ಹನ್ನೆರಡನೇ ವರ್ಷದ ಎಸ್.ಪಿ.ವರದರಾಜು ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ನಡೆಯಿತು. ರಂಗಭೂಮಿಯ ಹಿರಿಯ ಕಲಾವಿದೆ ಪ್ರತಿಭಾ ನಾರಾಯಣ ಹಾಗೂ ಹಿರಿಯ ನಟ ಎಂ.ಎಸ್.ಉಮೇಶ್ ಅವರಿಗೆ ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರ್ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ರಾಜಕುಮಾರ್ ಅವರ ಸಹೋದರ ಎಸ್.ಪಿ. ವರದರಾಜು ಅವರ ಹೆಸರಿನಲ್ಲಿ ಕಳೆದ ಹನ್ನೊಂದು ವರ್ಷಗಳಿಂದಲೂ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಎಂ.ವಿ. ರಾಜಶೇಖರ್, ರಾಜಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ವೇಳೆ ನಾನು ಅವರ ಆರೋಗ್ಯ ವಿಚಾರಿಸಲು ಮನೆಗೆ ಹೋಗಿದ್ದೆ. ಅಲ್ಲಿಂದ ನಾನು ಹೊರಡುವಾಗ ನನ್ನನ್ನು ಬೀಳ್ಕೊಡಲು ಬಾಗಿಲವರೆಗೆ ಅವರು ಬಂದರು. ಆಗ ನಾನು ಈ ಸಂದರ್ಭದಲ್ಲಿ ನೀವ್ಯಾಕೆ ಬರಲು ಹೋದಿರಿ ಎಂದೆ. ಅದಕ್ಕೆ ಅವರು ಇದು ನನ್ನ ಕರ್ತವ್ಯ ಎಂದು ಉತ್ತರಿಸಿದರು. ಅವರೊಬ್ಬ ಶ್ರೇಷ್ಠ ವ್ಯಕ್ತಿ. ಕನ್ನಡ ಚಿತ್ರರಂಗ ಅವರಿಂದ ಶ್ರೀಮಂತವಾಗಿದೆ.
ಡಾ.ರಾಜ್, ವರದಪ್ಪ ಅವರಂತಹ ಮಹಾನ್ ವ್ಯಕ್ತಿಗಳ ಗುಣ, ಸಂಸ್ಕೃತಿಯನ್ನು ನಾವು ಅಳವಡಿಸಿಕೊಳ್ಳೋದು ನಾವು ಅವರಿಗೆ ಕೊಡುವ ಗೌರವ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗಾಯಕಿ ಮಂಜುಳಾ ಗುರುರಾಜ್, ವರದಪ್ಪ ಅವರ ಸಂಗೀತ ಅಭಿರುಚಿಯನ್ನು ಮೆಲುಕು ಹಾಕಿದರು. “ರಾಜ್‌ಕುಮಾರ್ ಹಾಗೂ ವರದಪ್ಪ ರಾಮ-ಲಕ್ಷ್ಮಣರಿದ್ದಂತೆ. “ನಂಜುಂಡಿ ಕಲ್ಯಾಣ’ ಚಿತ್ರದ “ಒಳಗೆ ಸೇರಿದರೆ ಗುಂಡು ….’ ಹಾಡನ್ನು ನಾನು ಹಾಡುವ ವೇಳೆ, ಅದರ ಲಯ ಹೀಗೇ ಬರಬೇಕೆಂದು ಹೇಳಿಕೊಟ್ಟವರು ವರದಪ್ಪ ಅವರು.
ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಆ ಹಾಡನ್ನೇ ಹಾಡಲು ಹೇಳುತ್ತಾರೆ. ಆಗ ನನಗೆ ಆ ಹಾಡು ಹಾಡಿದ ಸನ್ನಿವೇಶ ನೆನಪಾಗುವ ಜೊತೆಗೆ, ಆ ಹಾಡಿನಲ್ಲಿ ವರದಪ್ಪ ಅವರು ಕಾಣಿಸುತ್ತಾರೆ. ಅವರಿಗೆ ಸಂಗೀತದ ಅಭಿರುಚಿ ಚೆನ್ನಾಗಿಯೇ ಇತ್ತು’ ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ನಟ ಎಂ.ಎಸ್.ಉಮೇಶ್ ಅವರು ಕೂಡಾ ಡಾ.ರಾಜ್‌ಕುಮಾರ್ ಹಾಗೂ ವರದಪ್ಪ ಅವರು ತಮಗೆ ಕೊಟ್ಟ ಬೆಂಬಲವನ್ನು ನೆನೆದರು.
“ರಾಜಕುಮಾರ್ ಹಾಗೂ ವರದಪ್ಪ ಅವರು ಕೊಟ್ಟ ಬೆಂಬಲದಿಂದ ಇಲ್ಲಿ ನಿಲ್ಲಲು ಸಾಧ್ಯವಾಯಿತು. ಊಟಕ್ಕಾಗಿ ಬಂದನು ನಾನು. ಪ್ರಾಮಾಣಿಕವಾಗಿ ಅಭಿನಯ ಮಾಡಿಕೊಂಡು ಹೋದೆ. ಸಂಭಾವನೆ, ಪಾತ್ರದ ಬಗ್ಗೆ ಕೇಳಲಿಲ್ಲ. ರಂಗಭೂಮಿಯಿಂದ ಬಂದ ಕಲಾವಿದರ ಕಷ್ಟ ಅರಿತಿದ್ದ ವಜ್ರೆàಶ್ವರಿ ಸಂಸ್ಥೆ ಒಬ್ಬ ಕಲಾವಿದನಿಗೆ ಏನು ಸಂದಾಯ ಮಾಡಬೇಕೋ ಅದನ್ನು ಮಾಡುತ್ತಿತ್ತು. ನಾನು ವರದಪ್ಪ ಅವರನ್ನು ಮರೆಯಲು ಸಾಧ್ಯವಿಲ್ಲ. ನಾವು ಸಿಕ್ಕಾಗೆಲ್ಲಾ ಸಿನಿಮಾ ಬಗ್ಗೆ ಚರ್ಚಿಸುತ್ತಿದ್ದೆವು.
“ಶ್ರುತಿ ಸೇರಿದಾಗ’ ಚಿತ್ರದ “ಬೊಂಬೆಯಾಟವಯ್ನಾ …’ ಹಾಡಿನಲ್ಲಿ ನನ್ನ ಹಾವ-ಭಾವ ಹೇಗಿದ್ದರೆ ಚೆಂದ ಎಂದು ಹೇಳಿಕೊಟ್ಟವರು ವರದಪ್ಪನವರು. ಅದು ಹಿಟ್ ಆಯಿತು ಕೂಡಾ. ಈಗ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಖುಷಿಯಾಗುತ್ತಿದೆ. ಇಲ್ಲಿವರೆಗೆ ಹಲವು ಬಿರುದು ಪ್ರಶಸ್ತಿಗಳು ಬಂದಿವೆ. ಆದರೆ ಸರಸ್ವತಿಯ ಸ್ಪರ್ಶವಾಗಿದೆಯೇ ಹೊರತು ಸಾಕಾರ ಆಗಿಲ್ಲ’ ಎಂದರು. ಪ್ರಶಸ್ತಿ ಸ್ವೀಕರಿಸಿದ ರಂಗಭೂಮಿ ಕಲಾವಿದೆ ಪ್ರತಿಭಾ ನಾರಾಯಣ ಕೂಡಾ ಸಂತಸ ಹಂಚಿಕೊಂಡರು.