Advertisement

“ವಾಂತಿ’ವೀರನ ಎಸ್ಕೇಪ್‌ ಐಡಿಯಾ

06:00 AM Jul 03, 2018 | Team Udayavani |

ಶಾಲಾ ದಿನಗಳಲ್ಲಿ ನನಗೆ ಮಹೇಶ ಎಂಬ ಗೆಳೆಯನಿದ್ದ. ಆತ ಸಕಲ ಕಲಾವಲ್ಲಭ. ಅದರಲ್ಲೂ, ನಟನೆಯಲ್ಲಿ ಅವನಿಗೆ ಬಹಳ ಆಸಕ್ತಿ ಇತ್ತು. ಯಾರನ್ನಾದರೂ ಒಂದು ಬಾರಿ ನೋಡಿದರೆ ಸಾಕು, ಅವರಂತೆಯೇ ಅನುಕರಿಸಿ ನಟಿಸುವ ಕಲೆ ಅವನಿಗೆ ಕರಗತವಾಗಿತ್ತು. ಇಂಥವನು ಶಾಲೆಯಲ್ಲಿ ಜೊತೆಗಾರನಾದ ಮೇಲೆ ಕೇಳಬೇಕೆ? ಚಕ್ಕರ್‌ ಹೊಡೆದು ಹೊರಗೆ ಹೋಗಲು ಅವನೇ ಹೇಳಿಕೊಟ್ಟ. ನಮ್ಮ ಶಾಲೆಯಿಂದ ಊರಿಗೆ ಬರುವ ದಾರಿಯಲ್ಲೇ ಹಲವಾರು ಹಣ್ಣಿನ ಮರಗಳಿದ್ದವು. ನಮಗೆ ಯಾವಾಗ ನೇರಳೆ, ಬಿಕ್ಕೆ ಹಣ್ಣನ್ನು ತಿನ್ನಬೇಕು ಎನಿಸುತ್ತಿತ್ತೋ, ಆಗೆಲ್ಲಾ ಮಹೇಶನಿಗೆ ವಾಂತಿಯಾಗುತ್ತಿತ್ತು. 

Advertisement

  ಆರೋಗ್ಯ ಸರಿ ಇದ್ದರೂ ಅದು ಹೇಗೆ ವಾಂತಿ ಮಾಡಿಕೊಳ್ಳುತ್ತಿದ್ದ ಅಂತಿದೀರ? ನಮಗೆ ಯಾವಾಗೆಲ್ಲಾ ಕ್ಲಾಸು ಬೋರಾಗುತ್ತಿತ್ತೋ, ಆಗೆಲ್ಲಾ ಅವನಿಗೆ ಸಂಜ್ಞೆ ಮಾಡುತ್ತಿದ್ದೆವು. ಆ ಪುಣ್ಯಾತ್ಮ ತಕ್ಷಣವೇ ವಾಂತಿ “ಬರಿಸಿ’ಕೊಳ್ಳುತ್ತಿದ್ದ! ನಾವು ಕೂಡಲೇ ಓಡಿಹೋಗಿ ಮುಖ್ಯ ಶಿಕ್ಷಕರಿಗೆ ವಿಷಯ ತಿಳಿಸುತ್ತಿದ್ದೆವು. ನಮ್ಮ ನಟನೆಯನ್ನು ತಿಳಿಯದ ಮುಖ್ಯ ಶಿಕ್ಷಕರು, ಮಹೇಶನನ್ನು ಕರೆದು “ಹುಷಾರಾಗಿ ಮನೆಗೆ ಹೋಗು. ಒಬ್ಬನೇ ಹೋಗುವುದು ಬೇಡ. ಜೊತೆಯಲ್ಲಿ ಯಾರನ್ನಾದರೂ ಕರೆದುಕೊಂಡು ಹೋಗು’ ಎನ್ನುತ್ತಿದ್ದರು. ಅವರು ಅಷ್ಟು ಹೇಳಿದ್ದೇ ತಡ, ನಾ ಮುಂದು ತಾ ಮುಂದು ಎಂದು ತರಗತಿಯಲ್ಲಿ ಎಲ್ಲರೂ ಮಹೇಶನ ಪುಸ್ತಕದ ಚೀಲವನ್ನು ಹಿಡಿಯಲು ಮುಂದಾಗುತ್ತಿದ್ದರು. ತರಗತಿಯ ಆವರಣ ದಾಟುವವರೆಗೆ ಅಳುತ್ತಿದ್ದ ಮಹೇಶ, ಆವರಣ ದಾಟಿದ ಕೂಡಲೇ ಮೊದಲಿನಂತಾಗಿಬಿಡುತ್ತಿದ್ದ. ಅದು ಹೇಗೆ ವಾಂತಿ ಮಾಡಿದೆ ಎಂದು ಕೇಳಿದರೆ, ಅದರ ಹಿಂದಿನ ಮರ್ಮವನ್ನು ಹೇಳುತ್ತಿದ್ದ. ಮಧ್ಯಾಹ್ನ ಊಟವಾದ ಮೇಲೆ ಹೊಟ್ಟೆ ಹಿಡಿಸಲಾರದಷ್ಟು ನೀರು ಕುಡಿದು ಕುಣಿಯುತ್ತಿದ್ದನಂತೆ. ನಂತರ ಬಲವಂತವಾಗಿ ಬಿಕ್ಕಳಿಸಿ, ವಾಂತಿ ಬರಿಸಿಕೊಳ್ಳುತ್ತಿದ್ದನಂತೆ. 

 ಗಿರೀಶ  ಜಿ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next