Advertisement
ಬಹುನಿರೀಕ್ಷಿತ ಉಪನಗರ ರೈಲು ಯೋಜನೆ ಅಡಿ ವಂದೇ ಭಾರತ್ ಮೆಟ್ರೋ ಬೋಗಿಗಳನ್ನು ಪರಿಚಯಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆ-ರೈಡ್) ಮುಂದಾಗಿದೆ. ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಪ್ರತಿ ಬೋಗಿಗೆ 9.17 ಕೋಟಿ ರೂ. ವೆಚ್ಚ ಆಗಲಿದೆ ಎಂದು ದರ ಕೂಡ ಕೋಟ್ ಮಾಡಿದೆ. ಇದು ಸಾಧ್ಯವಾದರೆ, ಉದ್ದೇಶಿತ ಉಪನಗರ ಜಾಲದಲ್ಲೂ “ವಂದೇ ಭಾರತ್ ಮೆಟ್ರೋ ರೈಲು’ಗಳು ಕಾರ್ಯಾಚರಣೆ ಮಾಡಲಿವೆ. ಇದರೊಂದಿಗೆ ಹೆಚ್ಚು-ಕಡಿಮೆ ಮೆಟ್ರೋಗಿಂತ ಹೈಟೆಕ್ ಸಮೂಹ ಸಾರಿಗೆ ಸೇವೆ ಬೆಂಗಳೂರಿಗರಿಗೆ ಸಿಗಲಿದೆ.
Related Articles
Advertisement
ಈ ನಿಟ್ಟಿನಲ್ಲಿ ಒಂದೆಡೆ ರೈಲ್ವೆ ಸಚಿವಾಲಯದಡಿ ಬರುವ ಐಸಿಎಫ್ಗೆ ಪತ್ರ ಬರೆಯಲಾಗಿದೆ. ಇನ್ನೂ ಮುಂದುವರಿದು ಬೋಗಿಗಳ ಪೂರೈಕೆಯ ಕಾರ್ಯಸಾಧ್ಯತೆಗೆ ಸಂಬಂಧಿಸಿದಂತೆ ಐಸಿಎಫ್ಗೆ ಕೆ-ರೈಡ್ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಲ್ಲದೆ, ಕೆ-ರೈಡ್ ಅಧಿಕಾರಿಗಳು ಕಪುರ್ತಲಾದಲ್ಲಿರುವ ರೈಲ್ವೆ ಕೋಚ್ ಫ್ಯಾಕ್ಟರಿ (ಆರ್‌ಸಿಎಫ್)ಗೆ ಕೂಡ ಭೇಟಿ ನೀಡಿ, ವಂದೇ ಭಾರತ ಮೆಟ್ರೋ ಬೋಗಿಗಳು ಉಪನಗರ ರೈಲು ಯೋಜನೆಗೆ ಸೂಕ್ತವಾಗಿರಲಿವೆಯೋ ಇಲ್ಲವೋ ಎಂಬುದನ್ನೂ ಖಾತ್ರಿಪಡಿಸಿಕೊಂಡಿದ್ದು, ಪೂರಕ ಸ್ಪಂದನೆ ಮತ್ತು ಅಭಿಪ್ರಾಯಗಳು ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಪುಟದಲ್ಲಿ ನಿರ್ಧಾರ ಆಗ್ಬೇಕು: ಈ ಎಲ್ಲ ಪ್ರಯತ್ನ ಗಳ ನಂತರ ಉಪನಗರ ರೈಲು ಯೋಜನೆಯಲ್ಲಿ ವಂದೇ ಭಾರತ್ ಮೆಟ್ರೋ ಬೋಗಿಗಳನ್ನು ಪರಿಚಯಿಸುವ ಆಲೋಚನೆಗೆ ಮುಂದಾಗಿದೆ. ಈ ಸಂಬಂಧ ರೈಲ್ವೆ ಸಚಿವಾಲಯಕ್ಕೆ ಪತ್ರ ಕೂಡ ಬರೆಯಲಾಗಿದೆ ಎನ್ನಲಾಗಿದೆ. ಅಷ್ಟರಲ್ಲಿ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಯಲ್ಲಿರುವುದರಿಂದ ಹೊಸ ಸರ್ಕಾರ ಬಂದ ಮೇಲೆ ಈ ನಿಟ್ಟಿನಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಒಂದು ವೇಳೆ ಉದ್ದೇಶಿತ ಪ್ರಸ್ತಾವನೆಗೆ ಪೂರಕ ಸ್ಪಂದನೆ ದೊರೆತರೆ, ಈಗಾಗಲೇ ಕೇಂದ್ರ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರವನ್ನು ಹಿಂಪಡೆದು ಹೊಸದಾಗಿ ಪ್ರಸ್ತಾವನೆ ಮುಂದಿಟ್ಟು ಅನುಮೋದನೆ ಪಡೆಯಬೇಕಾಗುತ್ತದೆ.
ಪ್ರಮುಖಾಂಶಗಳು:
ನಾಲ್ಕು ಕಾರಿಡಾರ್ ಒಳಗೊಂಡ ಉಪನಗರ ರೈಲು ಯೋಜನೆಗೆ 306 ಬೋಗಿಗಳು ಅಗತ್ಯ
9.17 ಕೋಟಿ ರೂ. ಪ್ರತಿ ಬೋಗಿ ತಯಾರಿಕೆಗೆ ಐಸಿಎಫ್ ಕೋಟ್ ಮಾಡಿರುವ ಅಂದಾಜು ಮೊತ್ತ
3,311 ಕೋಟಿ ರೂ. ಒಟ್ಟಾರೆ
306 ಬೋಗಿಗಳ ತಯಾರಿಕೆಗೆ ತಗಲುವ ವೆಚ್ಚ
ಪ್ರಸ್ತುತ ಬೋಗಿಗಳನ್ನು ಪಿಪಿಪಿ ಅಡಿ ಪೂರೈಸಲು ಉದ್ದೇಶಿಸಲಾಗಿದೆ
ಐಸಿಎಫ್ನಿಂದ ವಂದೇ ಭಾರತ್ ಮೆಟ್ರೋ ಬೋಗಿಗಳ ಪೂರೈಸಬ ಹುದು ಎಂಬ ಅಭಿಪ್ರಾಯ ವ್ಯಕ್ತ
264 ಬೋಗಿಗಳ ಪೂರೈಕೆಗೆ ಆರ್‌ಎಫ್ಪಿಯಲ್ಲಿ ಬಿಇಎಂಎಲ್, ಬಿಇಎಲ್, ಸಿಎಎಫ್ ಆಸಕ್ತಿ
– ವಿಜಯಕುಮಾರ ಚಂದರಗಿ