ನವದೆಹಲಿ: ವೈಷ್ಣೋದೇವಿ ಸನ್ನಿಧಾನದ ಬಳಿಯ ಕಾಶ್ಮೀರದ ಕಾಟ್ರಾ ರೈಲು ನಿಲ್ದಾಣ ಹಾಗೂ ನವದೆಹಲಿ ರೈಲು ನಿಲ್ದಾಣದ ನಡುವೆ ನೂತನವಾಗಿ ಆರಂಭಿಸಲಾಗಿರುವ “ವಂದೇಭಾರತ್ ಎಕ್ಸ್‌ಪ್ರೆಸ್ ರೈಲು’ ಸಂಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.
ರೈಲ್ವೆ ಸಚಿವ ಪಿಯೂಶ್ ಗೋಯೆಲ್, ಪ್ರಧಾನಿ ಕಾರ್ಯಾಲಯದ ಸಚಿವರಾದ ಜಿತೇಂದ್ರ ಸಿಂಗ್ ಹಾಗೂ ಆರೋಗ್ಯ ಸಚಿವ ಹರ್ಷವರ್ಧನ್ ಕೂಡ ಉಪಸ್ಥಿತರಿದ್ದರು. ಈ ರೈಲಿನಿಂದಾಗಿ ದೆಹಲಿ-ಕಾಟ್ರಾ ನಡುವಿನ ಪ್ರಯಾಣಾವಧಿ 4 ಗಂಟೆ ಕಡಿತವಾಗಲಿದೆ.
ಇದು ದೇಶದ ಎರಡನೇ ವಂದೇ ಭಾರತ್ (ಟ್ರೈನ್ 18) ಎಕ್ಸ್‌ಪ್ರೆಸ್ ರೈಲು ಸೌಲಭ್ಯವಾಗಿದ್ದು, ದೆಹಲಿ-ವಾರಾಣಸಿ ನಡುವೆ ಮೊದಲ ವಂದೇ ಭಾರತ್ ರೈಲು ಸಂಚರಿಸುತ್ತಿದೆ.
ಅಭಿವೃದ್ಧಿಗೆ ಶ್ರೀಕಾರ: ರೈಲು ಸಂಚಾರ ಉದ್ಘಾಟಿಸಿ ಮಾತನಾಡಿದ ಶಾ, “”ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ದಶಕಗಳ ಕಾಲ ತಡೆಯೊಡ್ಡಿದ್ದ 370ನೇ ಕಲಂ ಅನ್ನು ರದ್ದು ಗೊಳಿಸಲಾಗಿತ್ತು. ಈಗ, ಆ ರಾಜ್ಯಕ್ಕೆ ವಂದೇ ಮಾತರಂ ರೈಲು ಸೌಲಭ್ಯ ನೀಡುವ ಮೂಲಕ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ.
ಮುಂದಿನ 10 ವರ್ಷಗಳೊಳಗೆ ಜಮ್ಮು ಕಾಶ್ಮೀರ ಪ್ರಾಂತ್ಯವನ್ನು ದೇಶದ ಅತ್ಯುತ್ತಮವಾಗಿ ಅಭಿವೃದ್ಧಿಗೊಂಡ ಪ್ರಾಂತ್ಯವನ್ನಾಗಿ ರೂಪಿಸಲಾ ಗುತ್ತದೆ” ಎಂದರು. ಗೋಯಲ್ ಮಾತನಾಡಿ, “”2022ರ ಆ. 15ರೊಳಗೆ ಕಾಶ್ಮೀರ ವಿವಿಧ ಪ್ರಾಂತ್ಯಗಳಿಂದ ಕನ್ಯಾಕುಮಾರಿವರೆಗೆ ರೈಲು ಸಂಪರ್ಕ ನೀಡಲಾಗುತ್ತದೆ” ಎಂದರು. ರೈಲು ಮಾರ್ಗದಲ್ಲಿ ಬರುವ ಕೆಲ ಸೂಕ್ಷ್ಮ ನಿಲ್ದಾಣ ಗಳಲ್ಲಿ ಕಮಾಂಡೋಗಳ ಭದ್ರತೆ ಒದಗಿಸಲಾಗುತ್ತದೆ.
ವೇಳಾಪಟ್ಟಿ: ನವದೆಹಲಿಯಿಂದ ಬೆಳಗ್ಗೆ 6 ಗಂಟೆಗೆ ಹೊರಡಲಿರುವ ರೈಲು ಮಧ್ಯಾಹ್ನ 2 ಗಂಟೆಗೆ ಕಾಟ್ರಾ ತಲುಪುತ್ತದೆ. ಮಾರ್ಗ ಮಧ್ಯೆ, ಅಂಬಾಲಾ ಕಂಟೋನ್ಮೆಂಟ್, ಲೂಧಿಯಾನಾ, ಜಮ್ಮು ತಾವಿ ನಿಲ್ದಾಣಗಳಲ್ಲಿ ತಲಾ 2 ನಿಮಿಷ ನಿಲ್ಲುತ್ತದೆ. ಮಧ್ಯಾಹ್ನ 3 ಗಂಟೆಗೆ ಕಾಟ್ರಾ ನಿಲ್ದಾಣದಿಂದ ಹೊರಟು ರಾತ್ರಿ 11 ಗಂಟೆಗೆ ದೆಹಲಿ ನಿಲ್ದಾಣ ತಲುಪುತ್ತದೆ. ಮಂಗಳವಾರ ಈ ಸೇವೆ ಇರುವುದಿಲ್ಲ.
ಏನಿದೆ ವಿಶೇಷತೆ?
ಈ ರೈಲಿನಲ್ಲಿ ಹಲವಾರು ವೈಶಿಷ್ಟéತೆಗಳನ್ನು ಅಳವಡಿಸಲಾಗಿದೆ. ಪ್ಲಾಸ್ಟಿಕ್ ಬಾಟಲ್ ಕ್ರಶರ್ ಮೆಷಿನ್‌ಗಳು, ಉಪಾಹಾರ ಸೇವೆನೆಗಾಗಿಯೇ ವಿಶೇಷವಾದ ಹಾಗೂ ವಿಶಾಲವಾದ ಸ್ಥಳ (ಪ್ಯಾಂಟ್ರಿ), ಡೀಪ್ ಫ್ರೀಜರ್, ರಿವಾಲ್ವಿಂಗ್ ಆಸನಗಳು ಮುಂತಾದ ವ್ಯವಸ್ಥೆಗಳಿವೆ.