ಮಲ್ಪೆ: ಕಳೆದ ವರ್ಷ ವಿವಿಧ ಕಾಲೇಜಿನ 5320 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಂದ ಸಂಪೂರ್ಣ ವಂದೇ ಮಾತರಂ ಹಾಡಿಸಿ ವಿಶ್ವದಾಖಲೆಗೆ ಪಾತ್ರವಾಗಿರುವ ಉಡುಪಿ ಸಂವೇದನಾ ಫೌಂಡೇಶನ್ ಶನಿವಾರ ಮಲ್ಪೆಯ ಕಡಲ ಕಿನಾರೆಯಲ್ಲಿ ವಂದೇ ಮಾತರಂ ಮಾ ತುಜೇ ಪ್ರಣಾಮ್ ಎಂಬ ಮತ್ತೂಂದು ವಿಶ್ವದಾಖಲೆಯ ಕಾರ್ಯಕ್ರಮಕ್ಕೆ ಮುಂದಾಗಿದೆ. ಸ್ವಾಮಿ ವಿವೇಕಾನಂದರ 156ನೇ ಜನ್ಮವರ್ಷದ ಪ್ರಯುಕ್ತ ನಡೆಯುವ ಈ ಅಪೂರ್ವ ಕಾರ್ಯಕ್ರಮಕ್ಕೆ ಈಗಾಗಲೇ ಎಲ್ಲ ಪೂರ್ವ ತಯಾರಿಗಳು ನಡೆದಿದ್ದು ವೇದಿಕೆ ಸಜ್ಜುಗೊಂಡಿದೆ.
16 ರಾಜ್ಯದ 183 ಸ್ಪರ್ಧಿಗಳು
ವಂದೇ ಮಾತರಂನಲ್ಲಿ ವಿಭಿನ್ನ ರಾಗದಲ್ಲಿ ಹಾಡಿದ್ದ 16 ರಾಜ್ಯಗಳಿಂದ ಸುಮಾರು 183 ಸ್ಪರ್ಧಿಗಳು ಭಾಗ ವಹಿಸಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಫೈನಲ್ ಹಂತಕ್ಕೆರಿದ 12 ಕಲಾವಿದರು ತಮ್ಮದೇ ಭಾಷೆ ಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. ಕರ್ನಾಟಕ ಸೇರಿದಂತೆ ಮಣಿಪುರ, ನಾಗಾಲ್ಯಾಂಡ್, ಕೇರಳ, ರಾಜಸ್ಥಾನ್ ಕಲಾವಿದರಿಂದ ರಾಷ್ಟ್ರ ಭಕ್ತಿಯ ಸುಧೆ ಹರಿಯಲಿದೆ. ಉತ್ಕೃಷ್ಟವಾಗಿ ಮೂಡಿ ಬಂದಿರುವ ವಿಭಿನ್ನ ರಾಗ ಸಂಯೋಜನೆಯ ವಂದೇ ಮಾತರಂ ಅಲ್ಬಂಗಳ ಪ್ರದರ್ಶನ ನಡೆಯಲಿದೆ.
ಲಾರ್ಜೆಸ್ಟ್ ಕಲೆಕ್ಷನ್ ಆಫ್ ವಿಡಿಯೋ ಆಫ್ ನ್ಯಾಶನಲ್ ಸಾಂಗ್ ಸಂಗ್ ಬೈವೇರಿಯಸ್ ಸಿಂಗರ್, ಎಂಬ ಟೈಟಲ್ ನಲ್ಲಿ ವಿಶ್ವ ದಾಖಲೆ ನಡೆಯಲಿದೆ. ಉತ್ಕೃಷ್ಟ ಮೊದಲ ಪ್ರಸ್ತುತಿಗೆ ಪ್ರಶಸ್ತಿ ಫಲಕ ಮತ್ತು 2 ಲಕ್ಷ ರೂ. ನಗದು, ದ್ವಿತೀಯ ಉತ್ಕೃಷ್ಟ ಪ್ರಸ್ತುತಿಗೆ ಪ್ರಶಸ್ತಿ ಫಲಕ ಮತ್ತು 1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಉತ್ತಮ ಸಿನಿಮಾಟೋಗ್ರಫಿ, ಉತ್ತಮ ಟ್ಯೂನ್, ಅತೀ ಹೆಚ್ಚು ಯೂಟ್ಯೂಬ್ ವೀಕ್ಷಣೆ ಪ್ರಶಸ್ತಿ ನೀಡಲಾಗುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಸಾಹಿತಿ, ತೀರ್ಪುಗಾರ ಡಾ| ವಿ. ನಾಗೇಂದ್ರ ಪ್ರಸಾದ್, ಉದ್ಯಮಿ ಡಾ| ಜಿ. ಶಂಕರ್, ಶಾಸಕ ಕೆ. ರಘುಪತಿ ಭಟ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ನಾನಾ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
50 ಸಾವಿರ ಮಂದಿ ನಿರೀಕ್ಷೆ
ವಂದೇ ಮಾತರಂನಲ್ಲಿ
ವಿಭಿನ್ನ ರಾಗದಲ್ಲಿ ಹಾಡಿದ್ದ 16 ರಾಜ್ಯಗಳಿಂದ ಸುಮಾರು 183 ವಿಡಿಯೋಗಳು ಸಂಘಟನೆಯ ಕೈ ಸೇರಿವೆ. ಅವುಗಳಲ್ಲಿ ಉತ್ತಮವಾದ 12ನ್ನು ಫೈನಲ್ ಹಂತಕ್ಕೆ ಆರಿಸಿ ಅವುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಉತ್ಕೃಷ್ಟ ಪ್ರಸ್ತುತಿಗೆ ಬಹುಮಾನವನ್ನು ನೀಡಲಾಗುತ್ತದೆ. ರಾಷ್ಟ್ರೀಯ ನಾಯಕರು, ಸಮಾಜಮುಖೀ ಚಿಂತನೆಯುಳ್ಳ ಬಾಲಿವುಡ್ ನಟರು, ಸಂಗೀತ ನಿರ್ದೇಶಕರು ಸೇರಿದಂತೆ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಮಿಕ್ಕಿ ಮಂದಿ ಭಾಗವಹಿಸಲಿದ್ದಾರೆ.
– ಪ್ರಕಾಶ್ ಮಲ್ಪೆ,ಸಂಸ್ಥಾಪಕ, ಸಂವೇದನಾ ಫೌಂಡೇಶನ್