ಮಂಗಳೂರು: ಮಂಗಳೂರು ಸೆಂಟ್ರಲ್- ಮಡಗಾಂವ್ ಮಧ್ಯೆ ವಂದೇಭಾರತ್ ರೈಲು ಖಾಲಿಯಾಗಿಯೇ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಕೋಯಿಕ್ಕೋಡ್ ವರೆಗೂ ವಿಸ್ತರಿಸಲು ರೈಲ್ವೇ ಇಲಾಖೆ ಮುಂದಾಗಿದೆ ಎನ್ನುವ ವಿಚಾರ ಬಯಲಾಗಿದೆ.
ಈ ರೈಲು ಹಾಲಿ ಇರುವಂತೆ ಸಂಚರಿಸಿದರೆ ಇಲಾಖೆಗೆ ನಷ್ಟ ಆಗುವುದರಿಂದ, ಈ ಭಾಗದ ಪ್ರಯಾಣಿಕರಿಗೂ ಯಾವುದೇ ಹೆಚ್ಚಿನ ಪ್ರಯೋಜನ ವಾಗದ ಕಾರಣ ಮುಂಬಯಿಗೆ ವಿಸ್ತರಿಸಬೇಕು ಎನ್ನುವ ಆಗ್ರಹ ಡಿ. 30ರಂದು ವಂದೇ ಭಾರತ್ ಚಾಲನೆ ಪಡೆದ ದಿನದಿಂದಲೂ ಕೇಳಿಬಂದಿತ್ತು.
ಸದ್ಯ ವಂದೇಭಾರತ್ ಖಾಲಿ ಓಡುತ್ತಿರುವ ಮಧ್ಯೆಯೇ ಕೇರಳದ ಸಂಸದ ಎಂ.ಕೆ. ರಾಘವನ್ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ಮಡಗಾಂವ್-ಮಂಗಳೂರು ವಂದೇಭಾರತ್ ರೈಲನ್ನು ಕೋಯಿಕ್ಕೋಡ್‌ಗೆ ವಿಸ್ತರಿಸಿದರೆ ಪ್ರವಾಸೋದ್ಯಮಕ್ಕೆ ಪ್ರಯೋಜನವಾಗಲಿದೆ ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ.
ಪ್ರಸ್ತುತ ಮಂಗಳೂರು ಸೆಂಟ್ರಲ್ ಮಡಗಾಂವ್ ಮಧ್ಯೆ ಸಂಚರಿಸುವ ವಂದೇಭಾರತ್ ರೈಲು ಖಾಲಿಯಾಗಿ ಓಡುತ್ತಿದ್ದು, ವಾರಾಂತ್ಯಗಳಲ್ಲಷ್ಟೇ ಸೀಟು ಭರ್ತಿಯಾಗುತ್ತಿತ್ತು. ರೈಲಿನ ಟಿಕೆಟ್ ದರಗಳೂ ದುಬಾರಿಯಾಗಿದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದು ಈ ರೈಲು ಬೇಗ ಬೇರೆ ಕಡೆಗೆ ವಿಸ್ತರಣೆಯಾಗಬಹುದು ಅಥವಾ ರದ್ದಾಗಬಹುದು ಎನ್ನುವ ಭೀತಿ ಆರಂಭದಿಂದಲೇ ವ್ಯಕ್ತವಾಗಿತ್ತು.
ಮತ್ತೂಂದು ಆಘಾತ?: ಇತ್ತೀಚೆಗಷ್ಟೇ ರೈಲ್ವೇ ಮಂಡಳಿಯು ಬೆಂಗಳೂರು- ಮಂಗಳೂರು- ಕಣ್ಣೂರು ರೈಲನ್ನು (16511/12) ಕೋಯಿಕ್ಕೋಡ್‌ಗೆ ವಿಸ್ತರಿಸಿತ್ತು. ಇದರಿಂದಾಗಿಯೇ ಟಿಕೆಟ್ ಲಭ್ಯತೆ ಕಡಿಮೆಯಾಗುವ ಭೀತಿ ಎದುರಿಸುತ್ತಿರುವ ಮಂಗಳೂರು ಭಾಗದ ಪ್ರಯಾಣಿಕರಿಗೆ ಈಗ ವಂದೇಭಾರತ್ ದಕ್ಷಿಣಾಭಿಮುಖವಾಗಿ ವಿಸ್ತರಣೆಯಾದರೆ ಮತ್ತೂಂದು ಹಿನ್ನಡೆಯಾಗಲಿದೆ.