ಭಟ್ಕಳ: ನಗರದ ಸ್ನೇಹ ವಿಶೇಷ ಶಾಲೆ ಕೇವಲ 16 ಮಕ್ಕಳೊಂದಿಗೆ ಖಾಸಗಿ ಕಟ್ಟಡದಲ್ಲಿ 1997ರಲ್ಲಿ ಆರಂಭವಾಗಿದ್ದು ಇಂದು ಕೋಗ್ತಿಯಲ್ಲಿರುವ ಪುರಸಭಾ ವತಿಯಿಂದ ನೀಡಿದ್ದ ಜಾಗಾದಲ್ಲಿರುವ ಕಟ್ಟಡದಲ್ಲಿ ನಡೆಯುತ್ತಿದ್ದು ಅನೇಕ ವಿಶೇಷ ಚೇತನ ಮಕ್ಕಳಿಗೆ ವರದಾನವಾಗಿದೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಮಾಲತಿ ಉದ್ಯಾವರ್ ಗೆ ಸಮಾಜದಲ್ಲಿ ತುಳಿತಕ್ಕೊಳಗಾದವರು, ಬಡವರು, ವಿಶೇಷ ಚೇತನ ಮಕ್ಕಳ ಕುರಿತು ಕಾಳಜಿ ಮತ್ತು ಮಮಕಾರ. ಅಂತಹ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು, ಅವರೂ ಎಲ್ಲರಂತೆ ಆಟ ಆಡಿಕೊಂಡಿರಬೇಕು ಎನ್ನುವುದು ಅವರ ಆಶಯವಾಗಿತ್ತು. ಹಲವಾರು ವರ್ಷಗಳ ಅವರು ಕನಸು ನನಸಾಗಿದ್ದು 1997ರಲ್ಲಿ ಸ್ವತಹ ಒಂದು ಖಾಸಗಿ ಕಟ್ಟಡವನ್ನು ಭಾಡಿಗೆಗೆ ಪಡೆದು ಕೇವಲ 16 ಮಕ್ಕಳಿಂದ ಆರಂಭವಾದಾಗ. ಇಂದು 42ಕ್ಕೂ ಹೆಚ್ಚು ಮಕ್ಕಳು ಡೆಕೇರ್ ನೆಲೆಯಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದು ವಿದ್ಯಾರ್ಥಿಗಳನ್ನು ಕರೆತಂದು ಮನೆಗೆ ತಲುಪಿಸಲು ಸ್ವಂತ ವಾಹನ ಹೊಂದಿರುವುದು ವಿಶೇಷವಾಗಿದೆ.
ಸ್ನೇಹ ವಿಶೇಷ ಶಾಲೆ ಮತ್ತು ತರಬೇತಿ ಕೇಂದ್ರಕ್ಕೆ ಬರುವ ಮಕ್ಕಳನ್ನು ಅವರವರ ಬುದ್ಧಿಮತ್ತೆಗೆ ಸರಿಯಾಗಿ ತರಬೇತಿ ನೀಡಿ ಅವರು ಸಮಾಜದಲ್ಲಿ ಎಲ್ಲರಂತೆ ಬದುಕು ಕಲಿಯಬೇಕು ಎನ್ನುವುದು ಅವರ ಆಶಯವಾಗಿದ್ದು ಹಲವಾರು ವಿದ್ಯಾರ್ಥಿಗಳು ಇಂದು ವಿವಿಧ ರೀತಿಯ ತರಬೇತಿ ಪಡೆಯುತ್ತಿದ್ದಾರೆ. ಅವರವರ ಆಸಕ್ತಿಗೆ ತಕ್ಕಂತೆ ವಿದ್ಯಾಭ್ಯಾಸ, ಸಹ ಪಠ್ಯ ಚಟುವಟಿಕೆಗಳು, ಕ್ರಾಪ್ಟ್, ಆರ್ಟ್ ಸೇರಿದಂತೆ ಇತರೇ ಕಲೆಗಳನ್ನು ಕಲಿಸುವುದು. ಶಾಲಾ ವಿದ್ಯಾರ್ಥಿಗಳಿಂದ ವನಮಹೋತ್ಸವ ಆಚರಿಸುವುದು, ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸುವಿಕೆ, ಶಿಕ್ಷಕರ ದಿನಾಚರಣೆ, ಮಕ್ಕಳ ದಿನಾಚರಣೆ, ವಿವಿಧ ಆಟಗಳಲ್ಲಿ ಕೂಡಾ ಭಾಗವಹಿಸುತ್ತಾ ಉಲ್ಲಾಸಿತರನ್ನಾಗಿಸುವು ಕೂಡಾ ಶಾಲೆ ಮುಖ್ಯ ಉದ್ದೇಶವಾಗಿದೆ.
ಇಷ್ಟೇ ಅಲ್ಲದೇ ವಿದ್ಯಾರ್ಥಿಗಳು ಈಗಾಗಲೇ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಕಲಚೇತನರ ಕ್ರೀಡಾ ಕೂಟದಲ್ಲಿಯೂ ಭಾಗಿಯಾಗಿದ್ದು ಒಂದು ಸಾಧನೆಯಾಗಿದೆ. ಪ್ರತಿವರ್ಷ ಡಿ.3 ರಂದು ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನವನ್ನು ಆಚರಿಸಲಾಗುತ್ತದೆ. ತಾಲೂಕಿನಲ್ಲಿ ವಿಶೇಷ ಚೇತನ ಮಕ್ಕಳಿಗಾಗಿಯೇ ಆರಂಭವಾದ ಈ ಶಾಲೆಯಲ್ಲಿ ಮುಂದೆ ವಿವಿಧ ಕೋರ್ಸ್‌ಗಳನ್ನು ತೆರೆಯುವ ಹಾಗೂ ಮಕ್ಕಳಿಗೆ ಇಲ್ಲಿಯೇ ಉಳಿದು ಕೊಳ್ಳಲು ವ್ಯವಸ್ಥೆ ಮಾಡುವ ಯೋಚನೆ ಇದೆ.
ತಾಲೂಕಿನಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಆರಂಭವಾಗಿ 21 ವರ್ಷಗಳು ಕಳೆದರೂ ಸಹ ಶಾಲೆಗೆ ಇನ್ನೂ ತನಕ ಜಾಗಾ ಹಸ್ತಾಂತರವಾಗಿಲ್ಲ, ಶಾಲೆಯ ಹೆಸರಿಗೆ ಇನ್ನೂ ದಾಖಲಾಗದೇ ಶಾಲೆಗೆ ಯಾವುದೇ ಸೌಲಭ್ಯವನ್ನು ಸರಕಾರದಿಂದ ಇಲ್ಲವೇ ಇತರ ಸಂಘ ಸಂಸ್ಥೆಗಳಿಂದ ಪಡೆಯಲು ಸಾಧ್ಯವಾಗುತ್ತಿಲ್ಲ. ಪುರಸಭೆ ಈ ಕುರಿತು ತುರ್ತು ಕ್ರಮ ಕೈಗೊಂಡು ಶಾಲೆ ಜಾಗಾವನ್ನು ಅವರ ಹೆಸರಿಗೆ ಹಸ್ತಾಂತರಿಸಬೇಕಾಗಿದೆ. ವಿಶೇಷ ಅನುದಾನದಡಿ ವಿಶೇಷ ಚೇತನ ಮಕ್ಕಳಿಗೆ ಸಹಾಯ ಮಾಡಲು ಮುಂದಾಗಬೇಕಾಗಿದೆ. ಶೀಘ್ರ ಇದು ವಸತಿ ಶಾಲೆಯಾಗಿ ರೂಪುಗೊಂಡು ತಾಲೂಕಿನ ವಿಶೇಷ ಚೇತನ ಮಕ್ಕಳಿಗೆ ಇನ್ನಷ್ಟು ಸಹಾಯವಾಗಲಿ ಎನ್ನುವುದೇ ಎಲ್ಲರ ಹಾರೈಕೆ.
ಕಾರ್ಯಕ್ರಮ:
ಸ್ನೇಹ ವಿಶೇಷ ಶಾಲೆ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಜನಪದ ನೃತ್ಯ ಸಂಭ್ರಮ-2018 ಇಲ್ಲಿನ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ನ.10 ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಶಾಸಕ ಸುನಿಲ್ ನಾಯ್ಕ ಉದ್ಘಾಟಿಸುವರು. ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲೂಕು ಆಸ್ಪತ್ರೆಯ ಡಾ| ಸವಿತಾ ಕಾಮತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜೇಂದ್ರ ಬೇಕಲ್, ಉದ್ಯಮಿ ರಾಜೇಶ ನಾಯಕ, ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ ಭಟ್ಟ, ಶ್ರೀಕುಮಾರ ರೋಡ್ ಲೈನ್ಸ್ ನ ವೆಂಕಟರಮಣ ಹೆಗಡೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಪುರಸಭಾ ಅಧ್ಯಕ್ಷ ಮಟ್ಟಾ ಸಾಧಿಕ್, ಹೋಟೆಲ್ ಉಧ್ಯಮಿ ಶಂಕರ ನಾಯ್ಕ ಉಪಸ್ಥಿತರಿರುವರು ಎಂದು ಪ್ರಾಂಶುಪಾಲೆ ಮಾಲತಿ ಉದ್ಯಾವರ್ ತಿಳಿಸಿದ್ದಾರೆ.