ಕೊಲ್ಲೂರು: ಪರಿಸರ ಸೂಕ್ಷ್ಮ ಪ್ರದೇಶ ಅಧಿಸೂಚನೆಯ ಗುಮ್ಮ ಮತ್ತೆ ಈ ಭಾಗ ದಲ್ಲಿ ಆವರಿಸುವ ಆತಂಕದಲ್ಲಿರುವ ವಂಡ್ಸೆ ನಿವಾಸಿಗಳಿಗೆ ಬೈಂದೂರು ಹೊಸ ತಾಲೂಕಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ಆ ಬಗ್ಗೆ ಖುಷಿಗೊಂಡಿದ್ದರೂ ತಾ| ವ್ಯಾಪ್ತಿಯ ಸೀಮಾರೇಖೆಯ ವಿಚಾರದಲ್ಲಿ ಬಹಳಷ್ಟು ವಿರೋಧವು ಕಂಡುಬಂದಿದ್ದು ವಂಡ್ಸೆ ಹೋಬಳಿಯನ್ನು ಕುಂದಾಪುರ ತಾಲೂಕಿನಲ್ಲಿ ಸೇರ್ಪಡೆಗೊಳಿಸಬೇಕೆಂಬ ಬೇಡಿಕೆ ಆ ಭಾಗದ ಜನರಲ್ಲಿ ಆರಂಭಗೊಂಡಿದ್ದು ಅವೈಜ್ಞಾನಿಕ ಮಾದರಿಯಲ್ಲಿ ಸೀಮಾರೇಖೆಯ ಗುರುತಿಸುವಿಕೆ ಮಾಡಿದಲ್ಲಿ ಉಗ್ರ ಹೋರಾಟ ನಡೆಸ ಬೇಕಾದೀತು ಎಂಬ ಕೂಗು ಕೇಳಿ ಬರುತ್ತಿದೆ.
ವಂಡ್ಸೆ ಗ್ರಾ.ಪಂ. ವ್ಯಾಪ್ತಿ ಸಮೇತ ಚಿತ್ತೂರು, ಇಡೂರು, ಆಲೂರು, ಕೆರಾಡಿ, ಬೆಳ್ಳಾಲ ಸಮೇತ ನೂಜಾಡಿ ಕುಂದಬಾರಂದಾಡಿ ಮುಂತಾದ ಗ್ರಾಮಗಳನ್ನು ಕುಂದಾಪುರ ವ್ಯಾಪ್ತಿಗೆ ಸೇರಿಸಬೇಕೆಂಬ ಜನರ ಒತ್ತಡವು ಆರಂಭಗೊಂಡಿದೆ. 2003-2004, 2008-2013 ವರೆಗೆ ವಂಡ್ಸೆ ಹೋಬಳಿ ಪ್ರತ್ಯೇಕಿಸಬೇಕೆಂಬ ಅಲ್ಲಿನ ನಿವಾಸಿಗಳ ಒತ್ತಡವು ಶಾಸಕ ಗೋಪಾಲ ಪೂಜಾರಿಯವರಿಗೆ ನಿರ್ದಿಷ್ಟ ನಿಲುವನ್ನು ಹೊಂದಲು ಸಾಧ್ಯವಾಗದ ಪರಿಸ್ಥಿತಿಗೆ ತಂದೊಡ್ಡಿದೆ.
ಹೋಬಳಿಯ ಜನರ ಒಮ್ಮತದ ಅಭಿಪ್ರಾಯದಂತೆ ಸೇರ್ಪಡೆಯ ಕಾರ್ಯ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿರುವ ಗೋಪಾಲ ಪೂಜಾರಿ ಅವರು ಹೊಸದಾಗಿ ರೂಪುಗೊಳ್ಳಲಿರುವ ಬೈಂದೂರು ತಾಲೂಕಿನ ಗಡಿ ಪ್ರದೇಶದ ಜನರ ಅಭಿಪ್ರಾಯವನ್ನು ಕ್ರೋಡೀಕರಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿರುತ್ತಾರೆ. ಕರಾವಳಿಯ ಜಿಲ್ಲೆಗಳಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಹೊಸ 3 ತಾಲೂಕುಗಳು ಅದರಲ್ಲೂ ಮುಖ್ಯವಾಗಿ ಬೈಂದೂರು, ಬ್ರಹ್ಮಾವರ ಹಾಗೂ ಕಾಪು ಘೋಷಣೆಯಾಗಿದ್ದು ಅದರೊಡನೆ ಅಲ್ಲಿನ ಪ್ರತಿಯೊಂದು ಗ್ರಾಮದ ನಿವಾಸಿಗಳಿಗೆ ಎಟಕುವ ದೂರ ವ್ಯಾಪ್ತಿಗೆ ಅನುಕೂಲವಾಗುವ ಪ್ರದೇಶದಲ್ಲಿ ಕಂದಾಯ ಅರಣ್ಯ ಹಾಗೂ ಇನ್ನಿತರ ಇಲಾಖೆಗಳ ಕಚೇರಿಯನ್ನು ಆರಂಭಿಸದಿದ್ದಲ್ಲಿ ನೂರಾರು ಕಿ.ಮೀ. ದೂರ ಸುತ್ತಿ ಬಳಸಿ ವಾಹನಗಳನ್ನು ಅವಲಂಬಿಸಿ ಸಾಗುವುದು. ಆ ಪ್ರದೇಶದ ಜನರಿಗೆ ಕಿರಿಕಿರಿಯಾಗುವುದರಲ್ಲಿ ಎರಡು ಮಾತಿಲ್ಲ. ಘೋಷಣೆಯಾಗಿರುವ ಹೊಸ ತಾಲೂಕುಗಳು ಅನುಷ್ಠಾನವಾಗುತ್ತದೋ ಅಥವಾ ಮೊದಲಿನಂತೆ ಘೋಷಣೆಗೆ ಮಾತ್ರ ಸೀಮಿತವಾಗಿ ಉಳಿಯುವುದೋ ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿಬಂದಿದ್ದು ಇಲ್ಲಿನ ಮೂಲಭೂತ ವ್ಯವಸ್ಥೆಗಳನ್ನು ಒದಗಿಸುವಲ್ಲಿ ಸರಕಾರ ಯಾವ ಮಟ್ಟದಲ್ಲಿ ಸ್ಪಂದಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಈಗಾಗಲೇ ಕಾರ್ಯಗತವಾಗಿರುವ ಅನೇಕ ನೂತನ ಗ್ರಾ.ಪಂ. ಗಳಿಗೆ ಸ್ವಂತ ಕಟ್ಟಡದ ಕೊರತೆಯಿಂದ ನಲುಗುತ್ತಿರುವ ಈ ದಿಸೆಯಲ್ಲಿ ಇಡೀ ವಿಧಾನಸಭಾ ಕ್ಷೇತ್ರದ ಅದೀನದಲ್ಲಿ ಬರುವ ಹೊಸ ತಾ|ಗಳ ಆಡಳಿತ ವ್ಯವಸ್ಥೆಯಲ್ಲಿನ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವೇ ಅನ್ನುವುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ.
ವಂಡ್ಸೆ ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲೇ ಉಳಿಸಿದಲ್ಲಿ ಆ ಭಾಗದ ಜನರಿಗೆ ಹೆಚ್ಚಿನ ಸೌಕರ್ಯ ಕಲ್ಪಿಸಿದಂತಾಗುವುದು.
– ಡಾ| ಅತುಲ್ ಕುಮಾರ್ ಶೆಟ್ಟಿ
ಹೊಸ ತಾಲೂಕುಗಳ ರಚನೆಯಿಂದಾಗಿ ಅಲ್ಲಿನ ನಿವಾಸಿಗಳಿಗೆ ಹೆಚ್ಚಿನ ಅನುಕೂಲ ಲಭಿಸುವುದಾದರೂ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಗಡಿಭಾಗ ದಲ್ಲಿ ವಾಸವಾಗಿರುವವರಿಗೆ ಅಲ್ಲಿಗೆ ಸಮೀಪವಿರುವ ತಾಲೂಕನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುವುದರೊಡನೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಜಿಲ್ಲಾಡಳಿತವು ಹೆಚ್ಚಿನ ಆದ್ಯತೆ ನೀಡಬೇಕು.
– ಉದಯ ಕುಮಾರ್ ಶೆಟ್ಟಿ, ಅಧ್ಯಕ್ಷರು, ವಂಡ್ಸೆ ಗ್ರಾ.ಪಂ.
ಹೊಸ ತಾಲೂಕು ರಚನೆಯಾಗುತ್ತಿರುವುದು ಸ್ವಾಗತಾರ್ಹವಾದರೂ ಗಡಿಭಾಗದ ನಿವಾಸಿಗಳಿಗೆ ಅವರ ಅನುಕೂಲತೆಗೆ ತಕ್ಕಂತೆ ತಾಲೂಕು ನಿರ್ಧರಿಸುವ ಅವಕಾಶ ನೀಡಬೇಕು. ಎಲ್ಲ ವರ್ಗದ ಜನರ ಅಭಿಪ್ರಾಯ ಕ್ರೋಡೀಕರಿಸಿ ಸೌಕರ್ಯ ಒದಗಿಸಬೇಕು.
– ಬಿ.ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಮುಖಂಡರು
– ಡಾ| ಸುಧಾಕರ ನಂಬಿಯಾರ್