Advertisement

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ವಾಣಿಜ್ಯ ಸಂಚಾರ ಆರಂಭ

01:00 AM Feb 18, 2019 | Team Udayavani |

ಹೊಸದಿಲ್ಲಿ: ಭಾರತದ ಪ್ರಥಮ ಸೆಮಿ ಹೈಸ್ಪೀಡ್‌ ರೈಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಭಾನುವಾರ ಮೊದಲ ವಾಣಿಜ್ಯ ಸಂಚಾರವನ್ನು ಆರಂಭಿಸಿತು. ಶುಕ್ರವಾರವಷ್ಟೇ ಈ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಮುಂದಿನ ಎರಡು ವಾರಗಳ ಟಿಕೆಟ್‌ ಈಗಾಗಲೇ ಮಾರಾಟವಾಗಿದೆ. ಇಂದೇ ನಿಮ್ಮ ಟಿಕೆಟ್‌ ಕಾಯ್ದಿರಿಸಿ ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ಹೇಳಿದ್ದಾರೆ.

Advertisement

ಶನಿವಾರ ರೈಲು ತಾಂತ್ರಿಕ ಸಮಸ್ಯೆಯನ್ನು ಎದುರಿಸಿದ್ದರಿಂದ, ವಾರಾಣಸಿಯಿಂದ ದಿಲ್ಲಿಗೆ ಸಂಚರಿಸುವಾಗ ಕೆಲವು ಕಾಲ ಸಂಚಾರ ಸ್ಥಗಿತಗೊಳಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೆ ಇಲಾಖೆ, ರೈಲಿನ ಹೊರ ಭಾಗದಲ್ಲಿ ಯಾವುದೋ ವಸ್ತು ಗುದ್ದಿದ್ದರಿಂದಾಗಿ ಕೊನೆಯ 4 ಕೋಚ್‌ಗಳೊಂದಿಗೆ ಸಂವಹನ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಸುರಕ್ಷತೆಗೆ ಬ್ರೇಕ್‌ ಹಾಕಲಾಗಿತ್ತು. ದೋಷವಿದೆಯೇ ಎಂದು ಇಡೀ ರೈಲನ್ನು ಪರಿಶೀಲಿಸಿ ನಂತರ ದಿಲ್ಲಿಗೆ ರೈಲು ತೆರಳಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಟ್ರೇನ್‌ 18 ಎಂದು ಆರಂಭದಲ್ಲಿ ಕರೆಯಲಾಗಿದ್ದ ಇದು, ವಾರಾಣಸಿಯಿಂದ ದಿಲ್ಲಿಗೆ ಸಂಚರಿಸಲಿದೆ. ಶನಿವಾರ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಗೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದು, ಮೇಕ್‌ ಇನ್‌ ಇಂಡಿಯಾ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ಇದು ವಿಫ‌ಲ ಯೋಜನೆ ಎಂದು ಬಹುತೇಕ ಜನರು ಭಾವಿಸಿದ್ದಾರೆ. ಇದರ ಪ್ರಗತಿಯ ಬಗ್ಗೆ ಕಾಂಗ್ರೆಸ್‌ ಆತಂಕಗೊಂಡಿದೆ ಎಂದು ಟ್ವೀಟ್‌ ಮಾಡಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಸಚಿವ ಗೋಯೆಲ್‌, ನಮ್ಮ ಇಂಜಿನಿಯರುಗಳು, ತಂತ್ರಜ್ಞರು ಮತ್ತು ಕಾರ್ಮಿಕರ ಪ್ರಾಮಾಣಿಕತೆ ಹಾಗೂ ಪರಿಶ್ರಮದ ಮೇಲೆ ದಾಳಿ ನಡೆಸುತ್ತಿರುವ ನಿಮಗೆ ನಾಚಿಕೆಯಾಗಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next