸರ ಭದ್ರತೆ ಸಿಗಲಿದೆಯಂತೆ.
ಬೆಳಗ್ಗೆಯಿಂದಲೇ ತಂಡದವರು ನಗರದ ವಿವಿಧೆಡೆ ಹಂದಿಗಳನ್ನು ಹಿಡಿದು ತರಾತುರಿಯಲ್ಲಿ ಚಿತ್ರದುರ್ಗದ ಮೂಲಕ ಸಾಗಿಸಿದರು. ನಗರದ ಅರುಣ ಚಿತ್ರಮಂದಿರ, ಮೀನು ಮಾರುಕಟ್ಟೆ, ಲಕ್ಷ್ಮೀಫ್ಲೊರ್ ಮಿಲ್, ಜಿಲ್ಲಾಸ್ಪತ್ರೆ, ಎಂಸಿಸಿ ಬಿ ಬ್ಲಾಕ್, ಪಿ.ಜೆ. ಬಡಾವಣೆ ಸೇರಿ ವಿವಿಧ ಭಾಗಗಳಲ್ಲಿ ಹಿಡಿದು, 2 ಲಾರಿಯಲ್ಲಿ ಹಂದಿಗಳನ್ನು ಸಾಗಿಸಲಾಗಿದೆ. 500ಕ್ಕೂ ಹಂದಿಗಳನ್ನು ಹಿಡಿದು ಸಾಗಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ, ಲಭ್ಯ ಮಾಹಿತಿ ಪ್ರಕಾರ ಸಾವಿರಾರು ಹಂದಿಗಳನ್ನು ಒಂದೇ ದಿನದಲ್ಲಿ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕೆಲ ಕಡೆಗಳಲ್ಲಿ ಹಂದಿ ಹಿಡಿಯುವಾಗ ಅವುಗಳ ಮಾಲೀಕರು ಅಡ್ಡಿಪಡಿಸಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದು, ವಾಪಸ್ ಕಳುಹಿಸಿದರು. ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಂದಿ ಹಿಡಿಯುವ ಕಾರ್ಯಕ್ಕೆ ಸಹಕಾರ ನೀಡಿದರು.
ಕಳೆದ ಹಲವು ವರ್ಷಗಳಿಂದ ಹಂದಿ ನಿರ್ಮೂಲನೆಗೆ ಯತ್ನಿಸಿದರೂ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿರಲಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಸ್.ಟಿ. ಅಂಜನ್‌ಕುಮಾರ್ ಬಾತಿ ಗುಡ್ಡದ ಬಳಿ ಜಾಗ ನೀಡಿ, ಅಲ್ಲಿ ಹಂದಿ ಸಾಕಣೆಗೆ ಅವಕಾಶ ಮಾಡಿಕೊಡುವ ಉದ್ದೇಶ ಹೊಂದಿದ್ದರು. ಆದರೆ, ಗ್ರಾಮಸ್ಥರಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಯೋಜನೆ ಅಲ್ಲಿಗೆ ಬಿದ್ದುಹೋಯಿತು.
ಅದಾದ ನಂತರ ಪಾಲಿಕೆ ಮೇಯರ್, ಆಯುಕ್ತ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಹಲವು ಬಾರಿ ಹಂದಿ ಮಾಲೀಕರ ಸಭೆ ನಡೆಸಲಾಯಿತು. ಸಭೆಯಲ್ಲಿ ಹಂದಿ ಸ್ಥಳಾಂತರಕ್ಕೆ ಒತ್ತಾಯ ಮಾಡಲಾಗಿತ್ತು. ಸ್ಥಳಾಂತರ ಮಾಡದೇ ಇದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಎಚ್ಚರಿಕೆ ಸಹ ನೀಡಲಾಗಿತ್ತು. ಆದರೆ, ಮಾಲೀಕರು ಇದಕ್ಕೆ ಜಗ್ಗಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.