Advertisement
ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಅಭಿವೃದ್ಧಿಪಡಿಸಲಾದ ದೇಶದ ಮೊದಲ ಸೆಮಿ ಹೈ ಸ್ಪೀಡ್ ರೈಲಿನ ಮೇಲೆ ದುಷ್ಕರ್ಮಿಗಳು 3ನೇ ಬಾರಿ ಕಲ್ಲು ಎಸೆದಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಪರೀಕ್ಷಾರ್ಥ ಓಡಾಟ ಆರಂಭಿಸಿದ್ದ ವೇಳೆಯಲ್ಲೂ ಈ ರೀತಿ ರೈಲಿಗೆ ಕಲ್ಲೆಸೆದು ಹಾನಿ ಮಾಡಲಾಗಿತ್ತು. ಬುಧವಾರ ಮತ್ತೆ ಇಂಥದ್ದೇ ಘಟನೆ ನಡೆದಿದ್ದು ದುಷ್ಕರ್ಮಿಗಳು ರೈಲಿನ ಕಿಟಕಿಗಳನ್ನು ಪುಡಿ ಮಾಡಿದ್ದಾರೆ. ಇಲ್ಲವೇ, ತಿಳಿವಳಿಕೆ ಇಲ್ಲದ ಹುಡುಗರು ಮಾಡಿರುವ ಕೃತ್ಯವೂ ಇದಾಗಿರಬಹುದು. ತನಿಖೆಯಿಂದ ಸತ್ಯ ಹೊರಬರುತ್ತದೆ.
Related Articles
Advertisement
ಇತ್ತೀಚಿನ ದಿನಗಳಲ್ಲಂತೂ, ರಾಜಕೀಯ ಕಾರಣಗಳಿಗಾಗಿ ದೇಶದ ಸಾಧನೆಯನ್ನು ಅಲ್ಲಗಳೆಯುವ ಅಥವಾ ನಿರಾಕರಿಸುವ ಅತಿರೇಕದ ವರ್ತನೆಗಳು ಹೆಚ್ಚಾಗುತ್ತಿವೆ. ಮೋದಿ ಸರ್ಕಾರದ ಅವಧಿಯಲ್ಲಿ ನಡೆಯಿತು ಎನ್ನುವ ಒಂದೇ ಕಾರಣಕ್ಕಾಗಿ “ಸರ್ಜಿಕಲ್ ಸ್ಟ್ರೈಕ್’ ನಡೆದೇ ಇಲ್ಲ ಎಂಬ ಧಾಟಿಯಲ್ಲಿ ಮಾತನಾಡಿ ಸೇನೆಗೆ ಅವಮಾನ ಮಾಡಲಾಯಿತು. “ದಾಳಿಗೆ ಪುರಾವೆ ಕೊಡಿ’ ಎಂದು ಥೇಟ್ ಪಾಕಿಸ್ತಾನ ನಮ್ಮನ್ನು ಪ್ರತಿ ಬಾರಿಯೂ ಕೇಳುವ ರೀತಿಯಲ್ಲೇ ಪ್ರತಿಪಕ್ಷಗಳ ಕೆಲ ನಾಯಕರು ಕೇಳಿದರು.
ಯಾವುದೇ ಒಂದು ತಂತ್ರಜ್ಞಾನಿಕ ಯೋಜನೆಯಿರಲಿ, ಅದರಲ್ಲಿ ಟ್ರಯಲ್ ಅಡ್ ಎರರ್ ಇದ್ದದ್ದೇ. ಕೆಲವೊಮ್ಮೆ ಎಷ್ಟೇ ತಯ್ನಾರಿ ಮಾಡಿಕೊಂಡರೂ ಅನುಷ್ಠಾನದ ಸಮಯದಲ್ಲಿ ಅನಿರೀಕ್ಷಿತ ಸವಾಲುಗಳು-ಸಮಸ್ಯೆಗಳು ಎದುರಾಗಿಬಿಡುತ್ತವೆ. ಆ ಸಮಸ್ಯೆಗಳನ್ನು ಸೋಲು ಎಂದು ಭಾವಿಸಿದರೆ ಮುನ್ನುಗ್ಗುವುದಾದರೂ ಹೇಗೆ? ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆ ಕೂಡ ಅನೇಕ ಬಾರಿ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದೆ. ಆ ದೋಷಗಳನ್ನೆಲ್ಲ ಸರಿಪಡಿಸಿಕೊಂಡು-ಅದರಿಂದ ಪಾಠ ಕಲಿತೇ ಈ ಮಟ್ಟಕ್ಕೆ ಬೆಳೆದು ನಿಂತಿದೆಯಲ್ಲವೇ? ಇಂದು ಈ ಸಂಸ್ಥೆ ಅದ್ಭುತ ತಾಂತ್ರಿಕ ನೈಪುಣ್ಯ ಸಾಧಿಸಿ ಜಗತ್ತಿನ ಬಾಹ್ಯಾಕಾಶ ಲೋಕದಲ್ಲಿ ಹೆಸರು ಪಡೆಯುವುದರ ಹಿಂದೆ ಅದು ಎದುರಿಸಿದ ಸವಾಲು-ಸಮಸ್ಯೆಗಳೇನು ಕಡಿಮೆಯೇ? ಹಾಗೆಂದು, ಆಗೆಲ್ಲ ಅದು ಎದುರಿಸಿದ ಸಮಸ್ಯೆಗಳನ್ನು ರಾಜಕೀಯಗೊಳಿಸಿದ್ದರೆ ವಿಜ್ಞಾನಿಗಳು-ಇಂಜಿನಿಯರ್‌ಗಳ ಶ್ರಮಕ್ಕೆ ಅವಮಾನ ಮಾಡಿದಂತೆ ಆಗುತ್ತಿರಲಿಲ್ಲವೇ? ಪ್ರಗತಿಗೆ ಹಿನ್ನಡೆಯಾಗುತ್ತಿರಲಿಲ್ಲವೇ?
ಹೀಗಾಗಿ, ಇನ್ನುಮುಂದಾದರೂ ಈ ರೀತಿಯ ಯೋಜನೆಗಳ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಎಲ್ಲರೂ ಬಿಡಬೇಕಿದೆ. ಈ ರೈಲನ್ನು ಚುನಾವಣೆಯ “ವಾಹನ’ ಮಾಡಿಕೊಳ್ಳುವ ಬದಲು ಅದನ್ನು “ಭಾರತದ ಹೆಮ್ಮೆ’ ಎಂದು ನೋಡುವ ದೃಷ್ಟಿ ಬೆಳೆಸಿಕೊಂಡಷ್ಟೂ ದೇಶದ ಪ್ರಗತಿಗೆ ಹಿತ.