ವ್ಯಾನಿಟಿ ಬ್ಯಾಗ್ ಒಯ್ಯದೇ ಇರುವ ಹೆಂಗಸರು ಯಾರು ಇದ್ದಾರೆ? ಕಾಲೇಜು ಲಲನಾಂಗೆಯರಿಂದ ಹಿಡಿದು ಗೃಹಿಣಿ, ಉದ್ಯೊಗಸ್ಥ ಮಹಿಳೆ, ಹಿರಿಯ ಮಹಿಳೆಯರು ಹೀಗೆ ಎಲ್ಲರೂ ಸಾಮಾನ್ಯವಾಗಿ ಹೊರಗೆ ಹೋಗುವಾಗಲೆಲ್ಲ ವ್ಯಾನಿಟಿ ಬ್ಯಾಗ್ ಅವರ ಹೆಗಲೇರಿ ಕುಳಿತಿರುತ್ತದೆ. ವ್ಯಾನಿಟಿ ಬ್ಯಾಗ್ ಮಹಿಳೆಯರ ಸದಾ ಜೊತೆಗಿರುವ ಆಪ್ತ ಸಂಗಾತಿಗಳಲ್ಲಿ ಒಂದು. ಅಲ್ಲದೆ, ಹೆಣ್ಮಕ್ಕಳಿಗೆ ಮನೆಯಿಂದ ಹೊರಗೆ ಹೋಗುವಾಗ ಕೈಯಲ್ಲೊಂದು ಪರ್ಸ್ ಅಥವಾ ಬ್ಯಾಗ್ ಇಲ್ಲದಿದ್ದರೆ ಏನೋ ಕಳೆದುಕೊಂಡಿದ್ದೇನೆ ಅನ್ನುವ ಭಾವನೆ.
ಹೆಂಗಳೆಯರ ಜಂಬದ ಬ್ಯಾಗ್ ಬರೀ ಅಂದಕ್ಕಷ್ಟೇ ಅಲ್ಲ, ಹಲವಾರು ಅನುಕೂಲಕ್ಕೂ ಬಳಕೆಯಾಗುವ ಸಾಧನ. ಈ ಬ್ಯಾಗ್‌ನಲ್ಲಿ ಏನೇನೆಲ್ಲ ಇರುವುದಿಲ್ಲ ಹೇಳಿ? ದುಡ್ಡು , ಪರ್ಸ್‌ನಿಂದ ಹಿಡಿದು ಮೊಬೈಲ್, ಮನೆಯ ಕೀ, ಗಾಡಿಯ ಕೀ, ಕಪಾಟಿನ ಕೀಗಳು ಭದ್ರವಾಗಿ ಕುಳಿತಿರುತ್ತವೆ. ಇನ್ನು ಮಹಿಳೆಯರ ಬ್ಯಾಗ್ ಎಂದ ಮೇಲೆ ಕೇಳಬೇಕೆ, ಮೇಕಪ್ ವಸ್ತುಗಳೇ ಅದರಲ್ಲಿ ಹೆಚ್ಚಾಗಿ ಕಾಣಸಿಗುವುದು. ಮಹಿಳೆಯರ ಪುಟ್ಟ ವಿಶ್ವವೇ ಇದರ ಉದರದಲ್ಲಿರುತ್ತದೆ. ಲಿಪ್‌ಸ್ಟಿಕ್, ಪೌಡರ್, ಬಿಂದಿ, ಬಳೆ, ಬಾಚಣಿಗೆ, ಕನ್ನಡಿ, ಕಚೀìಪು, ಹೇರ್‌ಕ್ಲಿಪ್ಸ್ , ರಬ್ಬರ್‌ಬೈಂಡ್, ನೈಲ್‌ಪಾಲಿಶ್… ಹೀಗೆ ಇನ್ನೂ ಏನೇನೋ.
ಬ್ಯಾಗ್‌ನಲ್ಲೂ ಹಲವಾರು ವಿಧಗಳು ಇವೆ. ಬ್ಯಾಗ್‌ಗಳನ್ನು ತಯಾರಿಸುವ ವಸ್ತುಗಳಿಗನುಗುಣವಾಗಿ ಬೀಚ್ ಬ್ಯಾಗ್, ಜೂಟ್ನಿಂದ ಮಾಡಿದ ಬ್ಯಾಗ್, ನೈಲಾನ್ ಬ್ಯಾಗ್, ಪೌಚ್, ಕ್ಲಚ್, ಬ್ರೈಡಲ್, ಪಾಲಿಸ್ಟರ್ ಮೆಸೆಂಜರ್ ಬ್ಯಾಗ್, ಮೆಸೆಂಜರ್ ಬ್ಯಾಗ್‌ಗಳು ಲಭ್ಯವಿವೆ. ಎಲ್ಲಾ ಬಗೆಯ ಬಣ್ಣ, ಸ್ಟೈಲ್ ಹಾಗೂ ಗಾತ್ರದಲ್ಲಿ ಹಲವು ವಿಧದ ಬ್ಯಾಗುಗಳು ಫ್ಯಾಷನ್ ಲೋಕ ಮಾರುಕಟ್ಟೆಗೆ ಪರಿಚಯಿಸಿದೆ.
ಇಂದಿನ ಮಹಿಳೆಯರಲ್ಲಿ ದಿನನಿತ್ಯದ ಬಳಕೆಗೆ ಒಂದು, ಶಾಪಿಂಗ್‌ಗೆ ಒಂದು, ಸಮಾರಂಭಗಳಿಗೆ ತೆರಳುವಾಗ ಮತ್ತೂಂದು, ಅಲ್ಲದೆ ಟೂವ್ಹೀಲರ್‌ನಲ್ಲಿ ಪ್ರಯಾಣಿಸುವಾಗ ಹೊಂದಿಕೆಯಾಗುವಂತಹ ಬ್ಯಾಗ್ ಹೀಗೆ ವಿವಿಧ ವೆರೈಟಿಯ ಬ್ಯಾಗ್‌ಗಳ ಸಂಗ್ರಹವೇ ಇರುತ್ತದೆ. ಬ್ಯಾಗ್‌ಗಳು ಡ್ರೆಸ್‌ಗಳ ಮ್ಯಾಚಿಂಗ್ ಕಲರ್‌ನಲ್ಲಿದ್ದರೆ ಆಹಾ… ಅದರ ಲುಕ್ಕೇ ಬೇರೆ! ದಿನನಿತ್ಯದ ಬಳಕೆಗೆ ನೀರಿನಲ್ಲಿ ತೊಳೆಯುವ ಬ್ಯಾಗುಗಳನ್ನು ಖರೀದಿಸುವುದು ಒಳ್ಳೆಯದು. ಬೀಚ್ ಬ್ಯಾಗ್‌ನಂತಹವುಗಳು ನೀರಿನಲ್ಲಿ ತೊಳೆದರೂ ಬಣ್ಣ ಕಳೆದುಕೊಳ್ಳುದಿಲ್ಲ. ಅಲ್ಲದೆ ದಿನನಿತ್ಯದ ಬಳಕೆಗೆ ಕಪ್ಪು ಅಥವಾ ಕಂದು ಬಣ್ಣದ ಬ್ಯಾಗುಗಳ ಆಯ್ಕೆ ಉತ್ತಮ. ಇವು ಎಲ್ಲ ಬಣ್ಣದ ಡ್ರೆಸ್ಗೂ ಹೊಂದಿಕೊಳ್ಳುತ್ತವೆ! ಅಷ್ಟೇ ಅಲ್ಲದೆ, ಬ್ಯಾಗ್‌ನ ಗಾತ್ರ, ಬಣ್ಣ, ಆಕಾರವೂ ಸೌಂದರ್ಯ ಮತ್ತು ಫ್ಯಾಶನ್‌ಗೆ ಕಾಂಪ್ಲಿಮೆಂಟ್ ನೀಡುತ್ತದೆ.
– ಎಸ್. ಎನ್