ಹೊಸದಿಲ್ಲಿ: ಭಯೋತ್ಪಾದನೆಗೆ ಸಂಬಂಧಿ ಸರಕಾರವು ಶೂನ್ಯ ಸಹಿಷ್ಣು ನೀತಿ ಅನುಸರಿಸಿದ್ದು, ಪರಿಣಾಮ ದೇಶದಲ್ಲಿ ಉಗ್ರ ಕೃತ್ಯಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿಶನ್ ರೆಡ್ಡಿ ಮಂಗಳವಾರ ಮಾಹಿತಿ ನೀಡಿದ್ದಾರೆ.
ಲೋಕಸಭೆಯಲ್ಲಿ ಕಾನೂನುಬಾಹಿರ ಚಟು ವಟಿಕೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕವನ್ನು ಮಂಡಿಸಿದ ವೇಳೆ ಅವರು ಈ ವಿಚಾರ ತಿಳಿಸಿದ್ದಾರೆ. 2004-14ರ ಅವಧಿಯಲ್ಲಿ ಕೇವಲ 40 ಉಗ್ರ ಸಂಬಂಧಿ ಕೃತ್ಯಗಳು ಘಟಿಸಿವೆ. ಈ ಘಟನೆಗಳಲ್ಲಿ 883 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಶೇ.70ರಷ್ಟು ಇಳಿಕೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿಧ್ವಂಸಕ ಕೃತ್ಯಗಳ ಸಂಖ್ಯೆ ಶೇ.86ರಷ್ಟು ಇಳಿಕೆಯಾದರೆ, ಉಳಿದೆಡೆ ಶೇ.70ರಷ್ಟು ಇಳಿಕೆಯಾಗಿವೆ ಎಂದು ರೆಡ್ಡಿ ಹೇಳಿದ್ದಾರೆ.
ಅನುಮೋದನೆ: ಇದೇ ವೇಳೆ, ಪ್ರಧಾನಿ ಮೋದಿ ನೇತೃತ್ವದ ಸರಕಾರದ ಬಜೆಟ್‌ಗೆ ಮಂಗಳವಾರ ಸಂಸತ್‌ನಲ್ಲಿ ಅನುಮೋದನೆ ಸಿಕ್ಕಿದೆ.
ಅಧಿವೇಶನದ ಅವಧಿ 10 ದಿನ ವಿಸ್ತರಣೆ?: ಸಂಸತ್‌ನ ಹಾಲಿ ಅಧಿವೇಶನದ ಅವಧಿಯನ್ನು 10 ದಿನಗಳ ಕಾಲ ವಿಸ್ತರಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಧಿವೇಶನದ ಅವಧಿ ವಿಸ್ತರಣೆಗೆ ಸಜ್ಜಾಗಿರುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಪಕ್ಷದ ಸಂಸದರಿಗೆ ಮಂಗಳವಾರ ಸೂಚಿಸಿದ್ದಾರೆ. ಎಷ್ಟು ದಿನಗಳ ಕಾಲ ವಿಸ್ತರಣೆಯಾಗಲಿದೆ ಎಂಬ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರವಾಗಬೇಕಿದೆ ಎಂದು ಹೇಳಲಾಗಿದೆ.
ನ್ಯೂಸ್‌ಪ್ರಿಂಟ್ ಶುಲ್ಕ ರದ್ದು ಅಸಾಧ್ಯ
ನ್ಯೂಸ್‌ಪ್ರಿಂಟ್ ಮೇಲೆ ಹೇರಲಾಗಿರುವ ಶುಲ್ಕ ವನ್ನು ರದ್ದು ಮಾಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿರಾಕರಿಸಿ ದ್ದಾರೆ. ನ್ಯೂಸ್‌ಪ್ರಿಂಟ್‌ಗಳನ್ನು ಆಮದು ಮಾಡಿಕೊಳ್ಳುತ್ತಿರುವ ಕಾರಣ, ದೇಶೀಯ ನ್ಯೂಸ್‌ಪ್ರಿಂಟ್ ತಯಾರಕರಿಗೆ ಬೇಡಿಕೆಯೇ ಇಲ್ಲದಂತಾಗಿದೆ. ಈಗ ನ್ಯೂಸ್‌ಪ್ರಿಂಟ್ ಮೇಲೆ ಶೇ.10ರಷ್ಟು ಶುಲ್ಕ ವಿಧಿಸಿದ ಕಾರಣ, ದೇಶೀಯ ತಯಾರಕರಿಗೆ ನೆರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.