ಬೆಂಗಳೂರು: ದಿನದಿಂದ ದಿನಕ್ಕೆ “ನಮ್ಮ ಮೆಟ್ರೋ’ ಕಾಮಗಾರಿ ಚುರುಕುಗೊಳ್ಳುತ್ತಿದ್ದು, ಗುರುವಾರ ಒಂದೇ ದಿನದಲ್ಲಿ ಎರಡು ಟನೆಲ್ ಬೋರಿಂಗ್ ಯಂತ್ರ (ಟಿಬಿಎಂ)ಗಳು ಸುರಂಗ ಕಾಮಗಾರಿ ಮುಗಿಸಿ ಹೊರಬಂದಿವೆ. ಈ ಮೂಲಕ ಒಟ್ಟಾರೆ ನಾಲ್ಕು ಯಂತ್ರಗಳು ಸೇರಿ ಸುಮಾರು ಮೂರು ಕಿ.ಮೀ. ಸುರಂಗ ಮಾರ್ಗ ಪೂರ್ಣ ಗೊಳಿಸಿದಂತಾಗಿದೆ.
ರಾಷ್ಟ್ರೀಯ ಮಿಲಿಟರಿ ಶಾಲೆ ನಿಲ್ದಾಣ (ವೆಲ್ಲಾರ)ದಿಂದ ಲ್ಯಾಂಗ್‌ಫೋರ್ಡ್ ನಿಲ್ದಾಣ ದವರೆಗೆ ಟಿಬಿಎಂ “ವರದಾ’ ತನ್ನ ಸುರಂಗ ಕಾರ್ಯ ಪೂರ್ಣಗೊಳಿಸಿ ಹೊರಬಂದಿದೆ. ಸುಮಾರು 594 ಮೀಟರ್ ಉದ್ದದ ಈ ಮಾರ್ಗದ ಸುರಂಗ ಪಯಣವನ್ನು ವರದಾ, 2021ರ ಮಾರ್ಚ್ 12ರಂದು ಆರಂಭಿಸಿತ್ತು. ಅಂದರೆ ಸುಮಾರು ಎಂಟು ತಿಂಗಳಲ್ಲಿ ನಿಗದಿತ ಗುರಿ ತಲುಪಿದೆ.
ಗುರಿ ತಲುಪಿದೆ; ಹೊರಬಂದಿಲ್ಲ!: ಅದೇ ರೀತಿ, “ರುದ್ರ’ ಟಿಬಿಎಂ ಕೂಡ ದಕ್ಷಿಣ ರ್‍ಯಾಂಪ್‌ನಿಂದ ಡೇರಿ ವೃತ್ತದ ನಿಲ್ದಾಣವನ್ನು ತಲುಪಿದೆ. 2021ರ ಏಪ್ರಿಲ್ 23ರಂದು ಸುರಂಗ ಕೊರೆಯುವ ಕಾರ್ಯ ಈ ಮಾರ್ಗದಲ್ಲಿ ಆರಂಭಗೊಂಡಿತ್ತು. 614 ಮೀಟರ್ ಉದ್ದವನ್ನು ಏಳು ತಿಂಗಳಲ್ಲಿ ರುದ್ರ ಪೂರೈಸಿದೆ. ಗುರಿ ತಲುಪಿದರೂ, ರುದ್ರ ಹೊರಬಂದಿಲ್ಲ! ಯಾಕೆಂದರೆ ಡೇರಿ ವೃತ್ತದಲ್ಲಿ ಇನ್ನೂ ನಿಲ್ದಾಣಕ್ಕಾಗಿ ಭೂಮಿಯನ್ನೂ ಅಗೆದಿಲ್ಲ.
ಇದನ್ನೂ ಓದಿ:- ಸನ್ನತಿಯಲ್ಲಿ ನಾಡಿದ್ದು ಧಮ್ಮ ಉತ್ಸವ
ತಾಂತ್ರಿಕ ಪರಿಭಾಷೆಯಲ್ಲಿ ಇದನ್ನು “ಬ್ಲೈಂಡ್ ಬ್ರೇಕ್ ಥ್ರ್ಯೂ” ಎಂದು ವಿಶ್ಲೇಷಿಸಲಾಗುತ್ತದೆ. ಸುರಂಗ ಮಾರ್ಗದ ನಿಲ್ದಾಣಕ್ಕಾಗಿ ಸುಮಾರು 200 ಮೀಟರ್ ಜಾಗದಷ್ಟು ಭೂಮಿಯನ್ನು 20 ಮೀ. ಆಳದಲ್ಲಿ ಕೊರೆಯಲಾಗುತ್ತದೆ. ಡೇರಿ ವೃತ್ತದಲ್ಲಿ ನಿಲ್ದಾಣ ನಿರ್ಮಾಣಕ್ಕೆ ಉದ್ದೇಶಿಸಿದ ಜಾಗದಲ್ಲಿ ಇನ್ಮುಂದೆ ಭೂಮಿ ಅಗೆಯುವ ಕೆಲಸ ಆರಂಭವಾಗಬೇಕಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಸುರಂಗದ ಮೂಲಕ ರುದ್ರ ಹೊರಬರಲಿದೆ. ಅಲ್ಲಿಂದ ಲಕ್ಕಸಂದ್ರತ್ತ ಪಯಣ ಬೆಳೆಸಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ. ಈಗಾಗಲೇ ಕಂಟೋನ್ಮೆಂಟ್‌ನಿಂದ ಶಿವಾಜಿನಗರ ನಡುವಿನ 864 ಮೀ. ಉದ್ದದ ಸುರಂಗ ಮಾರ್ಗ ವನ್ನು ಊರ್ಜಾ ಮತ್ತು ವಿಂದ್ಯಾ ಯಂತ್ರಗಳು ಪೂರ್ಣಗೊಳಿಸಿವೆ. ಅಂದರೆ, ಒಟ್ಟಾರೆ ಮೂರು ಸಾವಿರ ಮೀಟರ್ ಸುರಂಗ ಸಿದ್ಧಗೊಂಡಿದೆ.