Advertisement

Vandse ಭಾರೀ ಗಾಳಿ-ಮಳೆ: ಬೃಹತ್‌ ಮರದಡಿ ಸಿಲುಕಿದ ಮಹಿಳೆ, ಹಸು ಸಾವು

12:57 AM Aug 26, 2024 | Team Udayavani |

ವಂಡ್ಸೆ: ವಂಡ್ಸೆ ಹೋಬಳಿಯ ನೆಂಪು ಬಳಿಯ ಕೆಂಚನೂರಿನಲ್ಲಿ ಭಾರೀ ಗಾಳಿ, ಮಳೆಯಾಗಿದ್ದು, ಮರವೊಂದು ಬಿದ್ದು ಮಹಿಳೆ ಮತ್ತು ದನ ಮೃತಪಟ್ಟಿರುವ ಘಟನೆ ಆ. 25ರಂದು ಸಂಜೆ 6 ಗಂಟೆ ಸುಮಾರಿಗೆ ಸಂಭವಿಸಿದೆ.

Advertisement

ಮಹಿಳೆಯು ಮನೆ ಸಮೀಪ ಮೇಯಲು ಕಟ್ಟಿರುವ ದನವನ್ನು ತರಲು ಬಂದಿದ್ದಾಗ ಮರ ಬುಡಸಹಿತ ಆಕೆಯ ಮೇಲೆ ಬಿದ್ದಿದೆ.
ಕೆಂಚನೂರು ಗ್ರಾಮದ ಮಲ್ಲಾರಿ ನಿವಾಸಿ ಅಣ್ಣಪ್ಪಯ್ಯ ಆಚಾರ್ಯ ಅವರ ಪತ್ನಿ ಸುಜಾತಾ ಆಚಾರ್ಯ(44) ಮೃತಪಟ್ಟವರು.

ತಹಶೀಲ್ದಾರ್‌ ಭೇಟಿ
ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ.ಸದಸ್ಯರಾದ ರಾಜೀವ ಶೆಟ್ಟಿ ಹಾಗೂ ರವಿ ಗಾಣಿಗ, ಗ್ರಾಮಸ್ಥರು, ವಿವಿಧ ಸಂಘಟನೆ ಯುವಕರು ಜೆಸಿಬಿ ಬಳಸಿ ಮರ ತೆರವುಗೊಳಿಸಿದ್ದರು. ಕುಂದಾಪುರ ತಹಶೀಲ್ದಾರ್‌ ಶೋಭಾಲಕ್ಷ್ಮೀ, ಆರ್‌.ಐ. ರಾಘವೇಂದ್ರ, ಪೊಲೀಸ್‌ ಅಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ್‌ ಶೆಟ್ಟಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬಡಕುಟುಂಬ
ಸುಜಾತಾರದ್ದು ಕಡು ಬಡ ಕುಟುಂಬ. ಅಣ್ಣಪ್ಪಯ್ಯ ಆಚಾರ್ಯ ಅಂಗಡಿ ಮಾಡಿಕೊಂಡಿದ್ದು, ನಷ್ಟ ಅನುಭವಿಸಿದ ಕಾರಣ ನಿತ್ಯ ಜೀವನಕ್ಕೆ ದಿನಕೂಲಿ ಕೆಲಸವನ್ನು ಅವಲಂಬಿಸಿದ್ದರು. ಓರ್ವ ಪುತ್ರ ಉದ್ಯೋಗ ವಿಲ್ಲದೆ ಮನೆಯಲ್ಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಇತ್ತೀಚೆಗೆ ಖಾಸಗಿ ಶಾಲೆ ಶಿಕ್ಷಕಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಸುಗಳ ಹಾಲನ್ನು ಮಾರಿ ಅಷ್ಟಿಷ್ಟು ಹಣ ಸಂಪಾದಿಸುತ್ತಿದ್ದರು. ಅಣ್ಣಪ್ಪಯ್ಯ ಮಲ್ಲಾರಿಯಲ್ಲಿ ಜಾಗ ಖರೀದಿಸಿ ಮನೆ ಕಟ್ಟಿ ಬದುಕು ನಡೆಸುವ ಕನಸು ಕಂಡಿದ್ದರು. ದುಡಿದ ಹಣವನ್ನು ಮನೆ ಕಟ್ಟಲು ಬಳಸುತ್ತಿದ್ದರು. ಈ ದುರ್ಘ‌ಟನೆಯಿಂದಾಗಿ ಈಗ ಕುಟುಂಬ ಕಂಗಾಲಾಗಿದೆ.

ಉಪ್ಪಿನಂಗಡಿಯಲ್ಲೂ ಗಾಳಿ, ಮಳೆ
ಉಪ್ಪಿನಂಗಡಿ: ಗೊಳಿತೊಟ್ಟು ಭಾಗದ ಕೊಡಿಂಗೇರಿ ಹಾಗೂ ಕೊಕ್ಕಡ ಗ್ರಾಮದ ಹಾರ, ಮಡೆಜೋಡಿ, ಪಿಜಿನಡ್ಕ ಮೊದಲಾದ ಕಡೆಗಳಲ್ಲಿ ರವಿವಾರ ಬೆಳಗ್ಗೆ ಬೀಸಿದ ಸುಂಟರಗಾಳಿಗೆ ಹಲವು ಮನೆಗಳ ಛಾವಣಿ 8 ಹಾರಿದ್ದು, ಕೃಷಿಕರ ಬೆಳೆಗಳು ಹಾನಿಗೀಡಾಗಿವೆ.

Advertisement

ಮಡೆಜೋಡಿ ಸಮೀಪದ ಲಿಯೋ ಡಿ’ಸೋಜಾ, ಜಬ್ಟಾರ್‌ ಹಾಗೂ ಅವರ ಪಕ್ಕದ ಕೃಷಿ ತೋಟಗಳಲ್ಲಿ ನೂರಕ್ಕೂ ಅಧಿಕ ಅಡಿಕೆ ಮರಗಳು, ಕೊಕ್ಕಡ ಭಾಗದ ಕೊಡಿಂಗೇರಿಯ ಅಣ್ಣುಗೌಡ, ಶಶಿ, ಕೊಕ್ಕಡ ಗ್ರಾ.ಪಂ. ಸದಸ್ಯೆ ಲತಾ, ಹಾರ ಬಾಲಪ್ಪ ಗೌಡ ಅವರಿಗೆ ಸೇರಿದ ಅಡಿಕೆ ಮರಗಳು, ಪಿಜಿನಡ್ಕ ಕಾಲನಿ ನಿವಾಸಿ ಬಾಬಿ ಹಾಗೂ ಅವರ ಸಮೀಪದ ಕೆಲವು ಮನೆಗಳ ಮೇಲ್ಛಾವಣಿ ಬಿರುಗಾಳಿಗೆ ಹಾರಿ ಹಾನಿಗೊಂಡು ಅಪಾರ ನಷ್ಟ ಸಂಭವಿಸಿದೆ. ಕೊಕ್ಕಡ ಕಂದಾಯ ಇಲಾಖೆ ಹಾಗೂ ಕೊಕ್ಕಡ ಪಂಚಾಯತ್‌ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶನಿವಾರದಿಂದ ಪರಿಸರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ರವಿವಾರ ಬೆಳಗ್ಗೆ ಪದೇಪದೆ ಭಾರೀ ಮಳೆ ಸುರಿದಿದೆ. ಈ ಕಾರಣಕ್ಕೆ ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next